ಹೆಂಡ್ತಿ ಬ್ಯಾಡ, ಊರೂ ಬ್ಯಾಡ ಎಂದು 26 ಲಕ್ಷ ತಗೊಂಡು ಹೊರಟವನ ಲಾಕ್‌ ಮಾಡ್ತು ಗೂಗಲ್‌ ಮ್ಯಾಪು!

Published : Apr 01, 2023, 07:17 PM IST
ಹೆಂಡ್ತಿ ಬ್ಯಾಡ, ಊರೂ ಬ್ಯಾಡ ಎಂದು 26 ಲಕ್ಷ ತಗೊಂಡು ಹೊರಟವನ ಲಾಕ್‌ ಮಾಡ್ತು ಗೂಗಲ್‌ ಮ್ಯಾಪು!

ಸಾರಾಂಶ

ಹೆಂಡತಿ ಕೊಡುತ್ತಿದ್ದ ಕಾಟದಿಂದ ದೂರ ಹೋಗಲು ಗುತ್ತಿಗೆದಾರನ ನಿರ್ಧಾರ 26 ಲಕ್ಷ ರೂ. ಇಟ್ಟುಕೊಂಡು ಕಾರಿನಲ್ಲಿ ಮುಂಬೈನಿಂದ ಗೋವಾಕ್ಕೆ ಪ್ರಯಾಣ ಗೂಗಲ್ ಮ್ಯಾಪ್ ನಂಬಿ ರಾಜ್ಯಕ್ಕೆ ಬಂದ ಗುತ್ತಿಗೆದಾರರನ್ನು ಲಾಕ್ ಮಾಡಿದ ಪೊಲೀಸರು!

ವರದಿ: ಅನಿಲ್ ಕಾಜಗಾರ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ 

ಬೆಳಗಾವಿ (ಏ.01): ಊದೋದು ಕೊಟ್ಟು, ಬಾರಿಸೋದು ತಗೊಂಡ್ರು ಅನ್ನೋ ಮಾತು ಕೇಳಿರಬಹುದು ನೀವು. ಆದರೆ, ಇಲ್ಲೊಬ್ಬ ಪುಣ್ಯಾತ್ಮ ಈ ಮಾತನ್ನು ಅಕ್ಷರಶಃ ಸತ್ಯ ಮಾಡಿಬಿಟ್ಟಿದ್ದಾನೆ. ಪತ್ನಿ ಕಾಟಕ್ಕೆ ಬೇಸತ್ತು ನೆಮ್ಮದಿ ಅರಿಸಿ ಗೋವಾಗೆ ಹೊರಟಿದ್ದ ಈ ವ್ಯಕ್ತಿ ಈಗ ಪೊಲೀಸರ ಕಾಟ ಅನುಭವಿಸುತ್ತಿದ್ದಾನೆ. 

ಬೆಳಗಾವಿಯ ಕರ್ನಾಟಕ ಚೆಕ್‌ಪೋಸ್ಟ್‌ನಲ್ಲಿ 26 ಲಕ್ಷ ರೂಪಾಯಿ ಜತೆಗೆ ಸಿಕ್ಕಿಬಿದ್ದ ಮುಂಬೈನ ಗುತ್ತಿಗೆದಾರನ ಪ್ರಹಸನವಿದು. ಪತ್ನಿ ಕಾಟದಿಂದ ಬೇಸತ್ತ ಈ ಗುತ್ತಿಗೆದಾರ ತನ್ನ ಬಳಿ ಇದ್ದ 26 ಲಕ್ಷ ನೋಟುಗಳನ್ನು ಬ್ಯಾಗಿನಲ್ಲಿ ತುರುಕಿಕೊಂಡು ಗೋವಾಗೆ ಪ್ರಯಾಣ ಬೆಳೆಸಿದ್ದ. ನಾಲ್ಕು ಗೋಡೆಗಳ ಮಧ್ಯದ ಪೀಕಲಾಟದಿಂದ ಹೊರಬಂದು, ವಿಶಾಲ ಸಮುದ್ರದಲ್ಲಿ ಎಂಜಾಯ್‌ ಮಾಡಲು ಯೋಜಿಸಿದ್ದ. ಕಡಲ‌ ತೀರದಲ್ಲಿ ನೆಮ್ಮದಿಯ ಕ್ಷಣಗಳನ್ನು ಕಳೆಯುವ ಬಯಕೆ ಹೊಂದಿದ್ದನು.

ವಿಜಯನಗರದಲ್ಲಿ ಭರ್ಜರಿ ಬೇಟೆ: ದಾಖಲೆ ಇಲ್ಲದ ಕೋಟ್ಯಂತರ ರೂ. ಜಪ್ತಿ..!

ದಾರಿ ತಪ್ಪಿಸಿತಾ ಗೂಗಲ್‌ ಮ್ಯಾಪ್! : ಕೌಟುಂಬಿಕ ಜಂಜಾಟದಿಂದ ಹೊರಬಂದು ನೆಮ್ಮದಿಯ ಕ್ಷಣಗಳನ್ನು ಕಳೆಯಲು 26 ವರ್ಷದ ವ್ಯಕ್ತಿ ನಿನ್ನೆ ರಾತ್ರಿ 26 ಲಕ್ಷ ನಗದು ಸಮೇತ ಮುಂಬೈನಿಂದ ಬೆಳಗಾವಿ ‌ಮಾರ್ಗ ಗೋವಾಗೆ ತೆರಳುತ್ತಿದ್ದ. ಗೂಗಲ್ ಮ್ಯಾಪ್ ಹಾಕಿಕೊಂಡು ಬರುತ್ತಿದ್ದ ಈತನ್ನು ದಾರಿ ತಪ್ಪಿಸಿದ್ದು ಗೂಗಲ್‌ ಮ್ಯಾಪ್‌. ಮ್ಯಾಪ್‌ ಅನುಸರಿಸಿ ಮುಂಬೈನಿಂದ ಗೋವಾಗೆ ಬರುತ್ತಿದ್ದ ಈತ, ನೇರವಾಗಿ ಬಂದಿದ್ದು ಬೆಳಗಾವಿಗೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ. 

ದಾಖಲೆಗಳನ್ನು ಇಟ್ಟುಕೊಳ್ಳದ ಕಾರಣ ಪೇಚಾಟ: ಗ್ರಹಚಾರ ಕೆಟ್ಟಿದ್ದರೆ ಗಣಪತಿಯೂ ವೈರಿ ಎನ್ನುಂತಾಯಿತು ಈ ಗುತ್ತಿಗೆದಾರನ ಕತೆ. ಕಾರು ತಪಾಸಣೆ ಮಾಡಿದ ಪೊಲೀಸರಿಗೆ ಬರೋಬ್ಬರಿ 26 ಲಕ್ಷ ಮೊತ್ತದ ಕಂತೆಕಂತೆ ನೋಟುಗಳು ಸಿಕ್ಕಿವೆ. ಇದೆಲ್ಲ ತನ್ನದೇ ಹಣ ಎಂದು ಗುತ್ತಿಗೆದಾರ ಹೇಳುತ್ತಿದ್ದಾನಾದರೂ ಅದಕ್ಕೆ ದಾಖಲೆಗಳನ್ನು ಇಟ್ಟುಕೊಂಡಿರಲಿಲ್ಲ. ಇಷ್ಟೊಂದು ಹಣ ವಿತ್‌ಡ್ರಾ ಏಕೆ ಮಾಡಬೇಕು? ಆನ್‌ಲೈನ್‌ ಪೇಮೆಂಟ್‌ ಮಾಡಬಹುದಲ್ಲ ಎಂಬ ಪ್ರಶ್ನೆ ಮೂಡಬಹುದು ನಿಮಗೆ. ಥೇಟ್‌ ಇದೇ ಪ್ರಶ್ನೆಯನ್ನು ಪೊಲೀಸರೂ ಕೇಳಿದ್ದಾರೆ. ಅದಕ್ಕೆ ಗುತ್ತಿಗೆದಾರ ಕೊಟ್ಟ ಉತ್ತರ ಇನ್ನೂ ಕುಚೋದ್ಯಮಯ.

ಆನ್‌ಲೈನ್‌ ಹಣ ವರ್ಗಾವಣೆ ಬೇಡವೆಂದು ಕ್ಯಾಶ್‌ ತಂದಿದ್ದ:  ಹಣ ವರ್ಗಾವಣೆ ಮಾಡಿದರೆ ನಾನು ಎಲ್ಲಿದ್ದೀನಿ ಎಂದು ಹೆಂಡತಿಗೆ ಗೊತ್ತಾಗುತ್ತದೆ. ಹಾಗಾಗಿ, ನಗದನ್ನೇ ಒಯ್ಯುತ್ತಿದ್ದೇನೆ ಎಂದು ಈ ಈ ಮಹಾಶಯ ಪೊಲೀಸರ‌ ಎದುರು ಹೇಳಿದ್ದಾನೆ. ನೀರಲ್ಲೂ ಮೀನಿನ ಹೆಜ್ಜೆ ಎಣಿಸುವವರು ನಮ್ಮ ಪೊಲೀಸರು. ಇಂಥ ಡೈಲಾಗುಗಳನ್ನು ನಂಬುತ್ತಾರೆಯೇ? ನೇರವಾಗಿ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವರ್ಗಾಯಿಸಿದ್ದಾರೆ. ಹಣದ ಮೂಲ, ಹೆಂಡತಿಯ ಮೂಲ, ಗುತ್ತಿಗೆದಾರನ ಮೂಲ, ಒಂದೇ ಎರಡೇ. ಎಲ್ಲ ಮೂಲಗಳನ್ನೂ ಅಧಿಕಾರಿಗಳು ಜಾಲಾಡುತ್ತಿದ್ದಾರೆ.

ಬೆಂಗಳೂರು: ಮತದಾರರಿಗೆ ಹಂಚಲು ತಂದಿದ್ದ ಹೆಲ್ಮೆಟ್‌, ಮದ್ಯ, 7.50 ಲಕ್ಷ ಜಪ್ತಿ

ಬೆಳಗಾವಿಯಲ್ಲಿ 64 ಚೆಕ್ ಪೋಸ್ಟ್ ನಿರ್ಮಾಣ! ಭೌಗೋಳಿಕವಾಗಿ ಬೆಳಗಾವಿ ದೊಡ್ಡ ‌ಜಿಲ್ಲೆ. ಕರ್ನಾಟಕ, ಮಹಾರಾಷ್ಟ್ರ, ಗೋವಾದ ಸಂಪರ್ಕ ‌ಕೊಂಡಿಯೂ ಹೌದು.‌ ರಾಜ್ಯ ವಿಧಾನಸಭೆ ‌ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 61 ಚೆಕ್ ಫೋಸ್ಟ್ ನಿರ್ಮಾಣ ಮಾಡಲಾಗಿದೆ. ಅದರಲ್ಲೂ 24 ಗಡಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಮಹಾರಾಷ್ಟ್ರದ ಗಡಿಯಲ್ಲಿ 20 ಹಾಗೂ ಗೋವಾ ಗಡಿಯಲ್ಲಿ 4 ಚೆಕ್ ಫೋಸ್ಟ್ ತೆರೆಯಲಾಗಿದೆ. ಚುನಾವಣೆ ಅಕ್ರಮ ತಡೆಯಲು ಹಾಗೂ ಅಕ್ರಮ ಹಣ ಸಾಗಾಟದ ಮೇಲೆ‌ ಸಿಬ್ಬಂದಿ ಹದ್ದಿನ ಕಣ್ಣು ಇಟ್ಟಿದ್ದಾರೆ. ಈಗಾಗಲೇ 2 ಕೋಟಿ ಅಧಿಕ ನಗದು, ಮದ್ಯ, ಸೀರೆ, ಕುಕ್ಕರ್ ಸೇರಿದಂತೆ ಇನ್ನಿತರ ವಸ್ತು ಜಪ್ತಿ ಮಾಡಿಕೊಂಡಿದ್ದಾರೆ.

PREV
Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ