ತುಮಕೂರಿನಲ್ಲಿ ಒಬ್ಬ ಪ್ರಯಾಣಿಕನಿಗಾಗಿ 2 ಗಂಟೆ KSRTC ಬಸ್ ಕಾಯಿಸಿದ ಡಿಪೋ ಮ್ಯಾನೇಜರ್; ಸಾರಿಗೆ ಸಚಿವರೇ ನೀವೇನಂತೀರಿ?

Published : Oct 15, 2026, 04:22 PM IST
Tumakuru KSRTC Bus stand

ಸಾರಾಂಶ

ತುಮಕೂರು ಬಸ್ ನಿಲ್ದಾಣದಲ್ಲಿ ಬೆಂಗಳೂರಿನಿಂದ ಬರುತ್ತಿದ್ದ ಒಬ್ಬನೇ ಒಬ್ಬ ಪ್ರಯಾಣಿಕನಿಗಾಗಿ ಕೆಎಸ್‌ಆರ್‌ಟಿಸಿ ಬಸ್ ಅನ್ನು 2 ಗಂಟೆಗಳ ಕಾಲ ನಿಲ್ಲಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ಮಹಿಳೆಯೊಬ್ಬರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕರು ಡಿಪೋ ಮ್ಯಾನೇಜರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ತುಮಕೂರು (ಅ.15): ತುಮಕೂರು ಬಸ್ ನಿಲ್ದಾಣದಲ್ಲಿ ಒಬ್ಬನೇ ಒಬ್ಬ ಬೆಂಗಳೂರಿನಿಂದ ಬರುತ್ತಿದ್ದ ಪ್ರಯಾಣಿಕನಿಗಾಗಿ ಬರೋಬ್ಬರಿ 2 ಗಂಟೆಗಳ ಕಾಲ ಕೆಎಸ್‌ಆರ್‌ಟಿಸಿ (KSRTC) ಬಸ್ ಅನ್ನು ನಿಲ್ಲಿಸಿಕೊಂಡು ನಿಂತಿರುವ ಡಿಪೋ ಮ್ಯಾನೇಜರ್ ವಿರುದ್ಧ ಮಹಿಳೆಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದು ಸಾರ್ವಜನಿಕ ಬಸ್, ಯಾರಪ್ಪನ ಆಸ್ತಿಯಲ್ಲ' ಎಂದು ತರಾಟೆಗೆ ತೆಗೆದುಕೊಂಡಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆಯ ಹಿನ್ನೆಲೆ ಏನು?

ತುಮಕೂರು ಬಸ್ ನಿಲ್ದಾಣದಿಂದ ರಾಮೇನಹಳ್ಳಿಗೆ ತೆರಳಬೇಕಿದ್ದ KSRTC ಬಸ್ ಸಂಜೆ 6:30ಕ್ಕೆ ಹೊರಡಬೇಕಿತ್ತು. ಆದರೆ, ರಾತ್ರಿ 7:45 ಕಳೆದರೂ ಬಸ್ ಮಾತ್ರ ಬಸ್ ಹೊರಟಿರಲಿಲ್ಲ. ಇದರಿಂದ ಬೇಸತ್ತ ಪ್ರಯಾಣಿಕರು, ಅದರಲ್ಲೂ ವಿಶೇಷವಾಗಿ ಮಹಿಳೆಯೊಬ್ಬರು ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಅಸಲಿ ವಿಚಾರ ಹೊರಬಂದಿದೆ. ಬೆಂಗಳೂರಿನಿಂದ ಬರುವ ಪ್ರಯಾಣಿಕರೊಬ್ಬರು ಬರುವುದು ತಡವಾಗಿರುವ ಕಾರಣ, ಆ ಪ್ರಯಾಣಿಕರಿಗಾಗಿ ಡಿಪೋ ಮ್ಯಾನೇಜರ್ ಸೂಚನೆಯ ಮೇರೆಗೆ ಬಸ್ ಅನ್ನು ಸುಮಾರು 2 ಗಂಟೆಗಳ ಕಾಲ ನಿಲ್ಲಿಸಲಾಗಿತ್ತು ಎಂಬ ಆಘಾತಕಾರಿ ವಿಷಯ ತಿಳಿದುಬಂದಿದೆ.

ಸಿಬ್ಬಂದಿಯ ಗೋಲ್‌ಮಾಲ್ ಉತ್ತರ:

ಬಸ್ ಯಾಕೆ ಹೊರಟಿಲ್ಲ ಎಂದು ಕಂಡಕ್ಟರ್ ಅವರನ್ನು ವಿಚಾರಿಸಿದಾಗ, 'ಬಸ್‌ನ ಟೈರ್ ಬರ್ಸ್ಟ್ ಆಗಿದೆ, ಅದಕ್ಕೆ ನಿಲ್ಲಿಸಿದ್ದೇವೆ' ಎಂದು ಸಬೂಬು ಹೇಳಿದ್ದಾರೆ. ಆದರೆ ಡಿಪೋ ಮ್ಯಾನೇಜರ್‌ಗೆ ಫೋನ್ ಮಾಡಿ ವಿಚಾರಿಸಿದಾಗ, ಬೆಂಗಳೂರಿನಿಂದ ಪ್ಯಾಸೆಂಜರ್ಸ್ ಬರ್ತಿದ್ದಾರೆ, ಅವರು ಬರೋವರೆಗೂ ವೇಟ್ ಮಾಡಿ ಎಂದು ಬಸ್ ಸೈಡ್‌ಗೆ ಹಾಕಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪೊಲೀಸರ ಮಧ್ಯಪ್ರವೇಶದ ಬಳಿಕವೂ ಮುಂದುವರಿದ ಕರಾಮತ್ತು:

ಪ್ರಯಾಣಿಕರ ಪ್ರತಿಭಟನೆ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪೊಲೀಸರಿಗೆ ಕರೆ ಮಾಡಿ, ಟಿಸಿ (TC) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರ ಸೂಚನೆಯಂತೆ ಬಸ್ ನಿಲ್ದಾಣದಿಂದ ಹೊರಟ ಬಸ್, ಸ್ವಲ್ಪ ದೂರ ಹೋದ ಬಳಿಕ ಪುನಃ ಟಿಸಿ ಸೂಚನೆ ಮೇರೆಗೆ ಬಸ್ ನಿಲ್ದಾಣದ ಹೊರಗೆ ನಿಲ್ಲಿಸಲಾಗಿದೆ! ಬೆಂಗಳೂರಿನಿಂದ ಬರುತ್ತಿದ್ದ ಆ ಒಬ್ಬ ಪ್ರಯಾಣಿಕನಿಗಾಗಿ ಬಸ್ ಅನ್ನು ಮತ್ತೆ 45 ನಿಮಿಷಗಳ ಕಾಲ ಹೊರಗೆ ನಿಲ್ಲಿಸಿ, ಒಟ್ಟಾರೆ 2 ಗಂಟೆಗಳ ಕಾಲ ಸಾರ್ವಜನಿಕರನ್ನು ಕಾಯಿಸಲಾಗಿದೆ.

ಮಹಿಳೆಯ ಆಕ್ರೋಶದ ವಿಡಿಯೋ ವೈರಲ್:

ಒಬ್ಬರೇ ಒಬ್ಬ ಪ್ರಯಾಣಿಕನಿಗಾಗಿ ನೂರಾರು ಪ್ರಯಾಣಿಕರನ್ನು 2 ಗಂಟೆಗಳ ಕಾಲ ಬಲವಂತವಾಗಿ ಕಾಯಿಸಿದ ಡಿಪೋ ಮ್ಯಾನೇಜರ್ ಮತ್ತು ಸಿಬ್ಬಂದಿಯ ನಡೆಯ ವಿರುದ್ಧ ಮಹಿಳೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 'ಇದು ಯಾರಪ್ಪನ ಮನೆಯ ಗಾಡಿನೂ ಅಲ್ಲ, ನಮ್ಮಪ್ಪನ ಮನೆಯೂ ಅಲ್ಲ. ಇದು ಸಾರ್ವಜನಿಕ ವಾಹನ. ಇದನ್ನು 2 ಗಂಟೆ ಕಾಯಿಸಲು ಇವರಿಗೇನು ಅಧಿಕಾರವಿದೆ?' ಎಂದು ಪ್ರಶ್ನಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರಿಗೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಇಂತಹ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

PREV
Read more Articles on
click me!

Recommended Stories

'ರಿಂಗ್ ರೋಡ್ ಶುಭಾ ಕ್ಷಮಾದಾನ ಅರ್ಜಿ ಸಚಿವ ಸಂಪುಟದಿಂದ ರಿಜೆಕ್ಟ್: ಜೀವಾವಧಿ ಶಿಕ್ಷೆಯಿಂದ ಪಾರಾಗುವ ಯತ್ನಕ್ಕೆ ಭಾರಿ ಹಿನ್ನಡೆ
'ಐರಾವತ ಬಸ್ ಮೇಲಿರುವ ಆ ಮಗು ಯಾರು?' 20 ವರ್ಷಗಳ ನಂತರವೂ ಚರ್ಚೆಯಲ್ಲಿರುವ ಐಕಾನಿಕ್ KSRTC ಜಾಹೀರಾತಿನ ಹಿಂದಿನ ಸ್ಟೋರಿ