265 ಎಕರೆ ಭೂಮಿ ಕೊಟ್ಟಿದ್ದೇವೆ, ನಮಗೇಕೆ ನೀರಿಲ್ಲ? ಕಾಲುವೆಗೆ ಇಳಿದು ಗ್ರಾಮಸ್ಥರ ಆಕ್ರೋಶ

Published : Sep 09, 2026, 09:30 AM IST
Bhadra

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆಗೆ 265 ಎಕರೆ ಭೂಮಿ ನೀಡಿದ ಚಿಕ್ಕಯಗಟಿ ಗ್ರಾಮಸ್ಥರು, ತಮ್ಮ ಕೆರೆಗಳಿಗೆ ನೀರು ಹರಿಸದೆ ಕಾಲುವೆ ಮುಂದುವರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ಮೊದಲು ನೀರು ನೀಡಬೇಕೆಂದು ಆಗ್ರಹಿಸಿ ಕಾಲುವೆಗೆ ಇಳಿದು ಪ್ರತಿಭಟನೆ ನಡೆಸಿದ್ದು, ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ.

ಎನ್‌.ವಿಶ್ವನಾಥ್‌ ಶ್ರೀರಾಂಪುರ

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ 265 ಎಕರೆ ಭೂಮಿ ಕೊಟ್ಟಿದ್ದೇವೆ. ನಮಗೇಕೆ ನೀರಿಲ್ಲ, ನಮಗೆ ಕೊಟ್ಟೇ ಭದ್ರೆ ಮುಂದಕ್ಕೆ ಹರಿಯಬೇಕು.

ಚಿತ್ರದುರ್ಗ ಶಾಖಾ ಕಾಲುವೆಗೆ ಭದ್ರೆ ಹರಿಯುತ್ತಿರುವುದು ಜನರಲ್ಲಿ ಸಂತಸದ ಜೊತೆಯಲ್ಲಿಯೇ ಆಕ್ರೋಶದ ಕಿಚ್ಚನ್ನು ಹಚ್ಚಿರುವ ಪರಿ ಇದು. ಪ್ರಥಮ ಬಾರಿಗೆ ಹೊಸದುರ್ಗ ತಾಲೂಕನ್ನು ಸೋಮವಾರ ತಡರಾತ್ರಿ ಸ್ಪರ್ಶಿಸಿದ ಭದ್ರೆಗೆ ಸ್ವಾಗತ ಒಂದು ಕಡೆಯಾದರೆ ಕಾಲುವೆ ಅಣತಿ ದೂರದಲ್ಲಿದ್ದರೂ ಭದ್ರೆಯಿಂದ ದೂರವಿಡಲಾಗಿದೆ ಎಂದು ಚಿಕ್ಕಯಗಟಿ ಗ್ರಾಮಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಕಡಿಮೆ ಪರಿಹಾರ ಪಡೆದು ಸುಮಾರು 265 ಎಕರೆ ಭೂಮಿ

ನಾಲೆಗೆ ಇಳಿದ ಗ್ರಾಮಸ್ಥರು ನಮಗೆ ಮೊದಲು ನೀರು ಕೊಟ್ಟು ನಂತರ ಮುಂದಕ್ಕೆ ತೆಗೆದುಕೊಂಡು ಹೋಗಿ ಎಂದು ಮಣ್ಣು ಹಾಕಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು ಭದ್ರಾ ಮೇಲ್ದಂಡೆ ಯೋಜನೆ ಹೊಸದುರ್ಗ ತಾಲೂಕಿನಲ್ಲಿ ಪ್ರಾರಂಭಗೊಂಡಿದ್ದು ಚಿಕ್ಕಯಗಟಿ ಗ್ರಾಮದಿಂದಲೇ. ಇಲ್ಲಿಯೇ ಕಾಮಗಾರಿ ಭೂಮಿ ಪೂಜೆಯೂ ನಡೆದಿತ್ತು. ನಮಗೆ ನೀರು ಸಿಗುತ್ತದೆ ಎಂಬ ಸಂತಸದಲ್ಲಿ ಕಡಿಮೆ ಪರಿಹಾರ ಪಡೆದು ಸುಮಾರು 265 ಎಕರೆ ಭೂಮಿಯನ್ನು ಯೋಜನೆಗೆ ಬಿಟ್ಟುಕೊಟ್ಟಿದ್ದೇವೆ.

ನಿಮಗೆ ಮೊದಲ ಹಂತದಲ್ಲಿಯೇ ನೀರು ಬರುತ್ತದೆ ಎಂಬ ನಂಬಿಕೆಯನ್ನು ಶಾಸಕರು ಹಾಗೂ ಅಧಿಕಾರಿಗಳು ಮೂಡಿಸಿದ್ದರು. ಆದರೆ ಈಗಿನ ಪರಿಸ್ಥಿತಿಯಲ್ಲಿ ನಮಗೆ ನೀರು ಬರುವುದೇ ಅನುಮಾನ ಎಂಬುದು ಅವರ ಅಳಲು. ಸದ್ಯ ಯಾವುದೇ ಕೆರೆಗಳಿಗೆ ನೀರು ಬಿಡುವುದಿಲ್ಲ ಇದೊಂದು ಪ್ರಯೋಗಾತ್ಮಕ ಪ್ರಕ್ರಿಯೆ ಆಗಿದೆ. ನಿಮ್ಮ ಗ್ರಾಮದ ಕೆರೆಗಳಿಗೆ ಗ್ರಾವಿಟಿ ಮೂಲಕ ಹರಿಸಲು ಸಾಧ್ಯವಿಲ್ಲ ಪಂಪ್‌ ಮಾಡುವ ಮೂಲಕ ನೀರು ಹರಿಸಬೇಕು. ತಡವಾಗಿಯಾದರೂ ನೀರು ಬರುತ್ತದೆ ಎಂಬ ಜಲ ನಿಗಮದ ಅಧಿಕಾರಿಗಳ ಮಾತಿಗೆ ಸಂತೃಪ್ತರಾಗದ ಗ್ರಾಮಸ್ಥರು ಬರವಣಿಗೆ ಮೂಲಕ ನಮಗೆ ಸ್ಪಷ್ಠತೆ ನೀಡಬೇಕು ಎಂದು ಒತ್ತಾಯಿಸಿದರು.

200 ಮೀಟರ್‌ ಅಂತರದಲ್ಲಿಯೇ ಗ್ರಾಮದ 3 ಕೆರೆ

ಇದೆ ವೇಳೆ ಮಾದ್ಯಮಗಳ ಮುಂದೆ ಮಾತನಾಡಿದ ಗ್ರಾಮಸ್ಥರು, ಚಿತ್ರದುರ್ಗ ನಾಲೆಯಿಂದ ಕೇವಲ 200 ಮೀಟರ್‌ ಅಂತರದಲ್ಲಿಯೇ ನಮ್ಮ ಗ್ರಾಮದ 3 ಕೆರೆಗಳಿವೆ ಆದರೆ ಅವುಗಳಿಗೆ ಏತ ನೀರಾವರಿ ಮೂಲಕ ನೀರು ಹರಿಸುತ್ತೇವೆ ಎನ್ನುತ್ತಾರೆ ಆದರೆ ಇದುವರೆವಿಗೂ ಪೈಪ್‌ಲೈನ್‌ ಕಾಮಗಾರಿ ನಡೆದಿಲ್ಲ . ನಮಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡಿ ನಾವೇ ಮೋಟಾರ್‌ಗಳನ್ನು ತಂದು ನಮ್ಮ ಕೆರೆಗೆ ನೀರು ಹರಿಸಿಕೊಳ್ಳುತ್ತೇವೆ ಎಂದರೆ ಅದು ಸಾಧ್ಯವಿಲ್ಲ ಎನ್ನುತ್ತಾರೆ ಈಗಿರುವಾಗ ಇವರ ಮಾತನ್ನು ಹೇಗೆ ನಂಬಲಿ ಎನ್ನುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು.

ಗ್ರಾಮಸ್ಥರು ಹರಿಯುವ ನೀರಿಗೆ ಅಡ್ಡಲಾಗಿ ಮಣ್ಣು ಹಾಕಿ ಪ್ರತಿಭಟನೆಗೆ ಮುಂದಾದರೂ ನಿಮ್ಮ ತಡೆ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುವಂತೆ ನೀರು ಮಣ್ಣನ್ನು ಕೊರೆದು ಮುಂದೆ ಹೋಯಿತು. ನಾಲೆಯಿಂದ ಹೊರ ಬಂದ ಅವರುಗಳು ನಂತರ ಹೊಳಲ್ಕೆರೆ ಶಾಖಾ ಕಾಲುವೆಯಲ್ಲಿ ನೀರು ಹರಿಯುತ್ತಿರುವುದ ಗಮನಿಸಿ ನಮಗೆ ನೀರು ಇಲ್ಲದಿದ್ದ ಮೇಲೆ ಹೊಳಲ್ಕೆರೆ ತಾಲೂಕಿಗೆ ಏಕೆ ನೀರು ಎಂದು ಶಾಖಾ ನಾಲೆಯ ಗೇಟ್‌ ಭದ್ರ ಪಡಿಸಿದರು. ನಮಗೆ ನೀರು ಕೊಡುವ ಸ್ಫಷ್ಠತೆ ಸಿಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಸಂಜೆಯೊಳಗೆ ಇದಕ್ಕೆ ಪರಿಹಾರ ಸೂಚಿಸದಿದ್ದರೆ ನಾಳೆಯಿಂದ ನೀರು ಮಂಚಿತ ಇನ್ನಿತರ ಗ್ರಾಮಗಳ ಗ್ರಾಮಸ್ಥರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಚಿಕ್ಕಯಗಟಿ ಗ್ರಾಮದ ಕೆರೆಗೆ ಮೊದಲು ನೀರು ಹರಿಯುತ್ತದೆ ಎಂದು ಶಾಸಕರು ಯೋಜನೆಯ ಕಾಮಗಾರಿ ಭೂಮಿ ಪೂಜೆಗೆ ಬಂದಾಗ ಭರವಸೆ ನೀಡಿದ್ದರು . ಅವರ ಭರವಸೆಯಂತೆ ನಾವು ಕೂಡ ಭೂಮಿಯನ್ನು ಬಿಟ್ಟುಕೊಟ್ಟೆವು ಆದರೆ ಈಗ ನೀರು ಹರಿಸುವ ಬಗ್ಗೆ ಶಾಸಕರು ಚಕಾರವೆತ್ತುತ್ತಿಲ್ಲ . ಗ್ರಾಮಸ್ಥರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಚಿಕ್ಕಯಗಟಿ ಗ್ರಾಮಸ್ಥ ಶಶಿಧರ್ ಹೇಳುತ್ತಾರೆ.

PREV
Read more Articles on
click me!

Recommended Stories

ಬರೋಬ್ಬರಿ 70 ಕಡೆ ರಂಧ್ರ ಕೊರೆದು ಕಾಲುವೆ ನೀರು ಕಳ್ಳತನ; ಮುಳವಾಡ ಏತ ನೀರಾವರಿ ಯೋಜನೆ
16 ಕೆಜಿ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಉಗುರು ಜಪ್ತಿ! ಅರಣ್ಯ ಇಲಾಖೆ ಭರ್ಜರಿ ಬೇಟೆ