Koppal: ರೈತರಿಗಿಲ್ಲದ ಡ್ಯಾಂ ನೀರು ಕಾರ್ಖಾನೆಗೆ: ಡೋಂಟ್‌ ಕೇರ್‌ ಎನ್ನುತ್ತಿರುವ ಅಧಿಕಾರಿಗಳು..!

By Girish Goudar  |  First Published Apr 14, 2022, 10:07 AM IST

*  ರೈತ ಸಂಘಟನೆಗಳ ಹೋರಾಟಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು
*  ಸಚಿವರೇ ಕ್ರಮಕ್ಕೆ ಮುಂದಾದರೂ ಸಾಥ್‌ ನೀಡದ ಅಧಿಕಾರಿಗಳು
*  ತುಂಗಭದ್ರಾ ತುಂಬಿ ತುಳುಕಿದರೂ ರೈತರಿಗೆ ತಪ್ಪದ ಗೋಳು
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಏ.14):  ತುಂಗಭದ್ರಾ ಜಲಾಶಯದ (Tungabhadra Dam) 40 ವರ್ಷಗಳ ಇತಿಹಾಸದಲ್ಲಿಯೇ ಈ ಬಾರಿ ಅತ್ಯಧಿಕ ನೀರು ಹರಿದು ಬಂದಿದೆ. ಆದರೂ ನೀರಿನ ಬವಣೆ ತಪ್ಪುತ್ತಿಲ್ಲ. ರೈತರ ಭೂಮಿಗೆ(Farmers Land) ಬಿಡುವ ಹನಿ ನೀರಿಗೂ ಲೆಕ್ಕ ಹಾಕಲಾಗುತ್ತಿದೆಯಾದರೂ ಕಾರ್ಖಾನೆಗಳಿಗೆ ಮಾತ್ರ ನೀರಿನ ಸಮಸ್ಯೆಯೇ ಇಲ್ಲ ಮತ್ತು ಲೆಕ್ಕವೂ ಇಲ್ಲ! ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ(Back Water) ಕಿರ್ಲೋಸ್ಕರ್‌, ಕಲ್ಯಾಣಿ ಹಾಗೂ ಜಿಂದಾಲ್‌ ಸೇರಿದಂತೆ ಅನೇಕ ಕಾರ್ಖಾನೆಗಳಿಗೆ(Factories) ನೀರು(Water ) ಹಂಚಿಕೆ ಮಾಡಲಾಗಿದೆ. ಆದರೆ, ಹಂಚಿಕೆಯಾಗಿರುವ ನೀರಿನ ಪ್ರಮಾಣಕ್ಕೂ ಮತ್ತು ಕಾರ್ಖಾನೆಯವರು ಪಡೆಯುತ್ತಿರುವ ನೀರಿಗೂ ಯಾವುದೇ ಲೆಕ್ಕ ಇಲ್ಲ ಎನ್ನುವುದು ರೈತರ ಆರೋಪ.

Tap to resize

Latest Videos

undefined

ನೀರು ಹಂಚಿಕೆ:

ಕಿರ್ಲೋಸ್ಕರ್‌, ಕಲ್ಯಾಣಿ, ಜಿಂದಾಲ್‌(Jindal), ರಾಧಾ- ಕೃಷ್ಣ ಸೇರಿದಂತೆ 6 ಕಾರ್ಖಾನೆಗಳಿಗೆ ವಾರ್ಷಿಕ 2.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಆದರೆ, ಇದುವರೆಗೂ ಅವರೇ ನೀಡುವ ಲೆಕ್ಕಾಚಾರದ ಪ್ರಕಾರ ಕೇವಲ 1.6 ಟಿಎಂಸಿ ನೀರು ಬಳಕೆ ಮಾಡಲಾಗಿದೆ. ಈಗ ನೀರಿನ ಅಭಾವ ಇರುವುದರಿಂದ ನೀರು ಎತ್ತುತ್ತಿಲ್ಲ ಎನ್ನಲಾಗಿದೆ. ಆದರೆ, ರೈತರ ಪ್ರಕಾರ ನಿರಂತರವಾಗಿ ಕಾರ್ಖಾನೆಗಳಿಗೆ ನೀರು ಪೂರೈಕೆಯಾಗುತ್ತಿದೆ ಎನ್ನುತ್ತಾರೆ.

River Alignment: ಕೃಷ್ಣೆ, ತುಂಗಭದ್ರಾ ಸೇರಿ​ದರೆ ಡ್ಯಾಂಗೆ ನೀರಿನ ಖಾತರಿ!

ಕಾರ್ಖಾನೆಯವರಿಗೆ ನೀರು ಹಂಚಿಕೆಯಾಗಿದ್ದರೂ ಅದು ಸದಾಕಾಲವಲ್ಲ. ಕೇವಲ ಒಳಹರಿವು(Inflow) ಇದ್ದಾಗ ಕಾರ್ಖಾನೆಯವರು ಜಲಾಶಯದ ಹಿನ್ನೀರು ಭಾಗದಲ್ಲಿ ನೀರು ಪಡೆಯಬೇಕು ಎನ್ನುವ ಷರತ್ತು ಇದೆ. ಅಲ್ಲದೇ ನೀರನ್ನು ಮಿತವಾಗಿ ಬಳಸಬೇಕು. ಹೀಗೆ ತೆಗೆದುಕೊಳ್ಳುವ ನೀರಿಗೆ ನೀರಾವರಿ ಇಲಾಖೆ(Department of Irrigation) ಅಳತೆಯನ್ನೇ ಮಾಡುತ್ತಿಲ್ಲ. ಅವರು ಕೊಟ್ಟಮಾಹಿತಿಯನ್ನೆ ಅಧಿಕಾರಿಗಳು ದಾಖಲು ಮಾಡುತ್ತಾರೆ. ಆದರೆ, ನೀರಾವರಿ ಇಲಾಖೆಯಿಂದಲೇ ಅಳತೆಯಾಗಬೇಕು ಎನ್ನುವ ಬೇಡಿಕೆ ರೈತರದ್ದು.

ತುಂಗಭದ್ರಾ ಜಲಾಶಯದ ಹಿನ್ನೀರು ಭಾಗದಲ್ಲಿ ಪಂಪ್‌ಸೆಟ್‌ ಅಳವಡಿಸಿ ನೀರು ಖಾಲಿಯಾಗುತ್ತಿದ್ದಂತೆ ಜಲಾಶಯದ ಗರ್ಭಭಾಗಕ್ಕೂ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಕಾಲುವೆಗೆ ನೀರು ಇಲ್ಲದಾಗುವುದು ಅಲ್ಲದೆ ಹಿನ್ನೀರು ಭಾಗದಿಂದ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೂ ಅಭಾವ ಆಗುತ್ತಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವುದು ರೈತ ಸಂಘಟನೆಯ ಆರೋಪ. ಸುಮಾರು ವರ್ಷಗಳಿಂದ ಇಲ್ಲಿಯೇ ಬೇರು ಬಿಟ್ಟಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು ಎನ್ನುವ ರೈತರ ಆಕ್ರೋಶಕ್ಕೆ ಬೆಲೆ ಇಲ್ಲದಂತಾಗಿದೆ.

ರೈತರ ಆಕ್ರೋಶದಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌(Anand Singh) ಅವರು ತುಂಗಭದ್ರಾ ಜಲಾಶಯ ಸ್ಥಳಕ್ಕೆ ಭೇಟಿ ನೀಡಿ ನೀರೆತ್ತುವುದನ್ನು ಪರಿಶೀಲನೆ ಮಾಡಿದ್ದರಲ್ಲದೆ ಕೂಡಲೇ ರೈತರ ಒತ್ತಾಯದಂತೆ ಅಧಿಕಾರಿಗಳನ್ನು ಸ್ಥಳಾಂತರ ಮಾಡುವಂತೆಯೂ ಸೂಚನೆ ನೀಡಿದ್ದರು.

ಹೀಗೆ ಸಚಿವರು ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲೇ ಇಲ್ಲ. ಯಾವ ಅಧಿಕಾರಿಯೂ ಎತ್ತಂಗಡಿ ಆಗಲೇ ಇಲ್ಲ. ಇದರಿಂದ ಸಿಟ್ಟಿಗೆದ್ದ ಸಚಿವ ಆನಂದ ಸಿಂಗ್‌ ಅವರು ಅಮಾನತು ಮಾಡುವಂತೆಯೂ ಸೂಚನೆ ನೀಡಿದ್ದಾರೆಯಾದರೂ ಅದು ಕಾರ್ಯಗತವಾಗಿಲ್ಲ.

Tungabhadra Dam: ರಾಜ್ಯಕ್ಕೆ 9 ಟಿಎಂಸಿ ನೀರು ಖೋತಾ: ಸಂಕಷ್ಟದಲ್ಲಿ ಅನ್ನದಾತ

ಅಧಿಕಾರಿಗಳ ಪರ​- ವಿರೋಧ:

ಈ ನಡುವೆ ರೈತ ಸಂಘಟನೆಯಲ್ಲಿಯೇ ಬಿರುಕು ಮೂಡಿದೆ ಎನ್ನಲಾಗಿದೆ. ಕೆಲವೊಂದು ರೈತ ಸಂಘಟನೆಗಳು ಅಧಿಕಾರಿಗಳನ್ನು ಎತ್ತಂಗಡಿ ಮಾಡುವಂತೆ ಪಟ್ಟು ಹಿಡಿದಿದ್ದರೆ ಇನ್ನು ಕೆಲವು ರೈತ ಸಂಘಟನೆಯ ಮುಖಂಡರು ಸಚಿವ ಆನಂದ ಸಿಂಗ್‌ ಅವರಿಗೆ ಕರೆ ಮಾಡಿ ಅಧಿಕಾರಿಗಳನ್ನು ಎತ್ತಂಗಡಿ ಮಾಡದಿರುವಂತೆ ಆಗ್ರಹಿಸಿದ್ದಾರೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದು, ಅವರನ್ನು ಎತ್ತಂಗಡಿ ಮಾಡಬೇಡಿ. ಅಮಾನತು ಮಾಡುವುದು ಸರಿಯಲ್ಲ ಎಂದಿದ್ದಾರಂತೆ.
ಕಾರ್ಖಾನೆಗಳಿಗೆ ನೀರು ಬಳಕೆ ಹಾಗೂ ಇತರೆ ಸಮಸ್ಯೆಗಳ ಕುರಿತು ಸ್ಪಂದನೆ ಮಾಡದೆ ಇರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಈ ಕುರಿತು ವಿಶೇಷ ನಿಗಾ ಇಡಲಾಗಿದೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ತಿಳಿಸಿದ್ದಾರೆ.  

ರೈತರ ಭೂಮಿಗೆ ನೀರಿಲ್ಲದಿದ್ದರೂ ಕಾರ್ಖಾನೆಗಳಿಗೆ ನೀರು ಅವ್ಯಾಹತವಾಗಿ ಪಂಪ್‌ಸೆಟ್‌ ಮೂಲಕ ಎತ್ತಲಾಗುತ್ತದೆ. ಜಲಾಶಯದ ಗರ್ಭಭಾಗಕ್ಕೆ ಪಂಪ್‌ಸೆಟ್‌ ಅಳವಡಿಸಿ, ನೀರೆತ್ತಲಾಗುತ್ತದೆ ಅಂತ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಅಮರೇಶ ಸಾಗಬಾವಿ ಹೇಳಿದ್ದಾರೆ. 
 

click me!