ಸಂಚಾರ ಸಮಸ್ಯೆಗೆ ಟನಲ್‌ ರಸ್ತೆ ಪರಿಹಾರ : ವಿಧಾನಸಭೆಯಲ್ಲಿ ಡಿಸಿಎಂ ಪ್ರತಿಪಾದನೆ

Kannadaprabha News   | Kannada Prabha
Published : Mar 27, 2026, 04:18 AM IST
 DK Shivakumar

ಸಾರಾಂಶ

ಬೆಂಗಳೂರು ನಗರದ ಸಂಚಾರ ಸಮಸ್ಯೆಗೆ ಪರಿಹಾರವಾಗಿ ಟನಲ್‌ ರಸ್ತೆ (ಸುರಂಗ ರಸ್ತೆ) ಅಗತ್ಯ. ರಸ್ತೆ ಅಗಲೀಕರಣದ ಭೂಸ್ವಾಧೀನಕ್ಕೆ ತಗುಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಟನಲ್‌ ರಸ್ತೆ ಮಾಡಬಹುದಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸಭೆ : ಬೆಂಗಳೂರು ನಗರದ ಸಂಚಾರ ಸಮಸ್ಯೆಗೆ ಪರಿಹಾರವಾಗಿ ಟನಲ್‌ ರಸ್ತೆ (ಸುರಂಗ ರಸ್ತೆ) ಅಗತ್ಯ. ರಸ್ತೆ ಅಗಲೀಕರಣದ ಭೂಸ್ವಾಧೀನಕ್ಕೆ ತಗುಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಟನಲ್‌ ರಸ್ತೆ ಮಾಡಬಹುದಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ನಗರ ಕುರಿತು ನಡೆದ ಚರ್ಚೆಗೆ ಗುರುವಾರ ಉತ್ತರಿಸಿದ ಅವರು, ಬೆಂಗಳೂರು ಅಭಿವೃದ್ಧಿಗೆ ನನ್ನ ಹಲವು ಸ್ನೇಹಿತರು ಟೀಕಿಸುತ್ತಾರೆ. ಈ ಟೀಕೆ ಮಾಡುವವರ ಮೇಲೆ ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ. ಬದಲಿಗೆ ರಚನಾತ್ಮಕ ಸಲಹೆಗಳನ್ನು ಸ್ವಾಗತಿಸುತ್ತೇನೆ ಎಂದರು.

ನಗರದಲ್ಲಿ 1.40 ಕೋಟಿ ರು. ಜನಸಂಖ್ಯೆಯಿದೆ. 1.30 ಕೋಟಿ ರು. ವಾಹನಗಳಿವೆ. ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿ ಶೇ.16ರಷ್ಟು ರಸ್ತೆಗಳಿರಬೇಕು. ಆದರೆ, ಬೆಂಗಳೂರಿನಲ್ಲಿ ಶೇ.8ರಷ್ಟು ಮಾತ್ರವಿದೆ. ಹೀಗಾಗಿ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಟನಲ್‌ ರಸ್ಯೆ, ಪೆರಿಫೆರಲ್‌ ರಿಂಗ್‌ ರಸ್ತೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಟೆಂಡರ್‌ ಆಗಿದ್ದು, ಭೂಸ್ವಾಧೀನ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಹೇಳಿದರು.

ಪರಿಣಾಮಕಾರಿ ಆಡಳಿತಕ್ಕಾಗಿ 5 ಪಾಲಿಕೆ:

ಪರಿಣಾಮಕಾರಿ ಆಡಳಿತ ದೃಷ್ಟಿಯಿಂದ ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಂಗಡಿಸಲಾಗಿದೆ. 198 ವಾರ್ಡ್‌ಗಳನ್ನು 369 ವಾರ್ಡ್‌ ಮಾಡಲಾಗಿದೆ. ಇದನ್ನು ಬೆಂಗಳೂರು ನಗರದ ವಿಭಜನೆ ಎನ್ನಬಾರದು. ಏನಾದರೂ ಬದಲಾವಣೆಗಳಿದ್ದರೆ ಮಾಡಲು ಸಿದ್ಧರಿದ್ದೇವೆ. ಈ ಮೊದಲು ನಗರಕ್ಕೆ ನಿರ್ದಿಷ್ಟ ಯೋಜನಾ ಪ್ರಾಧಿಕಾರ ಇರಲಿಲ್ಲ. ಹೀಗಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಾಡಲಾಗಿದೆ ಎಂದು ಪಂಚ ಪಾಲಿಕೆ ರಚನೆಯನ್ನು ಸಮರ್ಥಿಸಿಕೊಂಡರು.

ಈವರೆಗೆ 9.50 ಲಕ್ಷ ಇ-ಖಾತಾ:

ನಗರದಲ್ಲಿ ಇ-ಖಾತಾ ಜಾರಿಗೊಳಿಸಲಾಗಿದೆ. ಈ ಹಿಂದೆ ದಾಖಲೆಗಳ ತಿದ್ದುವ ಕೆಲಸವಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಒಂದು ಕೋಟಿಗೂ ಅಧಿಕ ದಾಖಲೆಗಳನ್ನುಸ್ಕ್ಯಾನ್‌ ಮಾಡಿ ಡಿಜಿಟಲೈಸ್‌ ಮಾಡಲಾಗಿದೆ. ಆಸ್ತಿ ಮಾಲೀಕ ಒಂದು ಸಂಖ್ಯೆ ಹಾಕಿದರೆ ಆಸ್ತಿಯ ಸಂಪೂರ್ಣ ಮಾಹಿತಿ ಸಿಗುತ್ತದೆ. ನಗರದಲ್ಲಿ 25 ಲಕ್ಷ ಆಸ್ತಿಗಳಿವೆ. ಈವೆರೆಗೆ 9.50 ಲಕ್ಷ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ. ಅಭಿಯಾನದ ರೀತಿ ಮಾಡುತ್ತಿದ್ದೇವೆ. ಎ ಖಾತಾ ಮತ್ತು ಬಿ ಖಾತಾ ಮಾಡುತ್ತಿದ್ದೇವೆ. ಆಸ್ತಿಗಳ ದಾಖಲೆಗಳನ್ನು ವ್ಯವಸ್ಥಿತ ಮಾಡುತ್ತಿದ್ದೇವೆ. ಒನ್‌ ಟೈಮ್‌ ಸೆಟ್ಲಮೆಂಟ್‌ನಿಂದ 2.6 ಲಕ್ಷ ಆಸ್ತಿ ಮಾಲೀಕರಿಗೆ ಅನುಕೂಲವಾಗಿದೆ. ಟಿಡಿಆರ್‌ ಪಾಲಿಸಿ ರೂಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಟಿಡಿಆರ್‌ ಹಕ್ಕು ಎಕ್ಸ್‌ಚೇಂಜ್‌ಗೆ ಅವಕಾಶ ಕಲ್ಪಿಸುವ ಚಿಂತನೆಯಿದೆ ಎಂದು ಶಿವಕುಮಾರ್‌ ಹೇಳಿದರು.

ಮೇಕಾದಾಟು ಯೋಜನೆಗೆ ಶೀಘ್ರ ಚಾಲನೆ:

ಬೆಂಗಳೂರು ನಗರದಲ್ಲಿ ಕಸದ ಮಾಫಿಯಾ ನೋಡಿದರೆ ಗಾಬರಿ ಆಗುತ್ತದೆ. ಸದ್ಯ 33 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಮಾಡಲಾಗಿದೆ. ಸಂಚಾರ ಸಮಸ್ಯೆ ದಟ್ಟಣೆ ಪರಿಹಾರಕ್ಕಾಗಿ ಎಲಿವೇಟೆಡ್‌ ಕಾರಿಡಾರ್‌, ಬಫರ್ ರಸ್ತೆ ಅಭಿವೃದ್ಧಿ, 300 ಕಿ.ಮೀ. ಹೊಸ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಾವೇರಿ 6ನೇ ಹಂತಕ್ಕೆ ಡಿಪಿಆರ್‌ ಸಿದ್ಧಪಡಿಸಲಾಗಿದೆ. ಮೇಕೆದಾಟು ಯೋಜನೆಗೆ ಜಾರಿಯಾದರೆ, ಮುಂದಿನ 25-30ಕ್ಕೆ ನೀರಿನ ಸಮಸ್ಯೆ ಇರುವುದಿಲ್ಲ. ಈಗಾಲೇ ಸುಪ್ರೀಂ ಕೋರ್ಟ್‌ ತಮಿಳುನಾಡು ಅರ್ಜಿ ವಜಾಗೊಳಿಸಿದೆ. ಹೀಗಾಗಿ ಶೀಘ್ರದಲ್ಲೇ ಯೋಜನೆಗೆ ಚಾಲನೆ ನೀಡಲಾಗುವುದು. ಇದರಿಂದ ಕುಡಿಯುವ ನೀರಿನ ಜೊತೆಗೆ 400 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಅವಕಾಶವಿದೆ ಎಂದು ಹೇಳಿದರು.

ಖಾಸಗಿ ಸ್ಥಳಗಳಿಗೂ ಪಾರ್ಕಿಂಗ್‌ ಪಾಲಿಸಿಗೆ ಚಿಂತನೆ:

ನಗರಕ್ಕೆ ವಾಹನಗಳ ನಿಲುಗಡೆ ಪಾರ್ಕಿಂಗ್‌ ಪಾಲಿಸಿಬೇಕು. ಖಾಸಗಿ ಜಾಗಗಳಿಗೂ ಪಾರ್ಕಿಂಗ್‌ ಪಾಲಿಸಿ ತರುವ ಚಿಂತನೆಯಿದೆ. ಇನ್ನು ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಕೆಂಪೇಗೌಡ ಲೇಔಟ್‌ನಲ್ಲಿ ಸ್ಕೈ ಡೆಕ್‌ ನಿರ್ಮಿಸಲು ಟೆಂಡರ್ ಆಗುತ್ತಿದೆ. ಈಜೀಪುರ ಮೇಲ್ಸೇತುವೆ ಕಾಮಗಾರಿ ಮೂರ್ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳದೆ. ಹೊಸಕೆರೆಹಳ್ಳಿ ಮೇಲ್ಸೇತುವೆ ಪೂರ್ಣಗೊಂಡಿದೆ. ಗೊರಗುಂಟೆಪಾಳ್ಯ ಜಂಕ್ಷನ್‌ ಸಂಚಾರ ಸಮಸ್ಯೆ ಗಮನಕ್ಕೆ ಇದೆ. ಕೆಂಗೇರಿಯಿಂದ ಬಾಲಗಂಗಾಧರನಾಥ ಮೇಲ್ಸೇತುವೆ ವರೆಗೆ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಬೇಡಿಕೆಯಿದೆ. ನೆಲಮಂಗಲ ರಸ್ತೆ ಸಂಚಾರ ಸಮಸ್ಯೆ ಬಗ್ಗೆಯೂ ಗಮನಕ್ಕೆ ಬಂದಿದೆ. ಎಲ್ಲದಕ್ಕೂ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.

ಫ್ಲೈಯಿಂಗ್‌ ಟ್ರೈನಿಂಗ್‌ ಸ್ಕೂಲ್ ಸ್ಥಳಾಂತರ ಇಲ್ಲ : ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಒಟ್ಟು 11 ಸಾವಿರ ಕೋಟಿ ರು. ಕೊಟ್ಟಿದೆ. ರಾಜ್ಯ ಸರ್ಕಾರವು 57 ಸಾವಿರ ಕೋಟಿ ರು. ವೆಚ್ಚ ಮಾಡಿದೆ. ಇನ್ನೂ ಜಕ್ಕೂರು ವೈಮಾನಿಕ ತರಬೇತಿ ಶಾಲೆ ಸ್ಥಳಾಂತರ ವಿಚಾರ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಬಂದಿತ್ತು. ಮುಖ್ಯಮಂತ್ರಿಗಳು ಸ್ಥಳಾಂತರ ಬೇಡ ಎಂದಿದ್ದಾರೆ. ಹೀಗಾಗಿ ಸ್ಥಳಾಂತರ ಯೋಚನೆ ಸದ್ಯಕ್ಕೆ ಕೈಬಿಟ್ಟಿದ್ದೇವೆ. ಇನ್ನು ಒಸಿ, ಸಿಸಿ ಪಡೆಯದ ಮನೆಗಳಿಗೆ ವಿದ್ಯುತ್‌, ನೀರಿನ ಸಂಪರ್ಕಕ್ಕೆ ವಿನಾಯಿತಿ ನೀಡುವ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ಮೋಟಾರು ವಾಹನಗಳ ತೆರಿಗೆ ಬಿಲ್‌ಗೆ ಚರ್ಚೆ ಇಲ್ಲದೆ ಅಂಗೀಕಾರ: ಸಚಿವ ಎಚ್‌.ಕೆ.ಪಾಟೀಲ್‌
ಹೂವಿನಂತಹ ಮೂವರು ಮಕ್ಕಳನ್ನು ಬಾವಿಗೆ ಎಸೆದು ತಾನೂ ಪ್ರಾಣಬಿಟ್ಟ ತಾಯಿ; ವಿಜಯಪುರದಲ್ಲಿ ಘೋರ ದುರಂತ