ವಿಕ್ಟೋರಿಯಾ ಹಳೆ ಆಸ್ಪತ್ರೆ ಇನ್ಮುಂದೆ ‘ಹೆಲ್ತ್‌ ಕೇರ್ ಮ್ಯೂಸಿಯಂ’: ಅಶ್ವತ್ಥನಾರಾಯಣ

By Kannadaprabha NewsFirst Published Feb 5, 2020, 8:29 AM IST
Highlights

ವಿಕ್ಟೋರಿಯಾ ಆಸ್ಪತ್ರೇಲಿ ‘ಹೆಲ್ತ್‌ ಮ್ಯೂಸಿಯಂ’|1 ಸಾವಿರ ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣದ ಬಳಿಕ ಹಳೆ ಕಟ್ಟಡದಲ್ಲಿ ಮ್ಯೂಸಿಯಂ ನಿರ್ಮಾಣ: ಅಶ್ವತ್ಥನಾರಾಯಣ| ಕೊರೋನಾ ವೈರಸ್‌ಗೆ ಆತಂಕ ಬೇಡ| ರೋಗ ಹರಡದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ| 

ಬೆಂಗಳೂರು(ಫೆ.05): ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಸಾವಿರ ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣವಾದ ಬಳಿಕ ಹಳೆಯ ಕಟ್ಟಡವನ್ನು ’ಹೆಲ್ತ್‌ ಕೇರ್‌ ಮ್ಯೂಸಿಯಂ’ ಆಗಿ ಪರಿವರ್ತಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ವಿಕ್ಟೋರಿಯಾ ಆಸ್ಪತ್ರೆ ಹಾಗೂ ಕಿದ್ವಾಯಿ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಹೊಸ ಕಟ್ಟಡದಲ್ಲಿ ಸೇವೆ ಆರಂಭಿಸಿದ ನಂತರ ವಿಕ್ಟೋರಿಯಾ ಆಸ್ಪತ್ರೆಯ ಹಳೆಯ ಕಲ್ಲು ಕಟ್ಟಡವನ್ನು ‘ಹೆಲ್ತ್‌ ಕೇರ್‌ ಮ್ಯೂಸಿಯಂ’ ಆಗಿ ಪರಿರ್ವತಿಸಲಾಗುವುದು. ವಸ್ತು ಸಂಗ್ರಹಾಲಯದಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಚಿತ್ರಣ ಕಟ್ಟಿ ಕೊಡಲಾಗುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಿಂದಿನ ವೈದ್ಯಕೀಯ ತಂತ್ರಜ್ಞಾನ ಹಾಗೂ ಮುಂದಿನ ಆವಿಷ್ಕಾರಗಳ ಕುರಿತ ಮಾಹಿತಿ ದೊರೆಯಲಿದೆ. ವೈದ್ಯ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ ಎಂದರು.ವಿಕ್ಟೋರಿಯಾ ಆಸ್ಪತ್ರೆಯ ಬ್ಲಡ್‌ ಬ್ಯಾಂಕ್‌ಗೆ ಭೇಟಿ ನೀಡಿದ ಸಚಿವರು, ಬೋರ್ಡ್‌ ಸೇರಿದಂತೆ ಕೆಲವು ಪೀಠೋಪಕರಣಗಳನ್ನು ಬದಲಾಯಿಸುವಂತೆ ಸೂಚಿಸಿದರು. ನಂತರ ವಾರ್ಡ್‌ಗಳಿಗೆ ತೆರಳಿ ರೋಗಿಗಳ ಕುಂದುಕೊರತೆಗಳನ್ನು ವಿಚಾರಿಸಿದರು.

ಸೇವೆ ಮೇಲ್ದರ್ಜೆಗೇರಿಸಿ:

ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಸೇವೆಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡಲಾಗುವುದು. ರೋಗಿಗಳ ನೋಂದಣಿ ವ್ಯವಸ್ಥೆ ಹಾಗೂ ರೋಗ ಪತ್ತೆಗೆ ಮಾಡುವ ಮಾದರಿ ಸಂಗ್ರಹಣೆ ವಿಧಾನವನ್ನು ಸುಧಾರಿಸುವ ಜೊತೆಗೆ ನರ್ಸಿಂಗ್‌ ಬ್ಲಾಕ್‌ ನಿರ್ಮಿಸಲು ಸೂಚಿಸಿದರು.

ಕೊರೋನಾ ವೈರಸ್‌ಗೆ ಆತಂಕ ಬೇಡ:

ಕೊರೋನಾ ವೈರಸ್‌ ಸೋಂಕಿನ ಕುರಿತು ತಿಳಿದುಕೊಳ್ಳುವುದಕ್ಕಾಗಿ ಚೀನಾದಿಂದ ಬಂದ ಪ್ರವಾಸಿಗರನ್ನು ವಿಮಾನ ನಿಲ್ದಾಣದಲ್ಲಿಯೇ ತಪಾಸಣೆ ಮಾಡಲಾಗುತ್ತಿದೆ. ರೋಗದ ಶಂಕೆ ಕಂಡುಬಂದವರನ್ನು ರಾಜೀವ್‌ ಗಾಂಧಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ತಪಾಸಣೆ ನಡೆಸಲಾಗುತ್ತಿದೆ. ರೋಗಿಗಳು ಅಲ್ಲಿ ಹೆಚ್ಚು ದಿನ ಇರಬೇಕಾದ ಕಾರಣ, ಅಗತ್ಯ ಸೌಕರ್ಯ ಕಲ್ಪಿಸಲು ಸೂಚನೆ ನೀಡಲಾಗಿದೆ. ರೋಗ ಹರಡದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಯಾವುದೇ ರೀತಿಯಲ್ಲಿ ನಾಗರಿಕರು ಆತಂಕಪಡಬೇಕಿಲ್ಲ ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ

ವೈದ್ಯರನ್ನು ನೋಡಿದ ಕೂಡಲೇ ರೋಗಿಗೆ ಸಕಾರಾತ್ಮಕ ಮನೋಭಾವ ಬರಬೇಕು. ಹೀಗಾಗಿ, ವೈದ್ಯ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಿಸ್ತನ್ನು ಪಾಲಿಸಬೇಕು ಎಂದು ಸ್ವತಃ ವೈದ್ಯರಾಗಿರುವ ಸಚಿವ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಶಿಸ್ತಿನ ಪಾಠ ಹೇಳಿದರು.

ಶೇವಿಂಗ್‌ ಮಾಡುವುದು, ಬಟ್ಟೆತೊಡುವುದು, ಶೂ ಧರಿಸುವುದು, ಮಾತನಾಡುವ ಶೈಲಿ ಹೇಗಿರಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸಕಾರಾತ್ಮಕ ಮನೋಭಾವದಿಂದ ಹಾಗೂ ಪ್ರೀತಿಯಿಂದ ರೋಗಿಗಳನ್ನು ಮಾತನಾಡಿಸಿದಾಗ ರೋಗಿಗಳು ವೈದ್ಯರನ್ನು ನೋಡುವ ಮನಸ್ಥಿತಿ ಬದಲಾಗಲಿದೆ ಎಂದು ಹೇಳಿದರು.
 

click me!