ಕುಟುಂಬದ ಗೌರವ ಹಾಗೂ ಒಳಿತಿಗಾಗಿ ಕುಡಿತದಿಂದ ದೂರವಿರಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಪಿ.ರಾಜು ಹೇಳಿದರು.
ತುರುವೇಕೆರೆ : ಕುಟುಂಬದ ಗೌರವ ಹಾಗೂ ಒಳಿತಿಗಾಗಿ ಕುಡಿತದಿಂದ ದೂರವಿರಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಪಿ.ರಾಜು ಹೇಳಿದರು.
ಬಿಜಿಎಸ್ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹಲವಾರು ಸಂಘ ಸಂಸ್ಥೆಗಳ ನೆರವಿನಿಂದ ನಡೆಸಲಾಗುತ್ತಿರುವ ೧೭೪೨ ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕುಡಿತದಿಂದ ಕುಟುಂಬದ ಗೌರವ ಹಾಳಾಗಲಿದೆಸಂಕಷ್ಟ ಎದುರಾಗಲಿದೆ. ಮನೆಯಲ್ಲಿ ಅಶಾಂತಿಯ ವಾತಾವರಣ ಏರ್ಪಡಲಿದೆ. ಸಮಾಜದಲ್ಲಿ ನಿಕೃಷ್ಠ ಭಾವನೆ ಮೂಡಲಿದೆ. ಇವೆಲ್ಲವುಗಳಿಂದ ಮುಕ್ತಿ ಪಡೆಯಬೇಕೆಂದರೆ ಕುಡಿತದಿಂದ ದೂರವಿರುವುದೊಂದೇ ಏಕೈಕ ಮಾರ್ಗ ಎಂದು ಅವರು ಹೇಳಿದರು.
ಡಾ. ಚೌದ್ರಿ ನಾಗೇಶ್ ಅವರು ಮಾತನಾಡಿ, ಕುಡಿತವೆಂಬುದು ಒಂದು ಚಟವಿದ್ದಂತೆ. ಖುಷಿಗೋ, ದುಃಖಕ್ಕೋ ಒಮ್ಮೆ ಕುಡಿದಲ್ಲಿ, ಮದ್ಯಪಾನದಲ್ಲಿ ಮತ್ತು ಬರುವ ರಾಸಾಯನಿಕ ವಸ್ತು, ಮತ್ತೆ ಮತ್ತೆ ಕುಡಿಯುವಂತೆ ಮನಸ್ಸನ್ನು ಪ್ರೇರೇಪಿಸುತ್ತದೆ. ಇದೇ ಪ್ರವೃತ್ತಿ ಮುಂದುವರೆದಲ್ಲಿ ಕುಡಿತಕ್ಕೆ ದಾಸನಾಗಬೇಕಾಗುತ್ತದೆ. ಹಾಗಾಗಿ, ಕುಡಿತದಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲಾ ಮಾತನಾಡಿ, ಸಂಸ್ಥೆಯ ಉದ್ದೇಶ ಮದ್ಯಪಾನ ಮುಕ್ತ ಕುಟುಂಬ ಮಾಡುವುದಾಗಿದೆ. ಈಗಾಗಲೇ ತಮ್ಮ ಸಂಸ್ಥೆಯಿಂದ ಸಾವಿರಾರು ಮದ್ಯವರ್ಜನಾ ಶಿಬಿರ ಆಯೋಜಿಸಲಾಗಿದೆ. ಲಕ್ಷಾಂತರ ಮಂದಿ ಕುಡಿತದಿಂದ ದೂರ ಇದ್ದಾರೆ. ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಗೌರವಯುತವಾಗಿ ಬಾಳುತ್ತಿದ್ದಾರೆ. ಅದೇ ಪ್ರಕಾರ ಈ ಮದ್ಯವರ್ಜನ ಶಿಬಿರಕ್ಕೆ ಬಂದಿರುವ ಶಿಬಿರಾರ್ಥಿಗಳೂ ಮದ್ಯ ವ್ಯಸನದಿಂದ ದೂರವಾಗಿ ಉತ್ತಮ ಜೀವನ ನಿರ್ವಹಿಸಬೇಕು ಎಂಬುದೇ ಸಂಸ್ಥೆಯ ಉದ್ದೇಶ ಎಂದರು.
ವಕೀಲ ಪಿ.ಹೆಚ್.ಧನಪಾಲ್ ಮಾತನಾಡಿ, ಮದ್ಯವ್ಯಸನದಿಂದ ದೂರ ಉಳಿಸುವ ಪ್ರಕ್ರಿಯೆಯನ್ನು ಖಾಸಗಿ ಸಂಸ್ಥೆಗಳಿಂದ ಮಾಡಿಸಿದಲ್ಲಿ ಕನಿಷ್ಠ ಮೂವತ್ತು ಸಾವಿರ ರು. ಖರ್ಚಾಗುತ್ತವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಉಚಿತವಾಗಿ ಈ ಸೌಲಭ್ಯ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ.ಪಂ. ಸದಸ್ಯ ಯಜಮಾನ್ ಮಹೇಶ್, ಆರ್.ಮಲ್ಲಿಕಾರ್ಜುನ್, ಜಿಲ್ಲಾ ಜಾಗೃತಿ ವೇದಿಕೆಯ ಸದಸ್ಯ ರಾಗಿ ರಂಗೇಗೌಡರು, ಪ್ರಾಂಶುಪಾಲ ಗಂಗಾಧರ್ ದೇವರಮನೆ, ಲತ ಪ್ರಸನ್ನ, ಕ್ಷೇತ್ರ ಯೋಜನಾಧಿಕಾರಿ ಯಶೋಧರ್, ಮೇಲ್ವಿಚಾರಕ ಅವಿನಾಶ್, ಆನಂದ್ ರಾಜ್, ಅನಿತಾಶೆಟ್ಟಿ, ರಾಜಪ್ಪ, ಲೋಕೇಶ್, ಬಾಣಸಂದ್ರ ಸತ್ಯನಾರಾಯಣ್ ಉಪಸ್ಥಿತರಿದ್ದರು.