* ಡ್ಯಾಂ ನೆಚ್ಚಿರುವ ಜನ-ಜಾನುವಾರುಗಳಲ್ಲಿ ಆತಂಕ
* ತ್ಯಾಜ್ಯದಿಂದಲೇ ಸಮಸ್ಯೆ
* ಶುದ್ಧೀಕರಿಸದೇ ನೀರು ಕುಡಿಯಲು ಯೋಗ್ಯವಲ್ಲ
ಕೃಷ್ಣ ಎನ್. ಲಮಾಣಿ
ಹೊಸಪೇಟೆ(ಆ.28): ಕಲ್ಯಾಣ ಕರ್ನಾಟಕದ ಜೀವನಾಡಿ ದ ನೀರು ಹಚ್ಚಹಸಿರು ಬಣ್ಣಕ್ಕೆ ತಿರುಗಿದ್ದು, ಜಲಾಶಯ ನೆಚ್ಚಿರುವ ಜನ, ಜಾನುವಾರುಗಳಲ್ಲಿ ಆತಂಕ ಮನೆ ಮಾಡಿದೆ.
ಕಳೆದ 12 ವರ್ಷಗಳಿಂದಲೂ ಡ್ಯಾಂ ನೀರು ಪದೇ ಪದೆ ಹಸಿರು ಬಣ್ಣಕ್ಕೆ ತಿರುಗುತ್ತಿದ್ದು, ಸಂಬಂಧಿಸಿದ ಇಲಾಖೆ ಈ ಬಗ್ಗೆ ವೈಜ್ಞಾನಿಕ ಸಂಶೋಧನೆ ಕೈಗೊಂಡು ಕ್ರಮವಹಿಸಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.
ತುಂಗಭದ್ರಾ ಜಲಾಶಯ 100.855 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕೃಷಿ ಜಮೀನು ಮತ್ತು ಕುಡಿಯಲು ನೀರು ಒದಗಿಸುತ್ತದೆ. ಈಗ ಜಲಾಶಯದ ನೀರು ಹಚ್ಚಹಸಿರು ಬಣ್ಣಕ್ಕೆ ತಿರುಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕುಡಿಯಲು ಯೋಗ್ಯವಲ್ಲ:
ತುಂಗಭದ್ರಾ ಜಲಾಶಯದ ನೀರು ಶುದ್ಧೀಕರಿಸದೇ ಕುಡಿಯಲು ಯೋಗ್ಯವಲ್ಲ ಎಂದು 2009-10ನೇ ಸಾಲಿನಲ್ಲಿ ಧಾರವಾಡದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊಸಪೇಟೆ ನಗರಸಭೆಗೆ ವರದಿ ಸಲ್ಲಿಸಿತ್ತು. ನಗರಸಭೆ ಅಧಿಕಾರಿಗಳು ಬಾಟಲಿಯಲ್ಲಿ ಸಂಗ್ರಹಿಸಿಕೊಟ್ಟ ನೀರನ್ನು ಪರೀಕ್ಷಿಸಿ ಆಗ ವರದಿ ನೀಡಲಾಗಿತ್ತು. ಆದರೂ ಇಲ್ಲಿ ವರೆಗೂ ಜಲಾಶಯದ ನೀರಿಗೆ ತ್ಯಾಜ್ಯ ಸೇರದಂತೆ ಎಚ್ಚರಿಕೆ ವಹಿಸುವ ಕಾರ್ಯಗಳು ನಡೆದಿಲ್ಲ.
ಬೆಂಗಳೂರಿನ HAL ಬಳಿಕ ತುಂಗಭದ್ರಾ ಅಣೆಕಟ್ಟಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ!
ಏಕೆ ಸಮಸ್ಯೆ?
ಶಿವಮೊಗ್ಗ, ಹರಿಹರ ಭಾಗದಲ್ಲಿ ಹೆಚ್ಚಾಗಿ ಭತ್ತ ಮತ್ತು ಅಡಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು,ಅತಿಯಾದ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಅಲ್ಲಿನ ನೀರು ಡ್ಯಾಂಗೆ ಸೇರುತ್ತಿದೆ. ಇನ್ನು ಕಾರ್ಖಾನೆಗಳ ತ್ಯಾಜ್ಯ ಹಾಗೂ ಜಲಾಶಯದ ಮೇಲ್ಭಾಗದ ನಗರ, ಪಟ್ಟಣ, ಹಳ್ಳಿಗಳ ಚರಂಡಿಗಳ ಮಲೀನ ನೀರೂ ಜಲಾಶಯದ ಒಡಲು ಸೇರುತ್ತಿರುವುದು ಕೂಡ ಕಾರಣವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಜಲಾಶಯದ ಹಿನ್ನೀರಿನ (ಗುಂಡಾ ಕಾದಿಟ್ಟ ಅರಣ್ಯ) ಪ್ರದೇಶದಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡು ಬಂದಿದೆ. ಪ್ರತಿವರ್ಷ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಹಸಿರು ಬಣ್ಣಕ್ಕೆ ತಿರುಗುವ ನೀರು ಈ ಬಾರಿ ಮುಂಚಿತವಾಗಿ ಕಾಣಿಸಿಕೊಂಡಿದೆ.
ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್‌ರಾಜ್ಯದ ಯಾವುದೇ ನದಿಗಳಿಗೆ ತ್ಯಾಜ್ಯ ಹರಿಸುವ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಡುವೆ ತುಂಗಭದ್ರಾ ಜಲಾಶಯದ ನೀರು ಹಸಿರುಬಣ್ಣಕ್ಕೆ ತಿರುಗಿದೆ.
ಸೈನೋ ಬ್ಯಾಕ್ಟೀರಿಯಾ ಎಫೆಕ್ಟ್:
ತುಂಗಭದ್ರಾ ಜಲಾಶಯದಲ್ಲಿ ನೀಲಿ ಹಸಿರು ಪಾಚಿ(ಬ್ಲೂಗ್ರೀನ್‌ಆಲ್ಗಿ) ಅಪಾರ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಈ ರೀತಿ ಉಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಇಲ್ಲಿ ಅತಿಯಾಗಿ ಸೈನೋ ಬ್ಯಾಕ್ಟೀರಿಯಾಗಳ ಉತ್ಪತ್ತಿಯಿಂದ ಹೀಗಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಜಲಾಶಯದಲ್ಲಿ ತ್ಯಾಜ್ಯ ಸೇರಿ ಪಾಸ್ಪೇಟ್, ನೈಟ್ರೇಟ್, ಸಲ್ಪೆಟ್‌ಮತ್ತು ಪೋಟ್ಯಾಸ್‌ಹೆಚ್ಚಾಗಿ ಸಿಗುತ್ತದೆ. ಇದನ್ನು ತಿಂದು ಬಿಸಿಲು ಹೆಚ್ಚಾದಾಗ ಸೈನೋ ಬ್ಯಾಕ್ಟೀರಿಯಾ ಹೆಚ್ಚು ಉತ್ಪತ್ತಿಯಾಗುತ್ತಿದೆ ಎಂದು ಹೇಳುತ್ತಾರೆ ತಜ್ಞ ಸಮದ್ ಕೊಟ್ಟೂರು.
ಕಾರ್ಖಾನೆಗಳ ತ್ಯಾಜ್ಯ, ಚರಂಡಿಗಳ ಮಲೀನ ನೀರು, ರೈತರ ಕೃಷಿ ಭೂಮಿಗಳಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರದ ಪರಿಣಾಮದಿಂದ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಬಹುದು. ರೈತರಲ್ಲಿ ಸಾವಯವ ಕೃಷಿ ಕುರಿತು ಜಾಗೃತಿ ಮೂಡಿಸಬೇಕು. ಇನ್ನೂ ಕಾರ್ಖಾನೆ ಹಾಗೂ ಜನವಸತಿ ಪ್ರದೇಶದ ತ್ಯಾಜ್ಯ ನೇರ ಜಲಾಶಯಕ್ಕೆ ಸೇರದಂತೆ ನಿಗಾವಹಿಸಬೇಕು. ಶುದ್ಧೀಕರಿಸದೇ ನೀರು ಕುಡಿಯಬಾರದು ಎಂದು ಹೊಸಪೇಟೆಯ ಪರಿಸರ ತಜ್ಞರು ಸಮದ್ ಕೊಟ್ಟೂರು ತಿಳಿಸಿದ್ದಾರೆ.
ಈ ಹಿಂದೆ ತುಂಗಭದ್ರಾ ಜಲಾಶಯದ ನೀರನ್ನು ಧಾರವಾಡ ಪ್ರಯೋಗಾಲಯಕ್ಕೆ ಕಳುಹಿಸಿ, ಪರೀಕ್ಷಿಸಲಾಗಿತ್ತು. ಈಗ ಮತ್ತೆ ನೀರು ಹಸಿರುಬಣ್ಣಕ್ಕೆ ತಿರುಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.