
ಮುಂಡಗೋಡ: ಸೋಮವಾರ ಪಟ್ಟಣದ ಸುತ್ತಮುತ್ತ ಪ್ರದೇಶದಲ್ಲಿ ನಿರಂತರವಾಗಿ ಪೈಟರ್ ಜೆಟ್‌ಗಳು ಹಾರಾಟ ನಡೆಸಿದ್ದರಿಂದ ಪಟ್ಟಣ ಸೇರಿದಂತೆ ತಾಲೂಕಿನ ಜನರಲ್ಲಿ ತೀವ್ರ ಗೊಂದಲ ಸೃಷ್ಟಿಸಿತು. ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ಪೈಟರ್ ಜೆಟ್‌ಗಳು ಹಾರಾಟ ನಡೆಸಿದವು. ವಿಮಾನ ಹಾಗೂ ಹೆಲಿಕಾಪ್ಟರ್‌ಗಳು ಎತ್ತರ ಪ್ರದೇಶದಲ್ಲಿ ಹಾರಾಟ ನಡೆಸುವುದು ಸಾಮಾನ್ಯ. ಆದರೆ ಈ ಜೆಟ್‌ಗಳು ದೊಡ್ಡದಾಗಿ ಶಬ್ದ ಮಾಡುತ್ತ ಕೆಳಮಟ್ಟದಲ್ಲಿ ಹಾದು ಹೋಗುತ್ತಿದ್ದವು. ಮನೆಯ ಮೇಲೆ ಏನೋ ಶಬ್ದ ಬರುತ್ತಿದೆ ಎಂದು ಹೊರಗೆ ಬಂದು ಮೇಲೆ ನೋಡುವಷ್ಟರಲ್ಲಿ ಕಣ್ಮರೆಯಾಗುತ್ತಿದ್ದವು. ಸುಮಾರು ೨-೩ ಬಾರಿ ಈ ರೀತಿ ಹಾರಾಟ ನಡೆಸಿದ್ದರಿಂದ ಜನರಲ್ಲಿ ಕುತೂಹಲ ಮೂಡಿತು. ಈ ಬಗ್ಗೆ ಪಟ್ಟಣದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದು ಬಳಿಕ ಕೇಂದ್ರ ಸರ್ಕಾರದ ವೈಜ್ಞಾನಿಕ ಸರ್ವೇ ಕಾರ್ಯನಿಮಿತ್ತ ಜೆಟ್ ಹಾರಾಟ ನಡೆಸಿದ್ದು ಎಂಬ ಮಾಹಿತಿ ತಿಳಿಯಿತು. ಬಳಿಕ ಜನರು ನಿಟ್ಟುಸಿರು ಬಿಟ್ಟರು. ಒಟ್ಟಾರೆ ಈ ಪೈಟರ್ ಜೆಟ್‌ಗಳ ಹಾರಾಟ ಪಟ್ಟಣದ ಜನರಲ್ಲಿ ಕೆಲ ಕಾಲ ಭಯದ ವಾತಾವರಣ ನಿರ್ಮಾಣ ಮಾಡಿದ್ದಂತೂ ಸುಳ್ಳಲ್ಲ.
ಬೆಂಗಳೂರು: ಬೆಂಗಳೂರಿನಿಂದ ಚೆನ್ನೈಗೆ ತೆರಳುವುದಕ್ಕೆ ಅಣಿಯಾಗಿದ್ದ ಇಂಡಿಗೋ ವಿಮಾನವು ರನ್ ವೇ ಕಡೆಗೆ ಪ್ರಯಾಣಿಸುತ್ತಿದ್ದಾಗ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಕೂಡಲೇ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ಟರ್ಮಿನಲ್‌ಗೆ ಸ್ಥಳಾಂತರಿಸಲಾಯಿತು. ಈ ಬಗ್ಗೆ ಇಂಡಿಗೋ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ‘ಬೆಂಗಳೂರಿನಿಂದ ಚೆನ್ನೈಗೆ ಹೊರಟಿದ್ದ 6E6017 ಇಂಡಿಗೋ ವಿಮಾನವು ರನ್‌ವೇನಲ್ಲಿ ಹಾರುವುದಕ್ಕೆ ಸಿದ್ಧವಾಗುತ್ತಿದ್ದಾಗ ಹೊಗೆ ಕಾಣಿಸಿಕೊಂಡಿದೆ. ಹೀಗಾಗಿ ಕೂಡಲೇ ಸುರಕ್ಷತೆ ದೃಷ್ಟಿಯಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಟರ್ಮಿನಲ್‌ಗೆ ಸ್ಥಳಾಂತರಿಸಲಾಯಿತು. ಆ ಬಳಿಕ ಅವರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ’ ಎಂದಿದೆ.