ಹಾಸನ ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರದ ಬಳಿ ನಡೆದ ಘಟನೆ, ಪುಂಡರ ಹುಚ್ಚಾಟಕ್ಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅಮಾಯಕ ಯುವತಿಯರು.
ಹಾಸನ(ಜೂ.29): ಬೈಕ್ ವೀಲ್ಹಿಂಗ್ ಹುಚ್ಚಾಟದ ವೇಳೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಯುವತಿಯರು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರದ ಬಳಿ ನಿನ್ನೆ(ಬುಧವಾರ) ರಾತ್ರಿ ನಡೆದಿದೆ. ಪುಂಡರ ಹುಚ್ಚಾಟಕ್ಕೆ ಅಮಾಯಕ ಯುವತಿಯರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವೀಲ್ಹಿಂಗ್ ಮಾಡುತ್ತಿದ್ದ ವೇಳೆ ಪುಂಡರ ಬೈಕ್ ಯುವತಿಯರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಭೂಮಿಕಾ, ಸಿಂಚನ ಎಂಬ ಯುವತಿಯರಿಗೆ ಗಂಭೀರವಾದ ಗಾಯಗಳಾಗಿವೆ.
ಭೂಮಿಕಾ, ಸಿಂಚನ ರಾತ್ರಿ ಸಾಲಗಾಮೆ ರಸ್ತೆಯ ಫುಡ್ ಕೋರ್ಟ್‌ನಲ್ಲಿ ಊಟ ಮುಗಿಸಿ ಬೈಕ್ ಏರಿದ್ದರು. ಪುಂಡರು ಜನನಿಬಿಡ ಪ್ರದೇಶದಲ್ಲಿ ಬೈಕ್ ವೀಲ್ಹಿಂಗ್ ಮಾಡಿಕೊಂಡು ಬಂದು ಭೂಮಿಕಾ ಹಾಗೂ ಸಿಂಚನಗೆ ಡಿಕ್ಕಿ ಹೊಡೆದಿದ್ದಾರೆ. ಭೂಮಿಕಾ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಅಂತ ತಿಳಿದು ಬಂದಿದೆ.
Bike wheeling: ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್: 26 ಮಂದಿ ವಿರುದ್ಧ ಕೇಸ್
ಬೈಕ್ ವೀಲ್ಹಿಂಗ್ ಮಾಡಿದ ಶಾಕೀರ್ ಹಾಗೂ ಅಪ್ರಾಪ್ತನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ, ಬಟ್ಟೆ ಬಿಚ್ಚಿ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ವೀಲ್ಹಿಂಗ್ ಮಾಡಿ ಅಪಘಾತ ಮಾಡಿದ ಶಾಕೀರ್ ಹಾಗೂ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತೀಚೆಗೆ ಹಾಸನ ನಗರದಲ್ಲಿ ವೀಲ್ಹಿಂಗ್ ಮಾಡುವ ಪುಂಡರ ಹಾವಳಿ ಮಿತಿಮೀರಿದೆ. ಇದಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಸಾರ್ವಜನಿಕರ ಒತ್ತಾಯಿಸಿದ್ದಾರೆ.