
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.19): ಕೊಡಗು ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯ ಜೀವಿ ಸಂಘರ್ಷ ದಿನದಿಂದ ದಿನಕ್ಕೆ ಮಿತಿ ಮೀರುತ್ತಲೇ ಇದ್ದು, ಹಲವು ದಿನಗಳಿಂದ ಗ್ರಾಮಗಳಿಗೆ ನುಗ್ಗಿ ಜಾನುವಾರುಗಳನ್ನು ಕೊಲ್ಲುತ್ತಿರುವ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಮತ್ತು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹತ್ತು ದಿನಗಳಲ್ಲಿ 2 ಹುಲಿಗಳು 5 ಜಾನುವಾರುಗಳನ್ನು ಕೊಂದು ತಿಂದಿದೆ. ಗ್ರಾಮಗಳಿಗೆ ನುಗ್ಗಿ ಜಾನುವಾರುಗಳನ್ನು ಕೊಲ್ಲುತ್ತಿರುವ ಹಿನ್ನೆಲೆಯಲ್ಲಿ ಜನರ ಮೇಲೂ ದಾಳಿ ಮಾಡುವ ಆತಂಕವಿದೆ.
ಹೀಗಾಗಿಯೇ ಶ್ರಿಮಂಗಲ ಹಾಗೂ ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. 60 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಬಳಸಿ ಹಾಗೂ ದುಬಾರೆ ಸಾಕಾನೆ ಶಿಬಿರದ ಗೋಪಿ ಹಾಗೂ ಶ್ರೀರಾಮ ಆನೆಗಳ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಫಿ ತೋಟ ಮತ್ತು ಅರಣ್ಯದಂಚಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಕಾರ್ಯಾಚರಣೆ ನಡೆಸುತ್ತಿರುವ ಪ್ರದೇಶ ದಟ್ಟಾರಣ್ಯವಾಗಿದ್ದು ಆನೆಗಳು ನುಗ್ಗುವುದು ಕಷ್ಟದ ಸ್ಥಿತಿ ಎನ್ನುವಂತ್ತಿದೆ. ಹೀಗಾಗಿ ಇಂತಹ ಅರಣ್ಯದ ಅಂಚಿನಲ್ಲಿ ಹುಲಿ ಕಾರ್ಯಚರಣೆ ದುಸ್ಥರವಾಗಿದೆ.
ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ ಮಡಿಕೇರಿಯ ಕೂರ್ಗ್ ವಿಲೇಜ್: ವಿಫಲಗೊಂಡ ಪ್ರವಾಸಿ ತಾಣ
ಹುಲಿಗಳು ನಿರಂತರವಾಗಿ ದಾಳಿ ಮಾಡುತ್ತಿರುವುದರ ಜೊತೆಗೆ ಕಾಫಿ ತೋಟಗಳಲ್ಲಿ ನಿತ್ಯ ಹುಲಿ ಕಾಣಿಸಿಕೊಳ್ಳುತ್ತಿದೆ. ಇದು ಶ್ರೀಮಂಗಲ ಮತ್ತು ಬಿರುನಾಣಿ ವ್ಯಾಪ್ತಿಯ ಜನರಲ್ಲಿ ಆತಂಕ ಮೂಡಿಸಿದೆ. ಹೀಗಾಗಿಯೇ ಡಿಸಿಎಫ್ ನೆಹರೂ ಮತ್ತು ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕುರಿತು ಮಾತನಾಡಿರುವ ಡಿಸಿಎಫ್ ನೆಹರು ಕಳೆದ ಹಲವು ದಿನಗಳಿಂದ ನಿರಂತರವಾಗಿ ಜಾನುವಾರುಗಳನ್ನು ಕೊಲ್ಲುತ್ತಿವೆ. ಮೊನ್ನೆಯಷ್ಟೇ ಬಿರುನಾಣಿ ಭಾಗದಲ್ಲಿ ಹೆಣ್ಣು ಹುಲಿಯೊಂದು ಮರಿಗಳ ಜೊತೆಗೆ ಕಾಣಿಸಿಕೊಂಡಿದೆ.
ಇದನ್ನು ಸ್ಥಳೀಯರು ನೋಡಿ ಆತಂಕಗೊಂಡಿದ್ದಾರೆ. ನಿರಂತರವಾಗಿ ಜಾನುವಾರುಗಳನ್ನು ಕೊಲ್ಲುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅರಣ್ಯ ಸಚಿವರು ಮತ್ತು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರ ಒಪ್ಪಿಗೆ ಪಡೆದು ಎರಡು ಹುಲಿಗಳನ್ನು ಸೆರೆ ಹಿಡಿಯಲು ನಿರ್ಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎರಡು ಹುಲಿಗಳನ್ನು ಸೆರೆ ಹಿಡಿದು ಅವುಗಳನ್ನು ಪುನರ್ವಸತಿ ಕಲ್ಪಿಸಲು ನಿರ್ಧರಿಸಲಾಗಿದೆ. ಇಲಾಖೆಯ ಮೇಲಿನ ಅಧಿಕಾರಿಗಳು ಏನು ತೀರ್ಮಾನ ಮಾಡುತ್ತಾರೋ ಅದೇ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
Kodagu: ವಾಸನೆ ಸಹಿತ ಹಳದಿ ಬಣ್ಣ ಕೊಳಚೆ ನೀರೇ ಕಟ್ಟೆಹಾಡಿ ಜನರಿಗೆ ಜೀವಜಲ!
ಈ ಕುರಿತು ಮಾತನಾಡಿರುವ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಹುಲಿ ಸೆರೆಗಾಗಿ ಮೂರು ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಲೇ ಇದ್ದೇವೆ. ಇದೀಗ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದು, ಇನ್ನೊಂದೆರಡು ದಿನಗಳಲ್ಲಿ ಹುಲಿಗಳನ್ನು ಸೆರೆ ಹಿಡಿಯಲಾಗುವುದು. ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದಿದ್ದಾರೆ. ಒಟ್ಟಿನಲ್ಲಿ ಒಂದೆಡೆ ಕಾಡಾನೆಗಳ ಹಾವಳಿ ತೀವ್ರವಾಗಿದ್ದರೆ ಮತ್ತೊಂದೆಡೆ ಹುಲಿಗಳ ದಾಳಿಯೂ ಮುಂದುವರೆದಿರುವುದು ಕೊಡಗಿನ ಜನರ ನೆಮ್ಮದಿಯನ್ನು ಕೆಡಿಸಿರುವುದಂತು ಸತ್ಯ.