ಎಲ್ಲೆಡೆ ಪೈಪ್‌ಲೈನ್ ಇದ್ರೂ ನೀರಿಲ್ಲ, ಬಾವಿ ಸೇದಿದರಷ್ಟೇ ಇಲ್ಲಿ ನೀರು!

By Kannadaprabha NewsFirst Published Oct 4, 2022, 2:50 PM IST
Highlights
  1. ಬಾವಿ ಸೇದಿದರಷ್ಟೇ ಇಲ್ಲಿ ನೀರು!
  2. ಎಲ್ಲೆಡೆ ಪೈಪ್‌ಲೈನ್‌ ಇದೆ, ಆದರೆ ನೀರು ಬರಲ್ಲ
  3. ಕುಡಿಯುವ ನೀರು ಸರಬರಾಜು ಯೋಜನೆ ಮುಳುವಾಗಲು ಆ ಘಟನೆ ಕಾರಣವಾಯಿತೇ?

ಮಂಜುನಾಥ ಸಾಯೀಮನೆ

 ಶಿರಸಿ (ಅ.4) :  ಲಕ್ಷಾಂತರ ರು. ಖರ್ಚು ಮಾಡಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಿದರೂ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಊರಿಗೆ ಊರೇ ಬಾವಿ ಮುಂದೆ ನಿಂತು ನೀರು ಸೇದುವುದು ತಪ್ಪಲಿಲ್ಲ! ತಾಲೂಕಿನ ಮಂಜುಗುಣಿ ಪಂಚಾಯಿತಿಯ ಖುರ್ಸೆ ಗ್ರಾಮದ ಸ್ಥಿತಿ ಇದು. ಇಲ್ಲಿಯ ಇನ್ನೊಬ್ಬರ ಮನೆಯ ಕೂಲಿ ಮಾಡಿ ಜೀವನ ಸಾಗಿಸುವ ಚಲವಾದಿ ಸಮಾಜದ ಜನತೆ ನಿತ್ಯ ನೀರು ಸೇದಬೇಕಾದ ಪಡಿಪಾಟಲು ಅನುಭವಿಸುತ್ತಿದ್ದಾರೆ. ಈಗ ಬಾವಿಯಲ್ಲಿ ನೀರಿದೆ. ನವೆಂಬರ್‌ ಬಳಿಕ ಬಾವಿ ನೀರು ಕಡಿಮೆ ಆಗುತ್ತದೆ. ಆಗ ಏನು ಮಾಡಬೇಕು ಎನ್ನುತ್ತಾರೆ ಇಲ್ಲಿಯ ಮಹಿಳೆಯರು. ಕೂಲಿ ಮಾಡಿ ಸೋತು ಮನೆಗೆ ಬಂದ ಬಳಿಕ ಬಾವಿಯ ನೀರು ಜಗ್ಗಿ ಮತ್ತೆ ಸೋಲುತ್ತಿದ್ದಾರೆ.

ಮಳೆ ಅವಾಂತರ; ಎಲ್ಲೆಲ್ಲೂ ನೀರು..ಕುಡಿಯಲು ಹನಿ ನೀರಿಲ್ಲ !

ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯೋಜನೆಯಡಿ .22 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಮಂಜೂರಾಗಿತ್ತು. ಆರಂಭದಿಂದಲೇ ವಿಳಂಬ ಎದುರಿಸಿದ ಈ ಕಾಮಗಾರಿ ಅಂತೂ 2016ರಲ್ಲಿ ಪೂರ್ಣಗೊಂಡಿತು. ಅದೇ ವರ್ಷ ಅ. 6ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಈ ಕಾಮಗಾರಿ ಉದ್ಘಾಟಿಸಲು ಖುರ್ಸೆ ಗ್ರಾಮಕ್ಕೆ ಬಂದಿದ್ದರು. ಆದರೆ, ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಏಕೆಂದರೆ, ಯೋಜನೆಯ ನೀಲ ನಕ್ಷೆಯಲ್ಲಿದ್ದಂತೆ ಎಲ್ಲ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಲಾಗಿರಲಿಲ್ಲ. ‘ದೇಶಪಾಂಡೆ ಈಗ ಉದ್ಘಾಟಿಸುತ್ತಾರೆ. ಒಂದೆರಡು ದಿನದಲ್ಲಿ ಎಲ್ಲ ಕಡೆ ಪೈಪ್‌ ಅಳವಡಿಸಿ ಕೊಡುತ್ತೇವೆ’ ಎಂದು ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಸ್ಥಳೀಯರ ಮನವೊಲಿಸಲು ಮುಂದಾದರು. ಆದರೂ ಸ್ಥಳೀಯರು ಒಪ್ಪದೇ ಇದ್ದಾಗ ಆರ್‌.ವಿ. ದೇಶಪಾಂಡೆ ಉದ್ಘಾಟನೆ ಮಾಡದೇ ವಾಪಸಾಗಿದ್ದರು. ಈ ಘಟನೆಯೇ ಈ ಕೊಳವೆ ನೀರು ಸರಬರಾಜು ಯೋಜನೆಗೆ ಮುಳುವಾಯಿತು.

ಮಾರನೇ ವರ್ಷ ಎಲ್ಲ ಮನೆಗಳಿಗೂ ಪೈಪ್‌ ಅಳವಡಿಸಿ ಯೋಜನೆಯನ್ನೇನೋ ಉದ್ಘಾಟಿಸಲಾಗಿದೆ. ಆದರೆ, ನೀರು ಬಂದ ದಿನಗಳು ಮಾತ್ರ ಕಡಿಮೆ. ಸ್ಥಳೀಯರು ಗ್ರಾಪಂಗಳಲ್ಲಿ ವಿಚಾರಿಸಿದರೆ ಪಂಪ್‌ ಸರಿ ಇಲ್ಲ, ಆ ಸಮಸ್ಯೆ, ಈ ಸಮಸ್ಯೆ ಎಂದು ಸಬೂಬು ಉತ್ತರಗಳೇ ಸಿಗುತ್ತಿವೆ. ಕಳೆದ ಒಂದು ವರ್ಷದಿಂದ ಈ ಪೈಪ್‌ನಲ್ಲಿ ಒಮ್ಮೆಯೂ ನೀರು ಬಂದಿಲ್ಲ. ನಾವೂ ಕೇಳಿ ಕೇಳಿ ಸೋತಿದ್ದೇವೆ. ಇನ್ನು ಕೇಳೋಕೆ ಹೋಗಲ್ಲ. ನಾವು ಇಲ್ಲಿ ಹೋರಾಟ ಮಾಡ್ತಾ ಇದ್ರೆ ಕೂಲಿಗೆ ಹೋಗೋದು ಯಾವಾಗ? ಎಂದು ಬೇಸರದಿಂದ ಹೇಳುತ್ತಾರೆ ಇಲ್ಲಿಯ ಚಲವಾದಿ ಗಲ್ಲಿಯ ನಿವಾಸಿಗಳು.

ನೀರಿಲ್ಲದ ಬಾವಿಗೆ ಹಾರಿದ ಮಹಿಳೆಯ ರಕ್ಷಿಸಿದ ಪೊಲೀಸರು

ಇಲ್ಲಿಯ ಒಕ್ಕಲಿಗರ ಕೇರಿ, ಚಲುವಾದಿಗಲ್ಲಿ ಸೇರಿದಂತೆ ಎಲ್ಲ ಕಡೆ ಪೈಪ್‌ಲೈನ್‌ ಇದೆ. ಆದರೆ, ನೀರು ಮಾತ್ರ ಬರುತ್ತಿಲ್ಲ.

-ನಾಗು ಚಲವಾದಿ, ಖುರ್ಸೆ ಗ್ರಾಮದ ನಿವಾಸಿ

click me!