
ಉತ್ತರ ಕನ್ನಡ (ಆ.31): ಮನೆಯಲ್ಲಿ ಎಂದಿನಂತೆ ಊಟ ಮಾಡುತ್ತಿದ್ದಾಗ ಅನ್ನದ ಅಗಳು ಗಂಟಲಿನಲ್ಲಿ ಸಿಲುಕಿದ ಕಾರಣದಿಂದ ಉಸಿರುಗಟ್ಟಿ ಯುವಕನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾದಲ್ಲಿ ನಡೆದಿದೆ.
ಮೃತ ದುರ್ದೈವಿ ಯುವಕನನ್ನು ಬಿಣಗಾ ಮಾಳಸವಾಡ ನಿವಾಸಿ, 38 ವರ್ಷದ ಅಮಿತ್ ಮಾಳಸೇರ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಕಾರು ಚಾಲಕರಾಗಿ ಜೀವನ ಸಾಗಿಸುತ್ತಿದ್ದ ಅಮಿತ್, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವೈದ್ಯರಿಂದ ಚಿಕಿತ್ಸೆ ಸಹ ಪಡೆಯುತ್ತಿದ್ದರು. ಇಂದು ಮಧ್ಯಾಹ್ನ ತಮ್ಮ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಅಮಿತ್ ಊಟ ಮಾಡುವಾಗ ಅನ್ನದ ಅಗಳು ಗಂಟಲಿನಲ್ಲಿ ಸಿಲುಕಿ ತೀವ್ರ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ತಕ್ಷಣವೇ ಮನೆಯವರು ನೀರು ಕುಡಿಸಲು ಪ್ರಯತ್ನಿಸಿದರೂ, ಅದು ಫಲಕಾರಿಯಾಗದೆ ಅಮಿತ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಅವರನ್ನು ಕಾರವಾರದ ಕ್ರಿಮ್ಸ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ವೈದ್ಯರು ಪರೀಕ್ಷಿಸಿದಾಗ ಅಮಿತ್ ಈಗಾಗಲೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು.
ಈ ಘಟನೆಗೆ ಸಂಬಂಧಿಸಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಈ ದುರಂತ ಘಟನೆಯು ಕುಟುಂಬಸ್ಥರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.