ತುಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಅವರ ಕೊಂಡವಾಡಿ ಗ್ರಾಮದ ಹಾಲು ಉತ್ಪಾದಕರ ಸದಸ್ಯತ್ವವನ್ನು ರದ್ದುಗೊಳಿಸಿ ಸಂಘದ ಅಧ್ಯಕ್ಷ ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಣ್ಣಪ್ಪಯ್ಯ ಆದೇಶ ಹೊರಡಿಸಿದ್ದಾರೆ.
ಮಧುಗಿರಿ : ತುಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಅವರ ಕೊಂಡವಾಡಿ ಗ್ರಾಮದ ಹಾಲು ಉತ್ಪಾದಕರ ಸದಸ್ಯತ್ವವನ್ನು ರದ್ದುಗೊಳಿಸಿ ಸಂಘದ ಅಧ್ಯಕ್ಷ ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಣ್ಣಪ್ಪಯ್ಯ ಆದೇಶ ಹೊರಡಿಸಿದ್ದಾರೆ.
ಕೊಂಡವಾಡಿ ಹಾಲು ಉತ್ಪಾದಕರ ಸಹಕಾರ ಸಂಘವು ಮಧುಗಿರಿ ತಾಲೂಕಿನಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಅನ್ವಯ ನೋಂದಣಿ ಆಗಿರುವ ಸಹಕಾರ ಸಂಘವಾಗಿದೆ. ಕೊಂಡವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕರಾಗಿರುವ ಕೊಂಡವಾಡಿ ಚಂದ್ರಶೇಖರ್ ಅವರು ತುಮಕೂರು ನಗರ ವಾಸಿಯಾಗಿದ್ದು, 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ತಾಲೂಕಿನ ಕಸಬಾ ಹೋಬಳಿ ಎಂ.ಬಸವನಹಳ್ಳಿ ಗ್ರಾಮದ ಮತದಾರರ ಪಟ್ಟಿಯಲ್ಲಿ ಸರ್ಪೇಡೆಯಾಗಿರುವುದು ಕಂಡು ಬಂದಿದೆ.
undefined
ಇವರು ತುಮಕೂರಿನ ಗಂಗೋತ್ರಿ ನಗರದಲ್ಲಿ ವಾಸವಾಗಿದ್ದು ಇದೇ ವಿಳಾಸ ನೀಡಿ ವಾಹನ ಚಾಲನಾ ಪರವನಾಗಿ ಪಡೆದಿದ್ದು ಸಿಟಿ ಕ್ಲಬ್ ತುಮಕೂರು ಕ್ಲಬ್‌ನಲ್ಲಿ ಈ ವಿಳಾಸ ನೀಡಿಯೇ ಸದಸ್ಯರಾಗಿರುತ್ತಾರೆ. ಆದ್ದರಿಂದ ಇವರು ಮಧುಗಿರಿ ತಾಲೂಕು ಕೊಂಡವಾಡಿ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಕಾರ್ಯವ್ಯಾಪ್ತಿಯಲ್ಲಿ ವಾಸಿಸದೆ ಸಂಘದ ನೋಂದಾಯಿತ ಉಪ ನಿಯಮ ಸಂಖ್ಯೆ17 ಅನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಆದ ಕಾರಣ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 17 (3) ಅನ್ವಯ ಕೊಂಡವಾಡಿ ಚಂದ್ರಶೇಖರ್ ಅವರ ಕೊಂಡವಾಡಿ ಹಾಲು ಉತ್ಪಾದಕರ ಸಂಘದ ಸದಸ್ಯತ್ವವನ್ನು ರದ್ಧುಗೊಳಿಸಿ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನದಿಂದ ತೆಗೆದು ಹಾಕಿರುವುದಾಗಿ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.
ತುಮುಲ್ ನೇಮಕದಲ್ಲಿ ಭಾರಿ ಅಕ್ರಮ
ತುರುವೇಕೆರೆ : ಜಿಲ್ಲಾ ಹಾಲು ಒಕ್ಕೂಟದ (ತುಮುಲ್) ವತಿಯಿಂದ ಅಲ್ಲಿಯ ಆಡಳಿತ ನೇಮಕಾತಿ ಪ್ರಕ್ರಿಯೆಗಾಗಿ ನಡೆಸಿದ್ದ ಪರೀಕ್ಷೆಯಲ್ಲಿ ಭಾರಿ ಅಕ್ರಮವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಲವಾರು ಉದ್ಯೋಗಾಕಾಂಕ್ಷಿಗಳು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಹೈಕೋರ್ಚ್ ನೇಮಕಾತಿ ಪ್ರಕ್ರಿಯೆಗೆ ತಡೆಯೊಡ್ಡಿದೆ ಎಂದು ತಾಲೂಕು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ತಾವರೇಕೆರೆ ಬೋರೇಗೌಡ ಮತ್ತು ಟಿಎಪಿಸಿಎಂಎಸ್ ನ ನಿರ್ದೇಶಕ ಡಿ.ಪಿ.ರಾಜು ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲಾ ಹಾಲು ಒಕ್ಕೂಟವು ತಮ್ಮ ಕಚೇರಿಗೆ ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡುವ ಪ್ರಕ್ರಿಯೆಗೆ ಮುಂದಾಗಿತ್ತು. ಈ ತಿಂಗಳ ಆರಂಭದಲ್ಲಿ ಹುದ್ದೆಗಾಗಿ ಪರೀಕ್ಷೆಯನ್ನೂ ಸಹ ಮಾಡಲಾಗಿತ್ತು. ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಪರೀಕ್ಷೆ ಬರೆದಿದ್ದರು. ಆ ಪರೀಕ್ಷೆ ವೇಳೆ ಈಗಾಗಲೇ ಹುದ್ದೆಯನ್ನು ಬಿಕರಿ ಮಾಡಿಕೊಂಡಿರುವ ಹಲವಾರು ಮಂದಿ ಖಾಲಿ ಉತ್ತರ ಪತ್ರಿಕೆಯ ಹಾಳೆಯನ್ನು ನೀಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಪರೀಕ್ಷೆ ಬರೆದಿದ್ದವರು ಹಲವಾರು ಮಂದಿ ಖಾಲಿ ಶೀಟ್ ನೀಡಿರುವ ಸಂಗತಿಯನ್ನು ನೋಡಿದ್ದರು. ಇದರಿಂದ ಅನುಮಾನಗೊಂಡ ಹಲವರು ಪರೀಕ್ಷೆ ಬರೆದಿದ್ದವರು ಪರೀಕ್ಷೆ ನಡೆಸಿದ ದಿನವೇ ಬಹಿರಂಗವಾಗಿ ಖಾಲಿ ಉತ್ತರ ಪತ್ರಿಕೆ ನೀಡಿದ್ದ ಸಂಗತಿಯನ್ನು ಬಯಲು ಮಾಡಿದ್ದರು.
ಇದನ್ನು ಆಕ್ಷೇಪಿಸಿ ಹಲವಾರು ಉದ್ಯೋಗಾಕಾಂಕ್ಷಿಗಳು ಜಿಲ್ಲಾ ನ್ಯಾಯಾಲಯ ಪ್ರಾಧಿಕಾರ, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಅಲ್ಲದೇ ಹೈಕೋರ್ಟಿನ ಮೆಟ್ಟಿಲನ್ನೂ ಏರಿದ್ದರು. ಪರೀಕ್ಷೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಚ್ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ ಎಂದು ತಾವರೇಕೆರೆ ಬೋರೇಗೌಡ ಮತ್ತು ಡಿ.ಪಿ.ರಾಜು ತಿಳಿಸಿದರು.
ತುಮುಲ್‌ನಲ್ಲಿ ನಡೆದಿರುವ ನೇಮಕಾತಿ ಹಗರಣ ಪಿಎಸ್‌ಐ ಹಗರಣದಷ್ಟೇ ದೊಡ್ಡ ಪ್ರಕರಣವಾಗಿದೆ. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಮುಖ್ಯಮಂತ್ರಿಗಳು, ಸ್ಥಳೀಯ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವಾರು ಧುರೀಣರಿಗೆ ದೂರು ನೀಡಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದೂ ಸಹ ತಾವರೇಕೆರೆ ಬೋರೇಗೌಡ ಮತ್ತು ಡಿ.ಪಿ.ರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆಂಪೇಗೌಡ, ಮಲ್ಲಾಘಟ್ಟಹುಚ್ಚೇಗೌಡ, ಕಾಳಂಜೀಹಳ್ಳಿ ನಂಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.