ವಿಜಯಪುರ: 52 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ವ್ಯಕ್ತಿ ಮತ್ತೆ ಸ್ಪರ್ಧೆ

By Kannadaprabha NewsFirst Published Apr 20, 2024, 5:26 PM IST
Highlights

ಚುನಾವಣೆಗಳು ಎಂದರೆ ಕೋಟಿ ಕೋಟಿ ಇದ್ದವರೇ ನಾ ಒಲ್ಲೆ ಎಂದು ಹಿಂದೆ ಸರಿಯುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ವಿಧಾನಸಭೆ, ಲೋಕಸಭೆ, ರಾಜ್ಯಸಭೆ ಸೇರಿದಂತೆ ಸಾರ್ವತ್ರಿಕ ಹಾಗೂ ಉಪ ಚುನಾವಣೆಗಳು ಸೇರಿದಂತೆ 52 ಬಾರಿ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, 52 ಬಾರಿಯೂ ಠೇವಣಿಯನ್ನೇ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿದ್ದಾನೆ.

ಶಶಿಕಾಂತ ಮೆಂಡೆಗಾರ

  ವಿಜಯಪುರ :  ಚುನಾವಣೆಗಳು ಎಂದರೆ ಕೋಟಿ ಕೋಟಿ ಇದ್ದವರೇ ನಾ ಒಲ್ಲೆ ಎಂದು ಹಿಂದೆ ಸರಿಯುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ವಿಧಾನಸಭೆ, ಲೋಕಸಭೆ, ರಾಜ್ಯಸಭೆ ಸೇರಿದಂತೆ ಸಾರ್ವತ್ರಿಕ ಹಾಗೂ ಉಪ ಚುನಾವಣೆಗಳು ಸೇರಿದಂತೆ 52 ಬಾರಿ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, 52 ಬಾರಿಯೂ ಠೇವಣಿಯನ್ನೇ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿದ್ದಾನೆ.

ಇಂತಹ ವಿಚಿತ್ರ ವ್ಯಕ್ತಿ ಇರುವುದು ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ. ಇಲ್ಲಿನ ನಿವಾಸಿ ದೀಪಕ ಕಟಕದೊಂಡ ಊರ್ಫ್ ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ. ಇವರಿಗೆ ಇದೀಗ 36 ವರ್ಷ ವಯಸ್ಸು, ಅಷ್ಟರಲ್ಲಿಯೇ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ವಿಧಾನಸಭೆ, ಲೋಕಸಭೆ, ರಾಜ್ಯಸಭೆ ಸೇರಿದಂತೆ ಸಾರ್ವತ್ರಿಕ ಹಾಗೂ ಉಪ ಚುನಾವಣೆಗಳು ಸೇರಿ 52 ಬಾರಿ ಸ್ಪರ್ಧಿಸಿದ್ದಾರೆ. ಇದೀಗ ವಿಜಯಪುರ ಹಾಗೂ ಸೊಲ್ಲಾಪುರ ಎಂಪಿ ಕ್ಷೇತ್ರಗಳಿಗೂ ಸ್ಪರ್ಧೆ ಮಾಡಿ ಸಲ್ಲಿಕೆ ಮಾಡಿದ್ದಾರೆ. ಒಟ್ಟಾರೆಯಾಗಿ 54 ಬಾರಿ ಚುನಾವಣೆಗೆ ಸ್ಪರ್ಧಿಸಿದ ಕೀರ್ತಿ ಇವರದ್ದಾಗಿದೆ. ಸಾಕಷ್ಟು ಬಾರಿ ಪಕ್ಷೇತರನಾಗಿ ಸ್ಪರ್ಧಿಸಿರುವ ಇವರು ಈ ಬಾರಿ ಹಿಂದುಸ್ತಾನ ಜನತಾ ಪಾರ್ಟಿಯಿಂದ ವಿಜಯಪುರದಿಂದ ಕಣಕ್ಕಿಳಿದಿದ್ದಾರೆ.

 ಯಾವಾಗಿಂದ ಎಲ್ಲೆಲ್ಲಿ ಸ್ಪರ್ಧೆ? 

25ನೇ ವಯಸ್ಸಿನಿಂದಲೇ ಸಾರ್ವತ್ರಿಕ ಹಾಗೂ ಉಪ ಚುನಾವಣೆ ಸೇರಿದಂತೆ ನಡೆಯುವ ಪ್ರತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಇವರು ವಿಜಯಪುರದ ನಾಗಠಾಣ, ಇಂಡಿ, ರಾಜ್ಯದ ಬೇರೆ ಬೇರೆ ಕ್ಷೇತ್ರಗಳಾದ ಗೋಕಾಕ, ಯಶವಂತಪುರ, ಗಂಗಾವತಿ ಸೇರಿದಂತೆ ಹಲವೆಡೆ ಅಷ್ಟೇ ಅಲ್ಲದೇ ಹೊರ ರಾಜ್ಯದ ತಿರುಪತಿ, ಮಹಾರಾಷ್ಟ್ರ, ಗೋವಾ, ಗುಜರಾತ, ಆಂಧ್ರಪ್ರದೇಶ, ಉತ್ತರಪ್ರದೇಶ, ದೆಹಲಿ ಗಳಲ್ಲೂ ಸ್ಪರ್ಧೆ ಮಾಡಿದ್ದಾರೆ.

 ಘಟಾನುಘಟಿಗಳ ವಿರುದ್ಧ ಸ್ಪರ್ಧೆ 

ಗಂಗಾವತಿಯಲ್ಲಿ ಗಾಲಿ ಜನಾರ್ಧನರೆಡ್ಡಿ, ಗೋಕಾಕನಲ್ಲಿ ರಮೇಶ ಜಾರಕಿಹೊಳಿ, ಯಶವಂತಪುರದಲ್ಲಿ ಎಸ್.ಟಿ.ಸೋಮಶೇಖರ ಸೇರಿದಂತೆ ಹಲವು ಘಟಾನುಘಟಿಗಳ ವಿರುದ್ಧ ಸ್ಪರ್ಧಿಸಿರುವ ಇವರಿಗೆ ಇದುವರೆಗೂ ಠೇವಣಿ ಮೊತ್ತವೂ ಹಿಂದಿರುಗಿ ಬಂದಿಲ್ಲ.

 ರಾಜಕೀಯ ಆಯ್ಕೆ ಉದ್ದೇಶ 

ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ನೀರಿನ ಸಮಸ್ಯೆಗಳಿವೆ. ಸರಿಯಾಗಿ ವೈದ್ಯಕೀಯ ಸೇವೆಗಳಿಲ್ಲ. ಇಂಡಿ ಜಿಲ್ಲೆ ಆಗಬೇಕು ಎಂಬ ಕೂಗು, ಜಿಲ್ಲಾದ್ಯಂತ ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆಗಳ ಸಮಸ್ಯೆ, ಮೆಡಿಕಲ್ ಕಾಲೇಜು ಬರಬೇಕಿದೆ. ಸುಸಜ್ಜಿತ ಆಸ್ಪತ್ರೆ ಬೇಕಿದೆ. ಕಾಲುವೆಗಳ ಮೂಲಕ ನೀರಾವರಿ ಸೇವೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದಾಗಿ ತಾವೇ ರಾಜಕೀಯಕ್ಕೆ ಬಂದು ಅವುಗಳನ್ನು ನೀಗಿಸು ಉದ್ದೇಶದಿಂದ ದೀಪಕ ಕಟಕದೊಂಡ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದಾರಂತೆ.

 ಪತ್ನಿ ಕವಿತಾ ಸಹ 5ನೇ ಬಾರಿ ಸ್ಪರ್ಧೆ 

ದೀಪಕ್ ಕಟಕದೊಂಡ ಅವರ ಪತ್ನಿ ಕವಿತಾ ಸಹ ಇಂಡಿ, ನಾಗಠಾಣ, ವಿಜಯಪುರ ಸೇರಿದಂತೆ ಇದುವರೆಗೂ ನಾಲ್ಕುಬಾರಿ ಸ್ಪರ್ಧೆ ಮಾಡಿದ್ದಾರೆ. ಇದೀಗ ವಿಜಯಪುರದಿಂದ ಸೇರಿ ಐದನೇ ಬಾರಿ ಸ್ಪರ್ಧೆಗೆ ಇಳಿದಿದ್ದಾರೆ.

ಇದುವರೆಗೂ ಜನರು ದೊಡ್ಡ ದೊಡ್ಡ ಪಕ್ಷಗಳಿಗೆ ಮಣೆ ಹಾಕುತ್ತಿದ್ದಾರೆ. ಇದರಿಂದಾಗಿ ಅವರಿಗೆ ಹಣದ ಮದ ಬಂದಿದ್ದು, ಅವರು ಯಾವುದು ಅಭಿವೃದ್ಧಿ ಮಾಡುತ್ತಿಲ್ಲ. ಹೀಗಾಗಿ ಜನರು ರಾಷ್ಟ್ರೀಯ ಪಕ್ಷಗಳ ಬೆನ್ನು ಹತ್ತಬೇಡಿ, ನಮ್ಮಂತಹ ಸ್ಥಳೀಯರಿಗೂ ಅವಕಾಶ ಕೊಟ್ಟರೆ, ಅಭಿವೃದ್ಧಿ ಮಾಡಲು ಸಹಕಾರಿಯಾಗುತ್ತದೆ. ಹೀಗಾಗಿ ಎಲ್ಲ ಚುನಾವಣೆಗಳಲ್ಲೂ ಸ್ಪರ್ಧೆ ಮಾಡುತ್ತಿದ್ದೇನೆ.

-ದೀಪಕ ಕಟಕದೊಂಡ, ಲೋಕಸಭೆಗೆ ಸ್ಪರ್ಧಿಸಿದವರು.

52 ಬಾರಿಯೂ ಠೇವಣಿಯೇ ಮರಳಿಲ್ಲ

ದೀಪಕ ಕಟಕದೊಂಡ ಊರ್ಫ್ ಶ್ರೀವೆಂಕಟೇಶ್ವರ ಮಹಾಸ್ವಾಮೀಜಿ ಅವರು ಬಿಕಾಂ ಪದವೀಧರರಾಗಿದ್ದಾರೆ. ಉಪ ಜೀವನಕ್ಕೆ ಕೃಷಿಯೇ ಆಧಾರವಾಗಿದೆ. ಇಷ್ಟಾಗಿಯೂ ದೀಪಕ ಅವರು 52 ಬಾರಿ ಚುನಾವಣೆಯಗಳಲ್ಲಿ ಸ್ಪರ್ಧೆ ಮಾಡುವ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡಲು ಹಣ ಬೇಕಿಲ್ಲ ಎಂದು ತೋರಿಸಿದ್ದಾರೆ. 54 ಬಾರಿಯಲ್ಲಿ ಒಂದು ಬಾರಿಯೂ ಅದೃಷ್ಟ ಇವರ ಕೈ ಹಿಡಿದಿಲ್ಲ. ಠೇವಣಿಯೂ ಮರಳಿ ಬಂದಿಲ್ಲ. ಆದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಬಿಟ್ಟಿಲ್ಲ ಇವರು.

click me!