ಕಿಡ್ನಿ ದಾನ ಮಾಡಿ ಉಳಿಸಿಕೊಂಡಿದ್ದ ಪತ್ನಿ ಹಿಟ್ ಅಂಡ್ ರನ್ ಗೆ ಬಲಿ, ವಿಧಿಯ ಕ್ರೂರ ಆಟಕ್ಕೆ ಕಣ್ಣೀರಿಟ್ಟ ಪತಿ!

Kannadaprabha News   | Kannada Prabha
Published : Nov 21, 2026, 07:41 AM IST
Accident

ಸಾರಾಂಶ

ರಾಷ್ಟ್ರೀಯ ಹೆದ್ದಾರಿ-48ರ ಎಡೇಹಳ್ಳಿ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ವೀಣಾ ಬಾಯಿ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ. 6 ವರ್ಷಗಳ ಹಿಂದೆ ಪತಿ ಶಿವಾಜಿ ರಾವ್ ಕಿಡ್ನಿ ದಾನ ಮಾಡಿ ಪತ್ನಿಯನ್ನು ಉಳಿಸಿದ್ದರು. ಸಿದ್ದಗಂಗಾ ಮಠದ ಪೂಜೆ ಮುಗಿಸಿ ಬೈಕ್‌ನಲ್ಲಿ ಮರಳುವಾಗ ಅಪಘಾತ ಸಂಭವಿಸಿದೆ.

ದಾಬಸ್‍ಪೇಟೆ (ನ.21): ಕಿಡ್ನಿ ದಾನ ಮಾಡುವ ಮೂಲಕ ಸಾವಿನ ದವಡೆಯಲ್ಲಿದ್ದ ಪತ್ನಿಯನ್ನು ಬದುಕಿಸಿಕೊಂಡಿದ್ದ ಪತಿಯೊಬ್ಬರು, ಇದೀಗ ಭೀಕರ ರಸ್ತೆ ಅಪಘಾತದಲ್ಲಿ ಆಕೆಯನ್ನು ಶಾಶ್ವತವಾಗಿ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಸೋಂಪುರ ಹೋಬಳಿಯ ಎಡೇಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ನಡೆದಿದೆ.

ಬೆಂಗಳೂರಿನ ಲಗ್ಗೆರೆ ನಿವಾಸಿ ವೀಣಾ ಬಾಯಿ(Veena baayi) (38) ಮೃತ ದುರ್ದೈವಿ.

ಸಿದ್ದಗಂಗಾ ಮಠದಲ್ಲಿ ಪೂಜೆ ಮುಗಿಸಿಕೊಂಡು ವಾಪಸ್ ಬರುವಾಗ ಭೀಕರ ಅಪಘಾತ:

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶಿವಾಜಿ ರಾವ್ ಮತ್ತು ವೀಣಾ ಬಾಯಿ ದಂಪತಿ ಗುರುವಾರ ರಾತ್ರಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲು ತೆರಳಿದ್ದರು. ಪೂಜೆ ಮುಗಿಸಿಕೊಂಡು ಬೈಕಿನಲ್ಲಿ ವಾಪಸ್ ಲಗ್ಗೆರೆಗೆ ಮರಳುತ್ತಿದ್ದ ವೇಳೆ ಎಡೇಹಳ್ಳಿ ಗ್ರಾಮದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ವೀಣಾ ಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲೋ ಬಿಪಿಗೆ ಕಿಡ್ನಿ ಕಳೆದುಕೊಂಡಿದ್ದ ಪತ್ನಿ

ಆರು ವರ್ಷಗಳ ಹಿಂದೆ ತೀವ್ರ ಲೋ ಬಿಪಿ (ಕಡಿಮೆ ರಕ್ತದೊತ್ತಡ) ಸಮಸ್ಯೆಯಿಂದ ವೀಣಾ ಬಾಯಿ ಅವರ ಎರಡೂ ಕಿಡ್ನಿಗಳು ವಿಫಲವಾಗಿದ್ದವು. ಪತ್ನಿಯ ಪ್ರಾಣ ಉಳಿಸಲು ಮುಂದಾಗಿದ್ದ ಪತಿ ಶಿವಾಜಿ ರಾವ್, ತಮ್ಮದೇ ಒಂದು ಕಿಡ್ನಿಯನ್ನು ದಾನ ಮಾಡಿ ಆಕೆಗೆ ಮರುಜನ್ಮ ನೀಡಿದ್ದರು.

ಅಂದಿನಿಂದ ಸುಖವಾಗಿ ಸಂಸಾರ ನಡೆಸುತ್ತಿದ್ದ ಈ ದಂಪತಿಯ ಬದುಕಿನಲ್ಲಿ ವಿಧಿ ಮತ್ತೆ ಕ್ರೂರ ಆಟವಾಡಿದೆ. ಕಣ್ಣಮುಂದೆಯೇ ಪತ್ನಿಯ ಪ್ರಾಣಪಕ್ಷಿ ಹಾರಿಹೋಗಿರುವುದನ್ನು ಕಂಡು ಪತಿ ಶಿವಾಜಿ ರಾವ್ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಎಸಗಿ ಪರಾರಿಯಾದ ವಾಹನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

Winter: ಬೆಂಗಳೂರಿನಲ್ಲಿ ತಾಪಮಾನ ದಿಢೀರ್ ಕುಸಿತ: ನವೆಂಬರ್‌ನಲ್ಲಿ ಚಳಿ ದಾಖಲೆ ಉಡೀಸ್
ಸ್ಯಾಂಕಿ ಟ್ಯಾಂಕ್ ಬಳಿ ಹೊಸ ಬದಲಾವಣೆ: ಶ್ರೀರಾಂಪುರ ಮೆಟ್ರೋ ಬಳಿ ಬಹುಮಹಡಿ ಪಾರ್ಕಿಂಗ್