ರಾಜ್ಯ ಒಡೆಯುವ ಉದ್ದೇಶ ನನ್ನದಲ್ಲ. ಆದ್ರೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದ್ರೆ ಸುಮ್ಮನಿರಲ್ಲ, ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಭಾಗಕ್ಕೆ ಅನ್ಯಾಯವಾಗಿದೆ ಎಂದು ಪ್ರತ್ಯೇಕ ರಾಜ್ಯದ ಬಗ್ಗೆ ಮಾತಾಡಿದ್ದೇನೆ. ಈಗಲೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾದ್ರೆ ಜನರ ಧ್ವನಿಯಾಗಿ ನಿಲ್ಲುತ್ತೇನೆ ಎಂದ ಸಚಿವ ಉಮೇಶ ಕತ್ತಿ
ಕಲಬುರಗಿ(ಜ.27): ಡಿಸಿಎಂ ಗೋವಿಂದ ಕಾರಜೋಳ ಉಸ್ತುವಾರಿಯಾಗಿರುವ ಕಲಬುರಗಿ ಜಿಲ್ಲೆಯ ಉಸ್ತುವಾರಿ ಗಿರಿ ಮೇಲೆ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಕಣ್ಣು ಬಿದ್ದಿದೆ. ಈ ಬಾರಿ ಜ.26ರ ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಸಚಿವ ಉಮೇಶ ಕತ್ತಿಯವರನ್ನೇ ನೇಮಕ ಮಾಡಿ ಸರ್ಕಾರ ಆದೇಶ ನೀಡಿತ್ತು.
ಆ ಆದೇಶದಂತೆ ಧ್ವಜಾರೋಹಣಕ್ಕೆ ಆಗಮಿಸಿ ತಿರಂಗಾ ಹಾರಿಸಿರುವ ಉಮೇಶ ಕತ್ತಿ ಇಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೋಮದಿಗೆ ಮಾತನಾಡಿ, ಕಲಬುರಗಿ ಜಿಲ್ಲೆಗೆ ತಮ್ಮನ್ನು ಗುರುತಿಸಿ ಉಸ್ತುವಾರಿ ಸ್ಥಾನ ಕೊಟ್ಟರೆ ಖಂಡಿತವಾಗಿ ಸ್ವೀಕರಿಸುತ್ತೇನೆ. ಜಿಲ್ಲಾ ಉಸ್ತುವಾರಿ ಕೊಡಬೇಕೆಂದು ನಾನೇನು ಒತ್ತಾಯ ಮಾಡುವುದಿಲ್ಲ. ಕೊಟ್ಟರೆ ಸ್ವೀಕರಿಸುತ್ತೇನೆ. ಇಲ್ಲದಿದ್ದರೆ ಮಂತ್ರಿ ಸ್ಥಾನದಲ್ಲಿ ಮುಂದುವರೆಯುತ್ತೇನೆಂದು ಹೇಳಿದ್ದಾರೆ.
ಉ.ಕ.ಕ್ಕೆ ಅನ್ಯಾಯವಾದ್ರೆ ಸುಮ್ಮನಿರಲ್ಲ:
ರಾಜ್ಯ ಒಡೆಯುವ ಉದ್ದೇಶ ನನ್ನದಲ್ಲ. ಆದ್ರೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದ್ರೆ ಸುಮ್ಮನಿರಲ್ಲ, ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಭಾಗಕ್ಕೆ ಅನ್ಯಾಯವಾಗಿದೆ ಎಂದು ಪ್ರತ್ಯೇಕ ರಾಜ್ಯದ ಬಗ್ಗೆ ಮಾತಾಡಿದ್ದೇನೆ. ಈಗಲೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾದ್ರೆ ಜನರ ಧ್ವನಿಯಾಗಿ ನಿಲ್ಲುತ್ತೇನೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು.
'ನನ್ನ ಸೋಲಿಸಲು ಮೋದಿ ಹವಾ ನಡೆಯಲ್ಲ'
ಇನ್ನು ಬಳ್ಳಾರಿ ಆಂಧ್ರಪ್ರದೇಶಕ್ಕೆ ಸೇರಿಸುವ ಸೋಮಶೇಖರ್ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರವರ ವಿಚಾರ ಅವರಿಗೆ ಬಿಟ್ಟದ್ದು, ಅದು ಅವರ ವೈಯಕ್ತಿಕ ವಿಚಾರವಾಗಿದೆ. ರಾಜ್ಯ ಒಗ್ಗಟ್ಟಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಒಂದು ರಾಜ್ಯವನ್ನು ಒಡೆಯುತ್ತೇನೆಂದು ಅವರ ಅಭಿಪ್ರಾಯವಾಗಿದ್ದರೆ ಅದನ್ನು ತಡೆಯುವುದಕ್ಕಾಗವುದಿಲ್ಲ ಎಂದ ಅವರು, ಅನ್ಯಾಯವಾದ್ರೆ ಧ್ವನಿ ಎತ್ತ ಬೇಕಾಗುತ್ತೆ. ಬೆಳಗಾವಿ ಕೂಡಾ ಮೂರು ಜಿಲ್ಲೆಯಾಗುವ ಎಲ್ಲ ಗುಣಲಕ್ಷಣಗಳು ಹೊಂದಿದೆ. ಹಲವು ಬಾರಿ ನಾವು ಧ್ವನಿ ಎತ್ತಿದ್ದೇವೆ ಮುಂದೆ ವಿಭಜನೆ ಮಾಡಿದ್ರೆ ಮಾಡಲಿ ಎಂದರು.
ಪ್ರತ್ಯೇಕ ಕಲ್ಯಾಣ ಕರ್ನಾಟಕ ಎಂದು ರಾಜ್ಯ ಒಡೆಯುವ ಕೆಲಸ ಮಾಡಬಾರದು. ಈ ಭಾಗಕ್ಕೆ ಅನ್ಯಾಯವಾಗಿದೆ ಎಂದು ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ, ಈ ಭಾಗದಲ್ಲಿ ನೀರಾವರಿ ಸೌಲಭ್ಯವಿಲ್ಲ. ಕಲ್ಯಾಣ ಕರ್ನಾಟಕಕ್ಕೆ ನೀರಾವರಿ ಸೌಲಭ್ಯ ಒದಗಿಸಲು 9.5 ಟಿಎಂಸಿ ನೀರನ್ನು ಆಲಮಟ್ಟಿಯಲ್ಲಿ ತಡೆದು ಈ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕೆಂದು ಒತ್ತಾಯ ಮಾಡುತ್ತೇನೆ. ಇದರ ಅರ್ಥ ರಾಜ್ಯ ಒಡೆಯುವದೆಂದಲ್ಲ, ಈ ಭಾಗಕ್ಕೆ ಅನ್ಯಾಯವಾಗಿದ್ದರಿಂದ ಅದನ್ನು ಸರಿಪಡಿಸಬೇಕೆಂದು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆಂದರು.
ರೈತರು 2 ವರ್ಷ ಕಾಯಲಿ:
ರೈತರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಕೃಷಿ ಮಸೂದೆಗಳನ್ನು ಜಾರಿಗೆ ತರಲಾಗಿದೆ. ಆದರೆ, ವಿನಾಕಾರಣ ರೈತರಿಗೆ ಮಾರಕವಾಗಿವೆ ಎಂದು ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ. ಜಾರಿಗೆ ಬಂದು ಒಂದೆರಡು ವರ್ಷಗಳಾಗಲಿ, ಈ ಮಸೂದೆಗಳಿಂದ ಸಮಸ್ಯೆಗಳಾದರೆ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ. ಕಾನೂನು ಬಗ್ಗೆ ರೈತರು ಕಾಯಬೇಕು, ಒಂದು ವರ್ಷವಾದ್ರು ರೈತರು ಕಾಯಬೇಕು, ಆಗ ತೊಂದರೆ ಕಂಡುಬಂದರೆ ಆಗ ಅದರ ಬಗ್ಗೆ ಸರಿ ಮಾಡೋಣ ಎಂದರು.