
ಬಿ.ಲಕ್ಷ್ಮಿಕಾಂತಸಾ ಹಗರಿಬೊಮ್ಮನಹಳ್ಳಿ
ವಿಜಯನಗರ: ಸ್ವಾತಂತ್ರ್ಯ ಪೂರ್ವದಿಂದಲೂ ಅಸ್ತಿತ್ವದಲ್ಲಿರುವ ಪಟ್ಟಣದ ರೈಲು ನಿಲ್ದಾಣ ಇಂದಿಗೂ ಕನಿಷ್ಠ ಸೌಲಭ್ಯವಿಲ್ಲದೆ ಪ್ರಯಾಣಿಕರ ಪಾಲಿಗೆ ನರಕಯಾತನೆಯ ತಾಣವಾಗಿದೆ.
ಪ್ರತಿಷ್ಠಿತ ಮೈಸೂರು ಅಜ್ಮೇರ್ ಸೇರಿದಂತೆ ೬ ಪ್ರಯಾಣಿಕರ ರೈಲು ಹಾಗೂ ಹತ್ತಾರು ಸರಕು ಸಾಗಾಣಿಕೆ ರೈಲುಗಳ ಸಂಚಾರವಿರುವ ಹಾಗೂ ಇಲಾಖೆಗೆ ಸಾಕಷ್ಟು ಆದಾಯ ತಂದು ಕೊಡುವ ಈ ನಿಲ್ದಾಣದಲ್ಲಿ ಪೂರಕ ಸೌಲಭ್ಯಗಳಿಲ್ಲದೇ ಇರುವ ಪರಿಣಾಮ ಒಂದೇ ಪ್ಲಾಟ್‌ಫಾರ್ಮ, ಸಮಸ್ಯೆಗಳು ಹತ್ತಾರು ಎನ್ನುವಂತಾಗಿದೆ.
ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಶುದ್ಧ ಕುಡಿವ ನೀರಿಲ್ಲ, ಶೌಚಾಲಯವಿಲ್ಲ, ನಿಲ್ದಾಣದ ಕಾರ್ಯ ನಿರ್ವಹಿಸುವ ಕಚೇರಿಯ ಮುಂದೆ ತಾತ್ಕಾಲಿಕವಾಗಿ ನಿರ್ಮಿಸಲಾದ ಶೆಡ್ ಮಾದರಿಯ ನೆರಳು ಹೊರತು ಪಡಿಸಿದರೆ ನಿಲ್ದಾಣದ ಹಲವೆಡೆ ಇರುವ ಯಾವುದೇ ಆಸನಗಳಿಗೆ ನೆರಳಿನ ವ್ಯವಸ್ಥೆ ಇಲ್ಲವೇ ಇಲ್ಲ ಎನ್ನುವಂತಾಗಿದೆ.
ರೈಲು ನಿಲ್ದಾಣವೀಗ ಅಂಗವಿಕಲ, ಭಿಕ್ಷುಕರ ಹಾಗೂ ಮಾನಸಿಕ ಅಸ್ವಸ್ಥರ ತಂಗುದಾಣವಾಗಿದೆ. ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಮತ್ತು ದಿನನಿತ್ಯ ರೈಲ್ವೆಯನ್ನೇ ಅವಲಂಬಿಸಿರುವ ಕಾರ್ಮಿಕರಿಗೆ ನಿಲ್ದಾಣದಲ್ಲಿ ಸೌಲಭ್ಯ ಕೊರತೆ ತೀವ್ರವಾಗಿ ಬಾಧಿಸುತ್ತಿದೆ. ಬಿಸಿಲು ಹಾಗೂ ಮಳೆಗಾಲದಲ್ಲಿ ಪ್ಲಾಟ್ ಫಾರ್ಮ್‌ನಲ್ಲಿ ನಿಂತು ರೈಲು ಕಾಯುವುದು ಪ್ರಯಾಣಿಕರ ಪಾಲಿಗೆ ಯಮಯಾತನೆಯಾಗಿದೆ.
ಮುಖ್ಯ ರಸ್ತೆಯಿಂದ ನಿಲ್ದಾಣದತ್ತ ತೆರಳಲು ಇರುವ ರಸ್ತೆ ತಗ್ಗುಗಂಡಿಗಳಿಂದ ಕೂಡಿದೆ. ರ‍್ಯಾಂಪ್ ಇಲ್ಲದ ನಿಲ್ದಾಣಕ್ಕೆ ಪ್ರವೇಶ ಮತ್ತು ನಿರ್ಗಮನದ ವ್ಯವಸ್ಥೆ ಸೂಕ್ತವಾಗಿಲ್ಲ. ಅಂಗವಿಕಲರು ಪ್ಲಾಟ್ ಫಾರಂ ತಲುಪಲು ಹರಸಾಹಸ ಪಡಬೇಕಾಗಿದೆ. ಪಟ್ಟಣದ ರಾಮನಗರ, ರೈತರ ಓಣಿ, ಕುರುದಗಡ್ಡಿ ಹಾಗೂ ಪೂರ್ವ ದಿಕ್ಕಿನಿಂದ ಆಗಮಿಸುವ ಪ್ರಯಾಣಿಕರು ನೇರವಾಗಿ ಪ್ಲಾಟ್ ಫಾರ್ಮನೊಳಗೆ ಪ್ರವೇಶಿಸಲು ಅನುಕೂಲವಾಗಲು ಇಲಾಖೆ ಇವತ್ತಿಗೂ ಸ್ಕೈ ವಾಕ್ ಬ್ರಿಜ್ ನಿರ್ಮಿಸಲು ಮುಂದಾಗುತ್ತಿಲ್ಲ ಎಂದು ರೈಲು ನಿಲ್ದಾಣದ ಸೌಲಭ್ಯಗಳಿಗಾಗಿ ಹೋರಾಡುತ್ತಿರುವ ಸಂಚಿ ಶಿವಕುಮಾರ್ ಬೇಸರಿಸುತ್ತಾರೆ.
ಪ್ರಮುಖವಾಗಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸುವ ಜತೆಗೆ ಶೌಚಾಲಯಗಳಿಲ್ಲದೆ ಮಹಿಳೆಯರಿಗೆ ಉಂಟಾಗುತ್ತಿರುವ ಮುಜುಗರ ತಪ್ಪಿಸಬೇಕಿದೆ ಎಂದು ಆರ್. ರಾಜೇಶ್ವರಿ ಅಭಿಪ್ರಾಯಪಡುತ್ತಾರೆ.
ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ
ರೈಲ್ವೇ ನಿಲ್ದಾಣ ನಿರ್ಮಾಣವಾಗಿದೆ ಆದರೆ, ನಿಗದಿತ ಮಾರ್ಗಸೂಚಿಯಂತೆ ಸರಿಯಾದ ಉದ್ದಗಲದ ಪ್ಲಾಟ್‌ಫಾರ್ಮ್ ನಿರ್ಮಾಣವಾಗಿಲ್ಲ ಎಂಬ ಕೊರತೆ ಇದೆ. ಯಶವಂತಪುರ- ವಿಜಯಪುರ ಹಾಗೂ ವಿಜಯಪುರ–ಯಶವಂತಪುರ ರೈಲಿನ ಜನರಲ್ ಬೋಗಿಗಳಲ್ಲಿ ಹತ್ತುವ ಹಾಗೂ ಇಳಿಯುವ ಪ್ರಯಾಣಿಕರಿಗೆ ಪೂರಕವಾಗಿ ಪ್ಲಾಟ್‌ಫಾರ್ಮ ನಿರ್ಮಾಣವಾಗಿಲ್ಲ. ಹೆಚ್ಚಿನ ಸಂಖ್ಯೆಯ ರೈಲು ಸಂಚಾರಕ್ಕೆ ಪೂರಕವಾಗಿ ಪ್ಲಾಟ್‌ಫಾರ್ಮ್ ಸಂಖ್ಯೆ, ಬೋಗಿ ನಿಲ್ಲುವ ಗುರುತು, ಲೈಟಿಂಗ್ ವ್ಯವಸ್ಥೆಯಾಗಿಲ್ಲ.
ನಿಲ್ದಾಣದಲ್ಲಿ ಪುರುಷ ಹಾಗೂ ಸ್ತ್ರೀಯರಿಗೆ ಪ್ರತ್ಯೇಕ ಶೌಚಾಲಯಗಳ ಅಗತ್ಯವಿದೆ, ಮೂಲ ಸೌಲಭ್ಯ ಕೋರಿ ರೈಲ್ವೇ ಹೋರಾಟ ಸಮಿತಿ ಪದಾಧಿಕಾರಿ ಸಂಸದರಿಗೆ ಮತ್ತು ಇಲಾಖೆ ಜನರಲ್ ಮ್ಯಾನೇಜರ್‌ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪ್ರಯಾಣಿಕರ ಸುರಕ್ಷತೆ ಹಿನ್ನೆಲೆ ಕನಿಷ್ಠ ಒಬ್ಬ ರೈಲ್ವೆ ಪೊಲೀಸ್ ಸಿಬ್ಬಂದಿ ನೇಮಕವಾಗಬೇಕಿದೆ. ಬೆಳಗಿನ ಜಾವ ಮತ್ತು ರಾತ್ರಿ ರೈಲು ಸಂಚಾರದ ಹಿನ್ನೆಲೆ ಪ್ರಯಾಣಿಕರ ಸುರಕ್ಷತೆಗೆ ಪೂರಕವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕಿದೆ.
ಕೂಡಲೇ ನಿಲ್ದಾಣಕ್ಕೆ ಅಗತ್ಯವಿರುವ ಸೂಚನಾ ಫಲಕ, ರೈಲು ವೇಳಾಪಟ್ಟಿ ಬೋರ್ಡ್ , ಡಿಜಿಟಲ್ ಅನೌನ್ಸ್ಮೆಂಟ್ ವ್ಯವಸ್ಥೆ, ಟಿಕೆಟ್ ವ್ಯವಸ್ಥೆ, ಇ-ಟಿಕೆಟ್ ಯಂತ್ರ, ಹ್ಯಾಂಡ್‌ವಾಶ್ ವ್ಯವಸ್ಥೆ, ಮಹಿಳೆಯರಿಗೆ ಪ್ರತ್ಯೇಕ ವೇಟಿಂಗ್ ರೂಮ್, ದೀರ್ಘಕಾಲ ಕಾಯುವ ಪ್ರಯಾಣಿಕರಿಗೆ ವಿಶ್ರಾಂತಿ ಕೊಠಡಿ, ಆಟೋ, ಟ್ಯಾಕ್ಸಿ ನಿಲ್ದಾಣ, ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.