ಬೆಂಗಳೂರು ನೈಸ್ ರಸ್ತೆ ಟೋಲ್ ಕಟ್ಟದೇ ತೆರಳಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ! ಸಿಬ್ಬಂದಿಗೆ ಹೇಳಿದ ಮಾತೇನು?

Published : Oct 02, 2026, 12:42 PM IST
HD Kumaraswamy Nice Road Toll

ಸಾರಾಂಶ

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಸಾರ್ವಜನಿಕರು ಟೋಲ್ ಕಟ್ಟಬಾರದು ಎಂದು ಕರೆ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ತಾವೇ ಖುದ್ದಾಗಿ ಟೋಲ್ ಪಾವತಿಸದೆ ಪ್ರಯಾಣಿಸಿದ್ದಾರೆ. ಟೋಲ್ ಸಿಬ್ಬಂದಿಗೆ ಧೈರ್ಯ ತುಂಬಿದ ಅವರು, 3 ಲಕ್ಷ ಕೋಟಿ ರೂ. ನೈಸ್ ಹಗರಣದ ವಿರುದ್ಧದ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.

ಬೆಂಗಳೂರು (ಅ.02): 'ನೈಸ್ ರಸ್ತೆಯಲ್ಲಿ ಸಾರ್ವಜನಿಕರು ಯಾರೂ ಟೋಲ್ ಕಟ್ಟಬೇಡಿ' ಎಂದು ಇತ್ತೀಚೆಗಷ್ಟೇ ಕರೆ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಈಗ ತಾವು ನುಡಿದಂತೆ ನಡೆದುಕೊಂಡಿದ್ದಾರೆ. ಬೆಂಗಳೂರಿನ ಅತ್ಯಂತ ದುಬಾರಿ ಎಂದೇ ಕುಖ್ಯಾತಿ ಪಡೆದಿರುವ ನೈಸ್ ರಸ್ತೆಯಲ್ಲಿ (NICE Road) ಸಂಚರಿಸಿದ ಅವರು, ಟೋಲ್ ಶುಲ್ಕ ಪಾವತಿಸದೇ ತಮ್ಮ ಕಾರಿನಲ್ಲಿ ಮುಂದುವರಿದಿದ್ದಾರೆ.

ಟೋಲ್ ಸಿಬ್ಬಂದಿ ಜೊತೆ ಹೆಚ್‌ಡಿಕೆ ಮಾತುಕತೆ:

ಹೆಚ್.ಡಿ. ಕುಮಾರಸ್ವಾಮಿ ಅವರ ಕಾರು ನೈಸ್ ಟೋಲ್ ಪ್ಲಾಜಾ ಬಳಿ ಬರುತ್ತಿದ್ದಂತೆ ಸಿಬ್ಬಂದಿ ಕಾರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಕಾರಿನ ಗಾಜು ಇಳಿಸಿ ಸ್ವತಃ ಸಿಬ್ಬಂದಿಯೊಂದಿಗೆ ಮಾತನಾಡಿದ ಕುಮಾರಸ್ವಾಮಿ, 'ನೈಸ್ ರಸ್ತೆ ಟೋಲ್ ಶುಲ್ಕದ ಅಕ್ರಮದ ವಿರುದ್ಧ ಹೋರಾಟ ನಡೆಯುತ್ತಿದೆ. ಆದರೆ, ಇಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯಾದ ನೀವು ಯಾರೂ ಭಯಪಡುವ ಅವಶ್ಯಕತೆ ಇಲ್ಲ. ನಿಮಗ್ಯಾರಿಗೂ ಇದರಿಂದ ತೊಂದರೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ. ಯಾರೂ ಗಾಬರಿಯಾಗಬೇಡಿ' ಎಂದು ಧೈರ್ಯ ತುಂಬಿ, ಟೋಲ್ ಶುಲ್ಕ ಪಾವತಿಸದೆಯೇ ಅಲ್ಲಿಂದ ತೆರಳಿದರು.

ಘಟನೆಯ ಹಿನ್ನೆಲೆ: ₹3 ಲಕ್ಷ ಕೋಟಿ ನೈಸ್ ಹಗರಣದ ಆರೋಪ!

ನೈಸ್ ಯೋಜನೆಯ ವಿರುದ್ಧ ಕುಮಾರಸ್ವಾಮಿ ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಾಂಬ್ ಸಿಡಿಸಿದ್ದರು. ನೈಸ್ ಯೋಜನೆಯಲ್ಲಿ ಸುಮಾರು ₹3 ಲಕ್ಷ ಕೋಟಿಗೂ ಅಧಿಕ ಮೊತ್ತದ ಬೃಹತ್ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. 'ರೈತರು ರಸ್ತೆ ನಿರ್ಮಾಣವಾಗುತ್ತದೆ ಎಂಬ ನಂಬಿಕೆಯಿಂದ ಭೂಮಿ ನೀಡಿದ್ದರು. ಆದರೆ, ಅವರ ಭೂಮಿಯನ್ನು ನೈಸ್ ಸಂಸ್ಥೆ ದುರ್ಬಳಕೆ ಮಾಡಿಕೊಂಡಿದೆ. 2004ರಲ್ಲೇ ಈ ಯೋಜನೆಗೆ ಸಂಬಂಧಿಸಿದಂತೆ ಬರೋಬ್ಬರಿ 1.25 ಲಕ್ಷ ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಡಿನೋಟಿಫಿಕೇಶನ್ ಮಾಡಲಾಗಿದೆ. ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿರುವ ಈ ರಸ್ತೆಗೆ ಸರ್ಕಾರವೇ ಮೊದಲು ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು. ಅಲ್ಲಿಯವರೆಗೆ ಜನರೂ ಟೋಲ್ ಕಟ್ಟಬಾರದು' ಎಂದು ಕುಮಾರಸ್ವಾಮಿ ಗುಡುಗಿದ್ದರು.

ಮುಂದುವರಿಯಲಿದೆ ಕಾನೂನು ಸಮರ:

ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿಯೇ ನೈಸ್ ಯೋಜನೆಯನ್ನು ರದ್ದುಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಆದರೆ ಅಂದು ಬಿಜೆಪಿಯೂ ಸೇರಿದಂತೆ ಯಾರಿಂದಲೂ ಸಹಕಾರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಹೆಚ್‌ಡಿಕೆ, 'ಈಗ ನ್ಯಾಯಾಲಯವೇ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳಲು ಸೂಚಿಸಿದೆ. ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ಇಲ್ಲಿಗೆ ಬಿಡುವುದಿಲ್ಲ. ನೈಸ್ ಹಗರಣದ ಕುರಿತು 'ಪಾರ್ಟ್ 2' ಮತ್ತು ಅಗತ್ಯಬಿದ್ದರೆ 'ಪಾರ್ಟ್ 3' ದಾಖಲೆಗಳನ್ನು ಬಹಿರಂಗಪಡಿಸುತ್ತೇನೆ' ಎಂದು ಸರ್ಕಾರ ಹಾಗೂ ನೈಸ್ ಸಂಸ್ಥೆಗೆ ಎಚ್ಚರಿಕೆ ನೀಡಿದ್ದರು. ಇದೀಗ ಸ್ವತಃ ತಾವೇ ಟೋಲ್ ಪಾವತಿಸದೆ ತೆರಳುವ ಮೂಲಕ ನೈಸ್ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ.

PREV
Read more Articles on
click me!

Recommended Stories

ತಿರುಪತಿ To ವಿಜಯಪುರ ನಡುವೆ ವಿಶೇಷ ರೈಲು: ರಾಜ್ಯದ 10 ನಿಲ್ದಾಣಗಳಲ್ಲಿ ನಿಲುಗಡೆ
ಬೆಂಗಳೂರಿನಲ್ಲಿ ₹6 ಕೋಟಿ ಮೌಲ್ಯದ ರಾಜಕಾಲುವೆ ಒತ್ತುವರಿ ತೆರವು: ಬಿ-ಖರಾಬು ಜಾಗ ವಶಕ್ಕೆ ಪಡೆದ ಜಿಬಿಎ!