
ತುಮಕೂರು: ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವ ಇಂಜಿನಿಯರ್ ಒಬ್ಬರು ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ತುಮಕೂರಿನಲ್ಲಿ ಸಂಭವಿಸಿದೆ. ದೇವರಾಯನದುರ್ಗ ಬೆಟ್ಟದಿಂದ ಜಿಗಿದು 33 ವರ್ಷದ ಮಂಜು ಪ್ರಸಾದ್ ಎಂಬವರು ಸಾವಿಗೆ ಶರಣಾಗಿದ್ದಾರೆ.
ಮಂಜು ಪ್ರಸಾದ್ ಅವರು ಪಾವಗಡದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ (AEE) ಆಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ತುಮಕೂರು ನಗರದ ಸತ್ಯಮಂಗಲ ಪ್ರದೇಶದ ನಿವಾಸಿಯಾಗಿದ್ದ ಅವರು ಕಳೆದ ಕೆಲವು ತಿಂಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಸುಮಾರು ಒಂದೂವರೆ ವರ್ಷದ ಹಿಂದೆ ಅವರ ತಾಯಿ ಅನಾರೋಗ್ಯದಿಂದ ನಿಧನರಾದರು. ಆ ಬಳಿಕ ಮಂಜು ಪ್ರಸಾದ್ ಅವರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಇದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರಂತೆ. ಈ ಹಿನ್ನೆಲೆ ಅವರ ನಡೆನುಡಿಗಳಲ್ಲೂ ಬದಲಾವಣೆ ಕಂಡುಬಂದಿತ್ತು ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.
ಘಟನೆಯ ದಿನ ಬೆಳಿಗ್ಗೆ ಕೆಲಸಕ್ಕೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟ ಮಂಜು ಪ್ರಸಾದ್, ನಂತರ ಕೊರಟಗೆರೆಯಲ್ಲಿ ತಮ್ಮ ಸಂಬಂಧಿಕರೊಬ್ಬರಿಗೆ ತಮ್ಮ ಮೊಬೈಲ್ ಫೋನ್ ಹಾಗೂ ಮನೆಯ ಕೀಲಿಯನ್ನು ಒಪ್ಪಿಸಿದ್ದರು. ಮಿಟಿಂಗ್‌ಗೆ ಹೋಗುತ್ತಿದ್ದೇನೆ ಎಂದು ಹೇಳಿ ಅಲ್ಲಿಂದ ತೆರಳಿದ ಅವರು ಬಳಿಕ ದೇವರಾಯನದುರ್ಗ ಬೆಟ್ಟಕ್ಕೆ ತೆರಳಿ ಸಾವಿಗೆ ಶರಣಾಗಿದ್ದಾರೆ.
ಸಂಜೆವರೆಗೆ ಮನೆಗೆ ಮರಳದ ಹಿನ್ನೆಲೆ ಅನುಮಾನಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದು, ದೇವರಾಯನದುರ್ಗ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಕ್ಯಾತಸಂದ್ರ ಪೊಲೀಸ್ ಠಾಣೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು , ಸಾವಿಗೆ ನಿಖರ ಕಾರಣಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.