ಸಂಕ್ರಾಂತಿ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ

By Kannadaprabha NewsFirst Published Jan 15, 2023, 6:48 AM IST
Highlights

ಜಿಲ್ಲೆಯಲ್ಲಿ ಕಳೆದ ವರ್ಷ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಅವರಿಸಿದ್ದ ಅತಿವೃಷ್ಠಿಯ ಪರಿಣಾಮ ಇದೀಗ ಸುಗ್ಗಿ ಸಂಕ್ರಾಂತಿ ಹಬ್ಬದ ಮೇಲೆ ಬೀರಿದ್ದು ಅವರೆ, ನೆಲಗಡಲೆ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಗೊಂಡು ಗ್ರಾಹಕರ ಕೈ ಕಚ್ಚುತ್ತಿದೆ.

 ಕಾಗತಿ ನಾಗರಾಜಪ್ಪ.

  ಚಿಕ್ಕಬಳ್ಳಾಪುರ (ಜ.15):  ಜಿಲ್ಲೆಯಲ್ಲಿ ಕಳೆದ ವರ್ಷ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಅವರಿಸಿದ್ದ ಅತಿವೃಷ್ಠಿಯ ಪರಿಣಾಮ ಇದೀಗ ಸುಗ್ಗಿ ಸಂಕ್ರಾಂತಿ ಹಬ್ಬದ ಮೇಲೆ ಬೀರಿದ್ದು ಅವರೆ, ನೆಲಗಡಲೆ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಗೊಂಡು ಗ್ರಾಹಕರ ಕೈ ಕಚ್ಚುತ್ತಿದೆ.

ಸಂಕ್ರಾಂತಿ ಹಬ್ಬಕ್ಕೆ ಎರಡು ದಿನ ಇರುವಾಗಲೇ ಜಿಲ್ಲಾದ್ಯಂತ ಹಬ್ಬದ ಖರೀದಿ ಭರಾಟೆ ಶುಕ್ರವಾರದಿಂದಲೇ ಶುರುವಾಗಿದ್ದು ಜಿಲ್ಲಾ ಕೇಂದ್ರದಲ್ಲಿ ಅಂತು ರಾಶಿ ರಾಶಿ ಅವರೆ, ನೆಲಗಲಡೆ, ಗೆಣಸು, ಕಬ್ಬು ಮಾರಾಟ ಮಾಡುತ್ತಿರುವ ದೃಶ್ಯಗಳು ನಗರದ ಬಜಾರ್‌ ರಸ್ತೆ, ಗಂಗಮ್ಮ ಗುಡಿ ರಸ್ತೆಗಳಲ್ಲಿ ಕಂಡು ಬಂದವು..

ಶೇಂಗಾ, ಅವರೆ ಬೆಲೆ ದುಪ್ಪಟ್ಟು

ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಕೃಷಿ ಬೆಳೆಗಳು ಹಾನಿಗೊಂಡ ಪರಿಣಾಮ ಅದರಲ್ಲೂ ಶೇಂಗಾ, ಅವರೆ ಮತ್ತಿತರ ಬೆಳೆಗಳು ಅತಿವೃಷ್ಟಿಗೆ ಸಿಕ್ಕಿ ರೈತನ ಕೈ ಹಿಡಿಯದ ಪರಿಣಾಮ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಾಗಿ ಬಳಸುವ ಶೇಂಗಾ, ಅವರೆ ಬೆಳೆಗಳು ಕಳೆದ ವರ್ಷಕ್ಕಿಂತ ಈ ಬಾರಿ ದುಪ್ಪಟ್ಟುಗೊಂಡು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದು ಜನ ಸಾಮಾನ್ಯರು ಅಂತೂ ಬೆಲೆ ಏರಿಕೆಗೆ ಹೈರಾಣುತ್ತಿದ್ದಾರೆ. ಜೊತೆಗೆ ವ್ಯಾಪಾರಸ್ಥರ ಬಳಿ ಚೌಕಸಿ ಮಾಡಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.

ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಆಗ ಅತಿವೃಷ್ಠಿಗೆ ಬೆಳೆ ಕಳೆದುಕೊಂಡ ರೈತರು ಒಂದಡೆಯಾದರೆ ಅತಿಯಾದ ಮಳೆಯಿಂದ ಸಮಯಕ್ಕೆ ಸರಿಯಾಗಿ ಬಿತ್ತನೆಗೆ ಅವಕಾಶ ಸಿಗದ ಬೆಳೆ ಬಿತ್ತದ ರೈತರು ಇದೀಗ ದುಬಾರಿ ಬೆಲೆ ಕೊಟ್ಟು ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಅವರೆ, ನೆಲಗಡಲೆ, ಗೆಣಸು ಖರೀದಿ ಮಾಡುವ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಸುಗ್ಗಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ರೈತರು ಮುಂದಾಗಿದ್ದಾರೆ. ಇನ್ನೂ ದನಕರುಗಳ ಅಲಂಕಾರಕ್ಕೆ ಬೇಕಾದ ಸಾಮಗ್ರಿಗಳನ್ನು ರೈತರು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ಕಬ್ಬಿಗೂ ಹೆಚ್ಚಿದ ಬೇಡಿಕೆ:

ಜಿಲ್ಲೆಯಲ್ಲಿ ಕಬ್ಬು ಬೆಳೆಯುವುದೇ ಜಿಲ್ಲೆಯಲ್ಲಿ ಅಪರೂಪ. ಹೀಗಾಗಿ ಜಿಲ್ಲೆಗೆ ಮಂಡ್ಯ, ಹಾಸನ, ರಾಮನಗರ ಜಿಲ್ಲೆಗಳಿಂದ ಕಬ್ಬು ತರಿಸಿಕೊಂಡು ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದು ಕಬ್ಬು ಕಳೆದ ವರ್ಷದಷ್ಟೇ ಈ ವರ್ಷ ಕಬ್ಬುನ ಎರಡು ಜಲ್ಲೆ 100 ರು ಮಾರಾಟವಾಗುತ್ತಿದೆ. ಈ ವರ್ಷ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆ ಆಗಿರುವುದರಿಂದ ಜಿಲ್ಲೆಯ ಪರಿಸರ ಸಮೃದ್ದಿಯಿಂದ ಕೂಡಿದ್ದು ಸಂಕ್ರಾಂತಿ ಹಬ್ಬದ ಸಂಭ್ರಮ ಹಲವು ರೈತರಿಗೆ ಸಿಹಿ ತಂದರೆ ಹಲವು ರೈತರಿಗೆ ಅತಿವೃಷ್ಠಿಯಿಂದ ಕಹಿ ಕೊಟ್ಟಿದೆ.

ನೆಲಗಲಡೆ ಕೆಜಿ 120, 130 ರು!

ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಶುಕ್ರವಾರ ಕೆಜಿ ನೆಲಗಲಡೆ ಮಾರುಕಟ್ಟೆಯಲ್ಲಿ ಬರೋಬ್ಬರಿ 120 ರಿಂದ 130ರ ರು, ವರೆಗೂ ಮಾರಾಟಗೊಂಡರೆ ಅವರೆ ಒಂದೂವರೆ ಕೆಜಿ 100 ರು, ಗಡಿ ದಾಟಿತ್ತು. ಹಬ್ಬದ ವೇಳೆಗೆ 150 ರು, ಮುಟ್ಟಿದರೂ ಯಾರು ಅಶ್ಚರ್ಯ ಪಡಬೇಕಿಲ್ಲ. ಇನ್ನೂ ಜೋಡಿ ಕಬ್ಬು 100 ರು,ಗೆ ಮಾರಾಟವಾಗುತ್ತಿದೆ. ಕರಿ ಕಬ್ಬುಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ. ಇನ್ನೂ ಸಿಹಿ ಗೆಣಸು ಕೆಜಿಗೆ 50 ರು,ಗೆ ಮಾರಾಟವಾಗುತ್ತಿದೆ.

click me!