Ballari News: ಐತಿಹಾಸಿಕ ಕೋಟೆ ಸಂರಕ್ಷಣೆಗೆ ಮುಂದಾಗದ ಗ್ರಾಮಾಡಳಿತ

By Kannadaprabha NewsFirst Published Dec 25, 2022, 1:28 PM IST
Highlights

ತಾಲೂಕಿನ ರಾಮಸಾಗರ ಗ್ರಾಮದಲ್ಲಿನ ಐತಿಹಾಸಿಕ ಕೋಟೆ ಗ್ರಾಮಾಡಳಿತದ ನಿರ್ಲಕ್ಷ್ಯದಿಂದ ಶಿಥಿಲಗೊಳ್ಳುತ್ತಿದೆ. ಕೋಟೆಯ ಸುತ್ತ ಗಿಡಗಂಟೆಗಳು ಬೆಳೆದು ಸಂಪೂರ್ಣ ಅಸ್ವಚ್ಛತೆಯಿಂದ ಕೂಡಿದೆ.

ಬಿ.ಎಚ್‌.ಎಂ ಅಮರನಾಥಶಾಸ್ತ್ರಿ

 ಕಂಪ್ಲಿ (ಡಿ.25) : ತಾಲೂಕಿನ ರಾಮಸಾಗರ ಗ್ರಾಮದಲ್ಲಿನ ಐತಿಹಾಸಿಕ ಕೋಟೆ ಗ್ರಾಮಾಡಳಿತದ ನಿರ್ಲಕ್ಷ್ಯದಿಂದ ಶಿಥಿಲಗೊಳ್ಳುತ್ತಿದೆ. ಕೋಟೆಯ ಸುತ್ತ ಗಿಡಗಂಟೆಗಳು ಬೆಳೆದು ಸಂಪೂರ್ಣ ಅಸ್ವಚ್ಛತೆಯಿಂದ ಕೂಡಿದೆ.

ಭೀಮ ಜೆಟ್ಟಿಎಂಬುವರು ಆನೆಗೂಂದಿ ಅರಸರ ಮರ್ಯಾದೆಗೆ ಕುಂದು ಉಂಟಾಗುವಂತೆ ಊರ ಬಾಗಿಲಿಗೆ ತನ್ನ ಇಜಾರ ಕಟ್ಟಿಸಿ ಮೆರೆಯುತ್ತಿದ್ದನಂತೆ. ಈತನನ್ನು ಜೋಡಿ ಮಲ್ಲಪ್ಪ ನಾಯಕ ಸೋಲಿಸಿದ ಈ ಕಾರಣಕ್ಕಾಗಿ ಆನೆಗೂಂದಿ ಅರಸ ರಾಮರಾಯ ತಿರುಮಲರಾಜದೇವನು ಮಲ್ಲಪ್ಪನಿಗೆ ಭೀಮ ಎಂದು ಬಿರುದು ನೀಡಿ ಗೌರವಿಸಿದ. ಅಲ್ಲದೇ ಈತನಿಗಾಗಿ ರಾಮಸಾಗರ ಕೆರೆ, ಭೀಮೇಶ್ವರ ದೇವಸ್ಥಾನ ಹಾಗೂ ಕೋಟೆ ನಿರ್ಮಿಸಿದ ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ಕಿತ್ತೂರು ಕೋಟೆ ಪುನರ್‌ ನಿರ್ಮಾಣಕ್ಕೆ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

ರಾಮಸಾಗರದ ಈಶಾನ್ಯದಲ್ಲಿ ಚಿಕ್ಕ ಬೆಟ್ಟದ ಮೇಲೆ ಸುಮಾರು 4 ಎಕರೆಯ ಪ್ರದೇಶದಲ್ಲಿ ಕೋಟೆ ನಿರ್ಮಿಸಲಾಗಿದೆ. ಇದು ಗ್ರಾಮ ರಕ್ಷಣೆಯ ಗಿರಿದುರ್ಗವೂ ಆಗಿದೆ. ಅಲ್ಲದೇ ಉದಯಗಿರಿಯ ಹೆಬ್ಬಾಗಿಲಿಗೆ ಇಲ್ಲಿಂದ ದಾರಿ ಸಾಗಿದೆ ಎನ್ನಲಾಗುತ್ತದೆ. ಕೋಟೆ ಉತ್ತಾರಾಭಿಮುಖವಾಗಿದ್ದು, ಒಳ ಮಧ್ಯ ಭಾಗದಲ್ಲಿ ದೊಡ್ಡ ಕೊತ್ತಲವಿದೆ. ಈ ಕೊತ್ತಲವು 30 ಸುತ್ತಳತೆ ಹಾಗೂ 30 ಅಡಿ ಎತ್ತರವಾಗಿದೆ. ವೃತ್ತಾಕಾರದ ಕೊತ್ತಲವನ್ನೇರಿ ಶತ್ರುಗಳ ಚಲನವಲನಗಳನ್ನು ಗುರುತಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ.

ಕೋಟೆಯ ಗೋಡೆ ಸುಮಾರು 10 ಅಡಿ ಎತ್ತರವಿದ್ದು, 3 ರಿಂದ 5ಅಡಿಗಳಷ್ಟುಅಗಲವಾಗಿದ್ದು, ಸುಮಾರು 300ಮೀ ಸುತ್ತಳತೆ ಹೊಂದಿದೆ. ಅತ್ಯಂತ ಕಿರಿದಾದ ಕೋಟೆ ಎಂಬ ಉಪಖ್ಯಾತಿಯನ್ನು ಹೊಂದಿದೆ. ತಳಪಾಯವಿಲ್ಲದೇ ಹಾಸುಬಂಡೆಯ ಮೇಲೆ ಮಧ್ಯಮ ಗಾತ್ರದ ಕಲ್ಲುಗಳಿಂದ ಕೋಟೆ ನಿರ್ಮಿಸಲಾಗಿದ್ದು ಕೋಟೆಯೊಳಗಡೆ ಬಾವಿ ತೋಡಿಸಲಾಗಿದೆ. ಈ ಗ್ರಾಮದ ಸುತ್ತಮುತ್ತಲಿನ ಬೆಟ್ಟಗಳಿಗಿಂತ ಈ ಬೆಟ್ಟಸ್ವಲ್ಪ ಎತ್ತರವಾಗಿದ್ದು ಮೇಲ್ಭಾಗದಲ್ಲಿ ವಿಶಾಲವಾದ ಸ್ಥಳಾವಕಾಶ ಹೊಂದಿರುವುದರಿಂದ ಇಲ್ಲಿ ಕೋಟೆ ನಿರ್ಮಿಸಲಾಗಿದೆ. ವಿಜಯನಗರಕ್ಕೆ ಪೂರ್ವ ದಿಕ್ಕಿನಿಂದ ನುಗ್ಗುವ ಶತ್ರುಗಳನ್ನು ತಡೆ ಹಿಡಿಯುವುದಕ್ಕಾಗಿ ಮತ್ತು ಚಲನವಲನಗಳನ್ನು ಗುರುತಿಸಲು ಈ ಚಿಕ್ಕ ಕೋಟೆ ನಿರ್ಮಿಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ನೀರು ಸಂಗ್ರಹಣಾ ತೊಟ್ಟಿಸ್ಥಳಾಂತರಿಸಿ:

ಕೋಟೆಯ ಮೇಲೆ ಗ್ರಾಮಾಡಳಿತ ನಿರ್ಮಿಸಿರುವಂತಹ ನೀರಿನ ಟ್ಯಾಂಕ್‌ನ ಸೋರಿಕೆಯಿಂದ ಕೋಟೆಯ ಗೋಡೆಗಳು ಸಡಿಲವಾಗಿ ಅಲ್ಲಲ್ಲಿ ಕಲ್ಲುಗಳು ಸರಿದು ಬಿದ್ದು ಕೋಟೆ ನಶಿಸುತ್ತಿದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಿ ಕೋಟೆಯ ಮೇಲಿನ ನೀರು ಸಂಗ್ರಹಣಾ ತೊಟ್ಟಿಸ್ಥಳಾಂತರಿಸಲು ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

ಬಳ್ಳಾರಿಯಿಂದ ಬೇರ್ಪಟ್ಟು ವಿಜಯನಗರ ಜಿಲ್ಲೆ ನಿರ್ಮಾಣಗೊಂಡಿದ್ದು, ಬಳ್ಳಾರಿ ಜಿಲ್ಲೆಯಲ್ಲಿನ ಐತಿಹಾಸಿಕ ಸ್ಥಳಗಳು,ಕೋಟೆಗಳು, ಸ್ಮಾರಕಗಳನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸುವಂತಹ ಕಾರ್ಯ ಜಿಲ್ಲಾಡಳಿತ ಮುತುವರ್ಜಿ ವಹಿಸಿ ಮಾಡಬೇಕಾಗಿದೆ. ಅದರಂತೆ ರಾಮಸಾಗರದಲ್ಲಿನ ಕೋಟೆಯಲ್ಲಿನ ನೀರಿನ ತೊಟ್ಟಿಸ್ಥಳಾಂತರಿಸಿ ಅದರ ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ಕೆ ಜಿಲ್ಲಾಡಳಿತ, ಪ್ರಾಚ್ಯವಸ್ತು ಇಲಾಖೆ ಹಾಗೂ ಗ್ರಾಮಾಡಳಿತ ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

ಐತಿಹಾಸಿಕ ಕೃಷ್ಣಾನಗರ ಕೋಟೆ ಸ್ವಚ್ಛತೆಗೆ ಹಿಂದೇಟು

ಐತಿಹಾಸಿಕ ರಾಮಸಾಗರದ ಕೋಟೆಯ ಮೇಲಿನ ನೀರು ಸಂಗ್ರಹಣಾ ತೊಟ್ಟಿಸ್ಥಳಾಂತರಿಸಿ ಕೋಟೆಯ ಸಂರಕ್ಷಣಾ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕು. ಅಲ್ಲದೇ ಕೋಟೆಯಲ್ಲಿರುವ ಬಂಡೇ ಹನುಮಂತರಾಯ ಸ್ವಾಮಿ ಪ್ರಾಚೀನ ದೇವಾಲಯವನ್ನು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡಿಸಿ ಅದರ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಬೇಕಿದೆ.

ಕಂಪ್ಲಿ ಯರಿಸ್ವಾಮಿ, ಬಂಡೇ ಹನುಮಂತರಾಯ ದೇವಸ್ಥಾನ ಸಮಿತಿ ಅಧ್ಯಕ್ಷರು

click me!