‘ರೈತರ ಸಂಕಷ್ಟ ರಾಜ್ಯ ಸರ್ಕಾರಕ್ಕೆ ಕಾಣುತ್ತಿಲ್ಲ’ : ಶಾಸಕ ಸುರೇಶ್‌ಗೌಡ

By Kannadaprabha News  |  First Published Mar 13, 2024, 10:28 AM IST

ರೈತರ ಸಂಕಷ್ಟಗಳು ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಬೀಳುತ್ತಿ ಲ್ಲವೆ? ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಆಕ್ರೋಶ ವ್ಯಕ್ತಪಡಿಸಿದರು.


 ತುಮಕೂರು :  ನಾವು ಪೇಪರ್ ಮೇಲಷ್ಟೇ ಶಾಸಕರಾಗಿದ್ದೇವೆ, ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ರುಪಾಯಿ ಅನುದಾನ ಕೊಟ್ಟಿಲ್ಲ. ಎಲ್ಲೆಡೆ ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಎದುರಾಗಿ ತೋಟಗಳು ಒಣಗಿ ರೈತರು ಕಂಗಾಲಾಗಿದ್ದಾರೆ. ರೈತರ ಸಂಕಷ್ಟಗಳು ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಬೀಳುತ್ತಿ ಲ್ಲವೆ? ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಾಂತರ ಕ್ಷೇತ್ರದ ಬೆಳ್ಳಾವಿಯಲ್ಲಿ ಮಂಗಳವಾರ ನಡೆದ ಬಿಜೆಪಿ ರಾಜ್ಯ ರೈತ ಮೋರ್ಚಾದ ಗ್ರಾಮ ಪರಿಕ್ರಮ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕರು, ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಪೂರೈಕೆಯಗುತ್ತಿಲ್ಲ, ಟ್ರಾನ್ಸ್‌ಫಾರ್ಮರ್ ಸುಟ್ಟುಹೋದರೆ ತಿಂಗಳಾದರೂ ಬದಲಾಯಿಸುವುದಿಲ್ಲ. ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕಾಗಿದ್ದ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಟೀಕಿಸಿದರು.

Latest Videos

undefined

ಸರ್ಕಾರದಲ್ಲಿ ರೈತರ ಸಮಸ್ಯೆಗಿಂತ ಕಾಂಗ್ರೆಸ್ ನಾಯಕರ ಅಧಿಕಾರದ ಹೋರಾಟವೇ ಮುಖ್ಯವಾಗಿದೆ. ಮುಖ್ಯಮಂತ್ರಿ ಆಗಬೇಕು ಎಂದು ಡಿ.ಕೆ. ಶಿವಕುಮಾರ್, ಡಾ. ಪರಮೇಶ್ವರ್, ಎಂ.ಬಿ.ಪಾಟೀಲ್, ಮಹದೇವಪ್ಪ ಅವರು ಗೊಂದಲದ ಹೇಳಿಕೆ ನೀಡುತ್ತಾ ಕಿತ್ತಾಟ ಶುರು ಮಾಡಿದ್ದಾರೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ. ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದರು.

ರೈತರ ಸಮೃದ್ಧಿಯಿಂದ ದೇಶದ ಆರ್ಥಿಕತೆ ಬದಲಾಯಿಸಬಹುದು ಎಂದು ಪ್ರಧಾನಿ ಮೋದಿಯವರು ರೈತರಿಗೆ ಶಕ್ತಿ ತುಂಬುವಂತಹ ಕಿಸಾನ್ ಸಮ್ಮಾನ್, ಫಸಲ್ ಬಿಮಾದಂತಹ ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ೨೭ ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. ಎರಡು ಎಕರೆ ಜಮೀನು ಇರುವ ೭೦ ವರ್ಷ ದಾಟಿದ ರೈತರಿಗೆ ಮಾಹೆಯಾನ ೩ ಸಾವಿರ ರು. ಪಿಂಚಣಿ ನೀಡುವ ವಿಶೇಷ ಯೋಜನೆ ಜಾರಿಯಲ್ಲಿದೆ. ಪ್ರಮುಖ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಗೆ ಮೋದಿ ಸರ್ಕಾರ ನೆರವಾಗಿದೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎಂಬ ಸಂಕಲ್ಪ ಇಟ್ಟುಕೊಂಡು ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆಗೆ ಕೆಲಸ ಮಾಡಬೇಕು ಎಂದು ಸುರೇಶ್‌ಗೌಡರು ಮನವಿ ಮಾಡಿದರು.

ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಮಾತನಾಡಿ, ದೇಶದ ಜನರಿಗೆ ಅನ್ನಹಾಕುವ ರೈತರೇ ನಿಜವಾದ ಅನ್ನ ದಾಸೋ ಹಿಗಳು. ಇಂತಹ ರೈತರ ಹಿತವನ್ನು ಕಾಪಾಡುವುದು ಯಾವುದೇ ಸರ್ಕಾರದ ಆದ್ಯತೆಯಾಗಬೇಕು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ರೈತಪರ ಕಾರ್ಯಕ್ರಮ ಕೈಗೊಳ್ಳದೆ ಕಡೆಗಣಿಸಿದೆ. ಅಲ್ಲದೆ, ಬಿಜೆಪಿ ಸರ್ಕಾರದ ಅವಧಿಯ ರೈತ ಯೋಜನೆಗಳನ್ನೂ ಕೈಬಿಟ್ಟಿದೆ ಎಂದು ಆರೋಪಿಸಿದರು.

2008ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ 18 ಲಕ್ಷ ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೆ ತಂದಿದ್ದರು. ಯಡಿಯೂರಪ್ಪ ಸರ್ಕಾರ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ೫ ರು. ಪ್ರೋತ್ಸಾಹ ಧನ ನೀಡುತ್ತಿತ್ತು. ಪ್ರೋತ್ಸಾಹ ಧನವನ್ನು 7 ರು.ಗೆ ಹೆಚ್ಚಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 7 ರು. ವಿಚಾರವಿರಲಿ, ಬಿಜೆಪಿ ಸರ್ಕಾರ ನೀಡುತ್ತಿದ್ದ 5 ರು. ಗಳನ್ನೂ ನೀಡದೆ 715 ಕೋಟಿ ರು. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದೆ ಎಂದರು.

ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಮಳೆ, ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಕುಡಿಯುವ ನೀರು, ವಿದ್ಯುತ್ ಸಮಸ್ಯೆಯಾಗಿ ರೈತರು ಸಂಕಷ್ಟಕ್ಕೀಡಾಗಿದ್ದರೂ ಯಾವ ಸಚಿವರೂ ಹಳ್ಳಿಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿಲ್ಲ. ರೈತ ಮೋಚಾ ಪ್ರತಿ ಹಳ್ಳಿಗೂ ಭೇಟಿ ನೀಡಿ ರೈತರ ಸಮಸ್ಯೆಗ ಆಲಿಸಿ, ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಿ ಹೋರಾಟ ರೂಪಿಸುವುದಾಗಿ ಹೇಳಿದರು.

ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ಆರ್. ರುದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ, ಮುಖಂಡರಾದ ದಿಲೀಪ್‌ಕುಮಾರ್, ಡಾ.ರಮೇಶ್ ಸೇರಿದಂತೆ ವಿವಿಧ ಮೋರ್ಚಾಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬೃಹತ್ ಬೈಕ್ ರ್ಯಾ ಲಿ ಹಮ್ಮಿಕೊಳ್ಳಲಾಗಿತ್ತು.

click me!