Tumkur : ಜಿಲ್ಲೆಯ ಮೀಸಲು ಕ್ಷೇತ್ರದಲ್ಲಿ ಗೆದ್ದವರು ಇವರೆ!

By Kannadaprabha News  |  First Published Apr 27, 2023, 5:45 AM IST

ಜಿಲ್ಲೆ ವ್ಯಾಪ್ತಿಯಲ್ಲಿ ಕೊರಟಗೆರೆ, ಮಧುಗಿರಿ, ಪಾವಗಡ ಹಾಗೂ ಗೂಳೂರು ಮೀಸಲು ಕ್ಷೇತ್ರವಾಗಿತ್ತು. ಆದರೆ ಈಗ ಪಾವಗಡ ಮತ್ತು ಕೊರಟಗೆರೆ ಮೀಸಲು ಕ್ಷೇತ್ರವಾಗಿ ಉಳಿದಿದೆ.


ಉಗಮ ಶ್ರೀನಿವಾಸ್‌

 ತುಮಕೂರು :  ಜಿಲ್ಲೆ ವ್ಯಾಪ್ತಿಯಲ್ಲಿ ಕೊರಟಗೆರೆ, ಮಧುಗಿರಿ, ಪಾವಗಡ ಹಾಗೂ ಗೂಳೂರು ಮೀಸಲು ಕ್ಷೇತ್ರವಾಗಿತ್ತು. ಆದರೆ ಈಗ ಪಾವಗಡ ಮತ್ತು ಕೊರಟಗೆರೆ ಮೀಸಲು ಕ್ಷೇತ್ರವಾಗಿ ಉಳಿದಿದೆ.

Tap to resize

Latest Videos

1962ರಲ್ಲಿ ಪಾವಗಡ ಮೀಸಲು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ನ ಆರ್‌. ಕೆಂಚಪ್ಪ ಅವರು 12 ಸಾವಿರದ 976 ಮತಗಳಿಂದ ಆಯ್ಕೆಯಾಗಿದ್ದರು. ಕೊರಟಗೆರೆ ಮೀಸಲು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಆರ್‌. ಚೆನ್ನಿಗರಾಮಯ್ಯ ಅವರು 9053 ಮತ ಪಡೆದು ಜಯದ ನಗೆ ಬೀರಿದ್ದರು.

ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದ ಚೆನ್ನಿಗರಾಮಯ್ಯ ಅವರ ರಾಜೀನಾಮೆಯಿಂದ ಅದೇ ವರ್ಷ ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಅಭ್ಯರ್ಥಿ ಎಸ್‌. ಆಂಜನೇಯ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎಚ್‌.ಎಂ. ಗಂಗಾಧರಯ್ಯ ಅವರನ್ನು ಸೋಲಿಸಿದ್ದರು.

1967ರಲ್ಲಿ ಕೊರಟಗೆರೆ ಬದಲಿಗೆ ಗೂಳೂರು ಮೀಸಲು ಕ್ಷೇತ್ರವಾಯಿತು. ಪಾವಗಡ ಮೀಸಲು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಿ. ಆಂಜನಪ್ಪ ಅವರು 19371 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಹಾಗೆಯೇ ಗೂಳೂರು ಮೀಸಲು ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್‌ ಪಕ್ಷದಿಂದ ಸ್ಪರ್ಧಿಸಿದ್ದ ಗಂಗಾಭೋವಿ ಅವರು 10509 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. 1972ರಲ್ಲಿ ಪಾವಗಡ ಮೀಸಲು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೆ.ಆರ್‌. ತಿಮ್ಮರಾಯಪ್ಪ ಅವರು 26245 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಗೂಳೂರು ಮೀಸಲು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ದೊಡ್ಡ ತಿಮ್ಮಯ್ಯ 18307 ಮತ ಪಡೆದು ಜಯಭೇರಿ ಬಾರಿಸಿದ್ದರು.

1978ರಲ್ಲಿ ನಡೆದ ಚುನಾವಣೆಯಲ್ಲಿ ಗೂಳೂರು ಮೀಸಲು ಕ್ಷೇತ್ರ ಇಲ್ಲವಾಗಿ ಮಧುಗಿರಿ ಮೀಸಲು ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಆ ವರ್ಷ ಪಾವಗಡ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ನ ನಾಗಪ್ಪ ಅವರು 31 ಸಾವಿರದ 511 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಹಾಗೆಯೇ ಮಧುಗಿರಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಗಂಗಹನುಮಯ್ಯ ಅವರು 32 ಸಾವಿರದ 686 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. 1983ರ ಚುನಾವಣೆಯಲ್ಲಿ ಪಾವಗಡದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉಗ್ರನರಸಿಂಹಪ್ಪ ಅವರು 32274 ಮತಗಳನ್ನು ಪಡೆದು ಕಾಂಗ್ರೆಸ್‌ನ ಕೆ.ಬಿ. ಕೃಷ್ಣಮೂರ್ತಿ ವಿರುದ್ಧ ಗೆದ್ದಿದ್ದರು. ಹಾಗೆಯೇ ಮಧುಗಿರಿ ಮೀಸಲು ಕ್ಷೇತ್ರದಿಂದ ಜೆಎನ್‌ಪಿಯಿಂದ ರಾಜವರ್ಧನ್‌ ಅವರು 29 ಸಾವಿರದ 159 ಮತಗಳನ್ನು ಪಡೆದು ಗಂಗಹನುಮಯ್ಯ ವಿರುದ್ಧ ಗೆಲುವು ಸಾಧಿಸಿದ್ದರು.

1985ರಲ್ಲಿ ಪಾವಗಡದಿಂದ ಜೆಎನ್‌ಪಿ ಪಕ್ಷದಿಂದ ಸೋಮ್ಲಾನಾಯಕ್‌ ಅವರು 40 ಸಾವಿರದ 964 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಹಾಗೆಯೇ ಮಧುಗಿರಿಯಿಂದ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ರಾಜವರ್ಧನ್‌ ಅವರು 41 ಸಾವಿರದ 992 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.

1989ರಲ್ಲಿ ಪಾವಗಡದಿಂದ ವೆಂಕಟರಮಣಪ್ಪ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 45 ಸಾವಿರದ 626 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಮಧುಗಿರಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ. ಜಿ. ಪರಮೇಶ್ವರ್‌ ಅವರು 47477 ಮತಗಳನ್ನು ಪಡೆದು ಜನತಾದಳದಿಂದ ಸ್ಪರ್ಧಿಸಿದ್ದ ರಾಜವರ್ಧನ್‌ ವಿರುದ್ಧ ಗೆಲುವು ಸಾಧಿಸಿದ್ದರು. 1994ರಲ್ಲಿ ಪಾವಗಡದಿಂದ ಜನತಾದಳದಿಂದ ಸ್ಪರ್ಧಿಸಿದ್ದ ಸೋಮ್ಲಾನಾಯಕ್‌ ಅವರು 46 ಸಾವಿರದ 739 ಮತಗಳನ್ನು ಪಡೆದು ಜಯಸಾಧಿಸಿದ್ದರು. ಮಧುಗಿರಿ ಮೀಸಲು ಕ್ಷೇತ್ರದಿಂದ ಜನತಾದಳದಿಂದ ಸ್ಪರ್ಧಿಸಿದ್ದ ಗಂಗಹನುಮಯ್ಯ ಅವರು 45 ಸಾವಿರದ 303 ಮತಗಳನ್ನುಪಡೆದು ಕಾಂಗ್ರೆಸ್‌ನ ಜಿ. ಪರಮೇಶ್ವರ್‌ ಅವರನ್ನು ಸೋಲಿಸಿದ್ದರು.

1999ರಲ್ಲಿ ಪಾವಗಡದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೆಂಕಟರಮಣಪ್ಪ ಅವರು 65 ಸಾವಿರದ 999 ಮತಗಳನ್ನು ಪಡೆದು ಜೆಡಿಯುನಿಂದ ಸ್ಪರ್ಧಿಸಿದ್ದ ಸೋಮ್ಲಾನಾಯಕ್‌ ಅವರನ್ನು ಸೋಲಿಸಿದ್ದರು. ಮಧುಗಿರಿಯಂದ ಡಾ.ಜಿ.ಪರಮೇಶ್ವರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 71 ಸಾವಿರದ 895 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.

2004ರಲ್ಲಿ ನಡೆದ ಚುನಾವಣೆಯಲ್ಲಿ ಪಾವಗಡ ಮೀಸಲು ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ.ಎಂ. ತಿಮ್ಮರಾಯಪ್ಪ ಅವರು 53 ಸಾವಿರದ 136 ಮತಗಳನ್ನು ಪಡೆದು ಕಾಂಗ್ರೆಸ್‌ನ ವೆಂಕಟರಮಣಪ್ಪ ವಿರುದ್ಧ ಗೆಲುವು ಸಾಧಿಸಿದ್ದರು. ಮಧುಗಿರಿಯಿಂದ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಡಾ.ಜಿ.ಪರಮೇಶ್ವರ್‌ ಅವರು 47 ಸಾವಿರದ 39 ಮತಗಳನ್ನು ಪಡೆದು ಜೆಡಿಎಸ್‌ನ ಕೆಂಚಮಾರಯ್ಯ ವಿರುದ್ಧ ಗೆಲುವು ಸಾಧಿಸಿದ್ದರು.

2008ರಲ್ಲಿ ಕೊರಟಗೆರೆಯಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ.ಜಿ.ಪರಮೇಶ್ವರ್‌ 49 ಸಾವಿರದ 276 ಮತಗಳನ್ನು ಪಡೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವಾಲೆ ಚಂದ್ರಯ್ಯ ವಿರುದ್ಧ ಗೆಲುವು ಸಾಧಿಸಿದ್ದರು. ಪಾವಗಡದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೆಂಕಟರಮಣಪ್ಪ ಅವರು 43 ಸಾವಿರದ 562 ಮತಗಳನ್ನು ಪಡೆದು ಜೆಡಿಎಸ್‌ ಕೆಂಚಮಾರಯ್ಯ ವಿರುದ್ಧ ಗೆದ್ದಿದ್ದರು.

2013ರಲ್ಲಿ ಪಾವಗಡದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ.ಎಂ.ತಿಮ್ಮರಾಯಪ್ಪ ಅವರು 68 ಸಾವಿರದ 686 ಮತಗಳನ್ನು ಪಡೆದು ಕಾಂಗ್ರೆಸ್‌ನ ವೆಂಕಟೇಶ್‌ ವಿರುದ್ಧ ಜಯಸಾಧಿಸಿದ್ದರು. ಕೊರಟಗೆರೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸುಧಾಕರಲಾಲ್‌ ಅವರು 72 ಸಾವಿರದ 229 ಮತ ಪಡೆದು ಪರಮೇಶ್ವರ್‌ ವಿರುದ್ಧ ಜಯಸಾಧಿಸಿದ್ದರು.

2018ರಲ್ಲಿ ಕೊರಟಗೆರೆಯಲ್ಲಿ ಕಾಂಗ್ರೆಸ್‌ನ ಡಾ. ಜಿ.ಪರಮೇಶ್ವರ್‌, ಜೆಡಿಎಸ್‌ನ ಸುಧಾಕರಲಾಲ್‌ ಅವರನ್ನು ಸೋಲಿಸಿ ಗೆದ್ದಿದ್ದರು. ಪಾವಗಡದಲ್ಲಿ ಕಾಂಗ್ರೆಸ್‌ನ ವೆಂಕಟರಮಣಪ್ಪ ಅವರು ಜೆಡಿಎಸ್‌ ತಿಮ್ಮರಾಯಪ್ಪ ವಿರುದ್ಧ ಗೆಲುವು ಸಾಧಿಸಿದ್ದರು.

click me!