* ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದ ಘಟನೆ
* ಸ್ಟೇರಿಂಗ್ ಜಾಮ್ ಆಗಿದ್ದೇ ದುರ್ಘಟನೆಗೆ ಕಾರಣ
* ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಪೊಲೀಸರು
ಬ್ಯಾಡಗಿ(ಅ.06): ಚಾಲಕನ(Driver) ನಿಯಂತ್ರಣಕ್ಕೆ ಸಿಗದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಖಾನಾವಳಿ ಕಟ್ಟಡದೊಳಗೆ ನುಗ್ಗಿದ ಘಟನೆ ಮಂಗಳವಾರ ಬೆಳ್ಳಂಬೆಳಗ್ಗೆ ಪಟ್ಟಣದಲ್ಲಿ ನಡೆದಿದೆ.
ಮುಖ್ಯರಸ್ತೆಯ ಪಾಂಡುರಂಗ ಚಿತ್ರಮಂದಿರದ ಬಳಿ ಈ ಘಟನೆ ನಡೆದಿದ್ದು, ಲಾರಿಯು ಮಹಾರಾಷ್ಟ್ರದ(Maharashtra) ಕರಾಡ ನಗರದ ಭರತ್ ಖಂಡೇಕರ್ ಎಂಬವರಿಗೆ ಸೇರಿದ್ದು. ಇದ್ದಕ್ಕಿದ್ದಂತೆ ಸ್ಟೇರಿಂಗ್ ಜಾಮ್ ಆಗಿರುವುದೇ ದುರ್ಘಟನೆಗೆ ಕಾರಣವೆನ್ನಲಾಗುತ್ತಿದೆ. ಮೋಟೆಬೆನ್ನೂರು ಕಡೆಯಿಂದ ಪಟ್ಟಣ ಪ್ರವೇಶಿಸಿದ ಲಾರಿಯು(Truck) ಮೊದಲು ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಇದರ ರಭಸಕ್ಕೆ ವಿದ್ಯುತ್ ಕಂಬ ನೆಲಕ್ಕುರುಳಿ ಪುಡಿಪುಡಿಯಾಗಿದೆ.
ಆಂಬುಲೆನ್ಸ್ ಏರುವಾಗ ಗಾಯಾಳು, ಶಿವಮೊಗ್ಗಕ್ಕೆ ಬಂದಾಗ ಸದ್ದಿಲ್ಲದೆ 3 ಜನ ಜೂಟ್!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿಯು ಬಳಿಕ ರಸ್ತೆಯ ಇನ್ನೊಂದು ಭಾಗದಲ್ಲಿರುವ ಬಸವೇಶ್ವರ ಖಾನಾವಳಿ ಕಟ್ಟಡದೊಳಗೆ ನುಗ್ಗಿದೆ. ಇದರಿಂದ ಖಾನಾವಳಿಗೆ ಹೊಂದಿಕೊಂಡಿದ್ದ ಗೂಡಂಗಡಿಯೂ ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಖಾನಾವಳಿಯೊಳಗೆ ಮಲಗಿದ್ದವರು ಮಾತ್ರ ಅದೃಷ್ಟವಶಾತ್ ಬಚಾವಾಗಿದ್ದಾರೆ.
ಪಟ್ಟಣದ ಮುಖ್ಯರಸ್ತೆ ಮೂಲಕ ಹಾಯ್ದು ಹೋಗುವ ಗಜೇಂದ್ರಗಡ ಸೊರಬ-136 ರಾಜ್ಯ ಹೆದ್ದಾರಿ ಒಟ್ಟು 750 ಮೀ. ರಸ್ತೆ ಇಂದಿಗೂ ಅಗಲೀಕರಣವಾಗದೇ ಉಳಿದಿದೆ. ಇದರಿಂದ ರಸ್ತೆ ಮಧ್ಯದಲ್ಲಿ ಡಿವೈಡರ್ ಇಲ್ಲದೇ ಎಡಕ್ಕಿದ್ದ ಲಾರಿಯು ಬಲಭಾಗದಲ್ಲಿನ ಮನೆಯೊಳಗೆ ನುಗ್ಗಲು ಕಾರಣವೆನ್ನಲಾಗುತ್ತಿದೆ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು(Police) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.