* ಕೊಪ್ಪಳ ಗವಿಸಿದ್ದೇಶ್ವರ ಕೋವಿಡ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡದ ಮಾದಯ್ಯ ಸ್ವಾಮೀಜಿ
* ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಮಾದಯ್ಯ ಶ್ರೀ
* ಸ್ವತಃ ಶ್ರೀಗಳೇ ಆತ್ಮಬಲ ತುಂಬುತ್ತಿರುವುದರಿಂದಲೇ ರೋಗಿಗಳು ಬೇಗನೇ ಗುಣಮುಖ
ಕೊಪ್ಪಳ(ಜೂ.03): ಆಮ್ಲಜನಕದ ಸ್ಯಾಚುರೇಶನ್ ಮಟ್ಟ ಕೇವಲ 40 ಇದ್ದ ಗಂಭೀರ ಸ್ಥಿತಿಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತ ಇಲ್ಲಿನ ಗವಿಸಿದ್ಧೇಶ್ವರ ಕೋವಿಡ್ ಸೆಂಟರ್‌ಗೆ ದಾಖಲಾಗಿದ್ದ ರಾಯಚೂರು ಜಿಲ್ಲೆ ತುರವಿಹಾಳದ ಅಮೋಘ ರೇವಣಸಿದ್ಧೇಶ್ವರ ಮಠದ ಮಾದಯ್ಯ ಸ್ವಾಮೀಜಿ 14 ದಿನಗಳ ಚಿಕಿತ್ಸೆಯಿಂದ ಗುಣಮುಖರಾಗಿ ಮಠಕ್ಕೆ ಮರಳಿದ್ದಾರೆ.
ಇಲ್ಲಿಗೆ ಸೇರಿಸುವಾಗ ಅವರ ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಸಹ ಯಾವ ಭರವಸೆ ನೀಡಿರಲಿಲ್ಲ. ಗವಿಮಠ ಆಸ್ಪತ್ರೆಯಲ್ಲೇ ನಾನು ಚಿಕಿತ್ಸೆ ಪಡೆಯಬೇಕೆಂದು ಅವರು ಬಯಸಿದ್ದರು. ಗವಿಸಿದ್ಧೇಶ್ವರ ಮಹಾಸ್ವಾಮಿಗಳೊಂದಿಗೆ ಮಾತನಾಡಿ, ಮೇ 18 ರಂದು ಸಂಜೆ 7 ಗಂಟೆಗೆ ದಾಖಲಾಗಿದ್ದರು.
ಆಕ್ಸಿಜನ್ ಸ್ಯಾಚುರೇಶನ್ ಕೇವಲ 40 ಇದ್ದುದರಿಂದ ತಕ್ಷಣ ವೆಂಟಿಲೇಟರ್ ಅಳವಡಿಸಲಾಗುತ್ತದೆ. ವೈದ್ಯರು ಸಹ ಗಂಭೀರವಾಗಿದೆ ಎಂದೇ ಹೇಳುತ್ತ ಚಿಕಿತ್ಸೆ ಆರಂಭಿಸುತ್ತಾರೆ. ಗವಿ ಶ್ರೀಗಳು ಮಾತ್ರ ಪ್ರಯತ್ನ ಮಾಡಿ ಉಳಿದದ್ದನ್ನು ಗವಿಸಿದ್ಧೇಶ್ವರ ನೋಡಿಕೊಳ್ಳುತ್ತಾನೆ ಎಂದಿದ್ದರು.
ಕೊಪ್ಪಳ: ಅನಿವಾಸಿ ಭಾರತೀಯರಿಂದ ಆಕ್ಸಿಜನ್ ಕೊಡುಗೆ
ವಿಶೇಷ ನಿಗಾದಲ್ಲಿ ಚಿಕಿತ್ಸೆ ಪಡೆದ ಅವರು ಮೂರೇ ದಿನದಲ್ಲಿ ಚೇತರಿಸಿಕೊಂಡು ವೆಂಟಿಲೇಟರ್‌ನಿಂದ ಆಕ್ಸಿಜನ್ ಬೆಡ್‌ಗೆ ವರ್ಗಾವಣೆಗೊಳ್ಳುತ್ತಾರೆ. ಅಲ್ಲಿ ಐದು ದಿನ ಚಿಕಿತ್ಸೆ ಪಡೆದು ಸಹಜವಾಗಿಯೇ ಉಸಿರಾಡಲು ಸಾಧ್ಯವಾಗುತ್ತದೆ. ಬಳಿಕ ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಆಗುತ್ತಾರೆ. ಇದೀಗ 14 ದಿನದಲ್ಲೇ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಾರೆ.
ಪುನರ್ಜನ್ಮ ಪಡೆದೆ:
ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ನಿಜಕ್ಕೂ ಪುನರ್ಜನ್ಮ ಪಡೆದಿದ್ದೇನೆ. ಆಮ್ಲಜನಕ ಸ್ಯಾಚುರೇಶನ್ ಮಟ್ಟ ಕೇವಲ 40 ಬಂದಾಗ ನಾನು ಬದುಕುವ ಆಸೆಯನ್ನೇ ಬಿಟ್ಟಿದ್ದೆ. ಆದರೂ ಈ ಗವಿಸಿದ್ದನ ನೆಲದಲ್ಲಿ ಇದ್ದೇನೆ ಎನ್ನುವ ನಂಬಿಕೆ ನನ್ನಲ್ಲಿ ಬಹಳ ವಿಶ್ವಾಸವನ್ನು ಮೂಡಿಸಿತ್ತು. ಕೇವಲ 26 ವಯಸ್ಸಿನವನಾಗಿದ್ದರೂ ಕೋವಿಡ್‌ನಿಂದಾಗ ನನ್ನ ಉಸಿರಾಟ ಪ್ರಕ್ರಿಯೆ ತೀರಾ ಕುಸಿದು ಹೋಗಿತ್ತು. ಲಂಗ್ಸ್ (ಶ್ವಾಸಕೋಶ) ಇನ್ವಾಲ್‌ಮೆಂಟ್ ಸಹ ಶೇ. 25ರಷ್ಟಿತ್ತು. ಉಸಿರಾಟ ಪ್ರಕ್ರಿಯೆ ಕುಗ್ಗಿದ್ದರಿಂದ ವೈದ್ಯರು ಭರವಸೆ ನೀಡಿರಲಿಲ್ಲ. ಆದರೆ, ಇಲ್ಲಿಗೆ ಬಂದ ಮೇಲೆ ಭರವಸೆ ಬಂದಿತು. ಈಗ ಸಂಪೂರ್ಣ ಗುಣಮುಖವಾಗಿದ್ದೇನೆ. ಆಮ್ಲಜನಕ ಮಟ್ಟ97-98ಕ್ಕೆ ಬಂದಿದೆ. ಆ ಗವಿಸಿದ್ದನೇ ನಮ್ಮನ್ನು ಕಾಪಾಡಿದ್ದಾನೆ’ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಆಸ್ಪತ್ರೆ ಎಂದರೆ ಹೀಗೆ ಇರಬೇಕು. ಮನೆಯ ವಾತಾವರಣ ಇಲ್ಲಿದೆ. ರೋಗಿ ಬಯಸಿದ್ದಕ್ಕಿಂತ ಹೆಚ್ಚು ಉಪಚಾರ, ಅತ್ಯುತ್ತಮ ಆಹಾರ ನೀಡುತ್ತಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಸ್ವತಃ ಶ್ರೀಗಳೇ ಆತ್ಮಬಲವನ್ನು ತುಂಬುತ್ತಿರುವುದರಿಂದಲೇ ರೋಗಿಗಳು ಇಲ್ಲಿ ಬೇಗನೇ ಗುಣಮುಖವಾಗುತ್ತಾರೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona