ಫಕೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಪರಿಶಿಷ್ಟಸಮುದಾಯದ ಮದುವೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ ಘಟನೆ ಗಲಭೆಗೆ ಕಾರಣವಾಯ್ತು.
ಕೊಪ್ಪಳ [ಆ.28] : ತಾಲೂಕಿನ ತಿಗರಿ ಗ್ರಾಮದಲ್ಲಿ ಫಕೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಪರಿಶಿಷ್ಟಸಮುದಾಯದ ಮದುವೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದನ್ನು ವಿರೋಧಿಸಿದ್ದರಿಂದ ಮಾತಿನ ಚಕಮಕಿ ನಡೆದ, ಕೊನೆಗೆ ಮುಹೂರ್ತ ಮೀರುತ್ತದೆ ಎಂದು ಪರಿಶಿಷ್ಟ ಸಮುದಾಯದರು ವಧು-ವರರ ಮನೆ ಮುಂದೆಯೇ ವಿವಾಹ ಕಾರ್ಯ ನೆರವೇರಿಸಿದ ಘಟನೆ ನಡೆದಿದೆ.
ಫಕೀರೇಶ್ವರ ದೇವರ ಜಾತ್ರೆ ಅಂಗವಾಗಿ 10 ವರ್ಷದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿ ಈ ವರ್ಷವೂ ಪರಿಶಿಷ್ಟಸಮುದಾಯದ 4, ಇತರೆ ಸಮುದಾಯ 22 ಜೋಡಿಗಳು ಮದುವೆಗೆ ನೋಂದಣಿಯಾಗಿದ್ದವು. ಪ್ರತಿವರ್ಷವೂ ಪರಿಶಿಷ್ಟಸಮುದಾಯದವರು ಕೇರಿಯಲ್ಲಿರುವ ಸ್ವಾರೆಮ್ಮಾ ದೇವಸ್ಥಾನದಲ್ಲಿ ಮದುವೆ ಮಾಡುತ್ತಿದ್ದರು. ಇತರರು ಫಕೀರೇಶ್ವರ ದೇವಸ್ಥಾನದ ಬಳಿ ಹಾಕಲಾಗಿರುವ ಪೆಂಡಾಲ್‌ನಲ್ಲಿ ಮದುವೆ ಮಾಡುತ್ತಿದ್ದರು. ಇದನ್ನು ಈ ಬಾರಿ ದಲಿತ ಸಮುದಾಯದ ಕೆಲವರು ವಿರೋಧಿಸಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿನ್ನೆಲೆಯಲ್ಲಿ ಹಿರಿಯರು ತಕ್ಷಣ ಕೇರಿಗೆ ಧಾವಿಸಿ ಮಾತುಕತೆ ನಡೆಸಿದರು. ಪ್ರತಿವರ್ಷವೂ ಪ್ರತ್ಯೇಕವಾಗಿ ನಡೆಯುತ್ತಿದೆ. ಈ ಬಾರಿಯೂ ಹಾಗೆಯೇ ವ್ಯವಸ್ಥೆ ಮಾಡಿದ್ದೇವೆ. ಬೇಕಿದ್ದರೆ ಕಾಲಮೀರಿಲ್ಲ ಒಂದೇ ಸ್ಥಳದಲ್ಲಿ ಮದುವೆ ಮಾಡೋಣ ಎಂದು ಕರೆದರು. ಈ ಸಂದರ್ಭದಲ್ಲಿ ಕೆಲವರು ಇದನ್ನು ವಿರೋಧಿಸಿದ್ದರಿಂದ ಮಾತಿಗೆ ಮಾತು ಬೆಳೆದು ಒಂದು ಹಂತದಲ್ಲಿ ಕಾರ್ಯಕ್ರಮವನ್ನೇ ರದ್ದು ಮಾಡುವ ಹಂತಕ್ಕೆ ಹೋಗಿತ್ತು. ಗ್ರಾಮಸ್ಥರು ಎಷ್ಟೇ ಒತ್ತಾಯಿಸಿದರೂ ದಲಿತ ಸಮುದಾಯದವರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೇ ಇಲ್ಲ. ಗಲಾಟೆಯಿಂದಾಗಿ ಮುಹೂರ್ತ ಮೀರಿ ಹೋಗುತ್ತದೆ ಎಂದು ತಮ್ಮ ತಮ್ಮ ಮನೆ ಮುಂದೆ ಮದುವೆ ಕಾರ್ಯಕ್ರಮ ಮಾಡಿದರು. 10 ವರ್ಷಗಳಿಂದ ಇದೇ ರೀತಿ ಮದುವೆ ಪ್ರತ್ಯೇಕವಾಗಿ ಆಗುತ್ತಿದ್ದರೂ ಊಟ ಮಾತ್ರ ಒಂದೇ ಸ್ಥಳದಲ್ಲಿ ನಡೆಯುತ್ತಿತ್ತು.
ರಾಮಣ್ಣ ನಾಯಕ್ ಪಿಐ ಅಳವಂಡಿ