ಜಿಲ್ಲಾಡಳಿತವೇ ಮನೆ ಬಾಗಿಲಿಗೆ ಬಂದಿದೆ ಸದುಪಯೋಗಿಸಿಕೊಳ್ಳಿ: ಸ್ನೇಹಲ್‌

By Kannadaprabha NewsFirst Published Dec 18, 2022, 5:39 AM IST
Highlights

ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ಗ್ರಾಮಸ್ಥರು ಈ ಕಾರ್ಯಕ್ರಮದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಹೇಳಿದರು.

 ಯಾದಗಿರಿ (ಡಿ.18): ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ಗ್ರಾಮಸ್ಥರು ಈ ಕಾರ್ಯಕ್ರಮದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಹೇಳಿದರು.

ತಾಲೂಕಿನ ಮೋಟ್ನಹಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲಾವರಣದಲ್ಲಿ (High School)  ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮದ ಜನರ ಅಹವಾಲುಗಳನ್ನು ಸ್ವೀಕರಿಸಿ, (Pension) ಪತ್ರಗಳನ್ನು ಮತ್ತು ಅಂಗವಿಕಲ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.

ಈ ಕಾರ್ಯಕ್ರಮವು ಗ್ರಾಮೀಣ ಭಾಗದ ಜನರ ಹತ್ತು ಹಲವಾರು ಕುಂದುಕೊರತೆಗಳ ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹರಿಸಲು ಮತ್ತು ಗ್ರಾಮವನ್ನು ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದೆ ಎಂದರು.

ತ್ರೀ ಆ್ಯಂಡ್‌ ನೈನ್‌ (3 ಮತ್ತು 9ಕಲಂ) ಮಿಸ್‌ ಮ್ಯಾಚ್‌, ಪೈಕಿ ಮೋಜನಿ ಕಡತಗಳು, ಪಿಂಚಣಿ, ಆಶ್ರಯ ಯೋಜನೆ, ಫವತಿ ಖಾತೆ, ಮತದಾರರ ಪಟ್ಟಿಪರಿಷ್ಕರಣೆ, ಬರ, ಪ್ರವಾಹ ಪರಿಶೀಲನೆ ಹಾಗೂ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥಕ್ಕೆ ಸಂಬಂಧಿಸಿದ ಅಡೆತಡೆ ನಿವಾರಣೆ ಸಂಬಂಧ ಅರ್ಜಿಗಳನ್ನು ಕೊಡಬಹುದು ಎಂದು ತಿಳಿಸಿದರು.

ಕಾರ್ಯಕ್ರಮಲ್ಲಿ ಕೇವಲ ಕಂದಾಯ ಇಲಾಖೆಗೆ ಸಂಬಂಧಪಟ್ಟಸಮಸ್ಯೆಗಳಿಗೆ ಪರಿಹಾರ ಮಾತ್ರವಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯ್ತಿ ಅಭಿವೃದ್ಧಿ ಇಲಾಖೆ ಇನ್ನಿತರ ಯಾವುದೇ ಇಲಾಖೆಗೆ ಸಂಬಂಧಪಟ್ಟಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಜಿಲ್ಲಾಡಳಿತ ಹಂತದಲ್ಲಿ ಇರುವ ಸಮಸ್ಯೆಗಳಿದ್ದರೆ ಪರಿಹರಿಸುತ್ತೇವೆ ಎಂದರು.

ಗ್ರಾಮದಲ್ಲಿನ 2ನೇ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ, ಕೇಂದ್ರದಲ್ಲಿಂದು ಮೂರು ಮಕ್ಕಳ ಹುಟ್ಟಿದ ಹಬ್ಬ ಇರುವುದರಿಂದ ಮಕ್ಕಳೊಂದಿಗೆ ಕೇಕ್‌ ಕತ್ತರಿಸಿ ತಿನ್ನಿಸಿ ಶುಭ ಹಾರೈಸಿದರು. ಮಕ್ಕಳಿಗೆ (6 ತಿಂಗಳಿಂದ 1ವರ್ಷ) ಅನ್ನಪ್ರಾಶನ್ನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಇಲಾಖೆಯಿಂದ ನೀಡುವ ನ್ಯೂಟ್ರಿಮಿಕ್ಸ್‌, ರಾಗಿಗಂಜಿ, ದಾಲ್‌ ಕಿಚಡಿಯನ್ನು ಮಕ್ಕಳ ತಾಯಂದಿರಿಂದ ತಿನ್ನಿಸಲಾಯಿತು. ಕೇಂದ್ರದಲ್ಲಿನ ಮಕ್ಕಳಿಗೆ ನೀಡುವ ಶಾಲಾಪೂರ್ವ ಶಿಕ್ಷಣವನ್ನು ವೀಕ್ಷಿಸಿದರು. ಗರ್ಭಿಣಿ ಬಾಣಂತಿಯರ ಜೊತೆ ಸಮಾಲೋಚನೆ ನಡೆಸಿದರು.

ಗ್ರಾಮದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಮತ್ತು ಗ್ರಾಮಸ್ಥರ ಮನವಿಯ ಮೇರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

88 ಅರ್ಜಿಗಳ ಸ್ವೀಕಾರ:

ಕಂದಾಯ ಇಲಾಖೆಗೆ ಸಂಬಂಧಿಸಿದ 45 ಅರ್ಜಿಗಳು ಸಲ್ಲಿಸಿದ್ದು, ಜಮೀನು ಸರ್ವೇ, ಟಿಪ್ಪಣಿ, ಪಹಣಿ ತಿದ್ದುಪಡಿಗೆ ಸಂಬಂಧಿಸಿದ ರಸ್ತೆ, ಚರಂಡಿ, ಮನೆ ಮಂಜೂರಾತಿ ಮೂಲಸೌಲಭ್ಯ, ವಿದ್ಯುತ್‌ ಸಮಸ್ಯೆ ಹಾಗೂ ಸಾರಿಗೆ ಶಿಕ್ಷಣ ಸೇರಿ ಒಟ್ಟು 88 ಅರ್ಜಿಗಳು ಬಂದಿದ್ದು, ಅರ್ಜಿಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಹಾಯಕ ಆಯುಕ್ತ ಶಾ ಆಲಂ ಹುಸೇನ್‌, ಯಾದಗಿರಿ ತಹಸೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಗ್ರಾಪಂ ಅಧ್ಯಕ್ಷೆ ಸಾಬಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ್‌ ಕವಿತಾಳ, ಜಂಟಿ ಕೃಷಿ ನಿರ್ದೇಶಕ ಅಭಿದ್‌ ಎಸ್‌., ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸವ ಎಸ್‌., ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಾಘವೇಂದ್ರ, ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ, ಜಿಲ್ಲಾ ಮಲೇರಿಯಾ ಅಧಿಕಾರಿ ಲಕ್ಷ್ಮೀಕಾಂತ ಒಂಟೀಪೀರ, ಸಾರಿಗೆ ವಿಭಾಗೀಯ ಅಧಿಕಾರಿ ರಮೇಶ ಪಾಟೀಲ್‌ ಇತರರಿದ್ದರು.

ಜಿಲ್ಲಾಧಿಕಾರಿಗಳಿಗೆ ಅದ್ಧೂರಿ ಸ್ವಾಗತ:

ಯಾದಗಿರಿ ತಾಲೂಕಿನ ಮೋಟ್ನಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲಾವರಣದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆಂದು ಆಗಮಸಿದ್ದ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಅವರನ್ನು ಹಳ್ಳಿ ಸೊಗಡು ಡೊಳ್ಳು ವಾದ್ಯಗಳೊಂದಿಗೆ ಎತ್ತಿನ ಗಾಡಿಯಲ್ಲಿ ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡುವ ಅದ್ಧೂರಿಯಾಗಿ ಹೃದಯಸ್ಪರ್ಶಿಯಿಂದ ಗ್ರಾಮಸ್ಥರು ಸ್ವಾಗತಿಸಿದರು. ಈ ವೇಳೆ ಜಿಲ್ಲಾಧಿಕಾರಿ ಬಾರುಕೋಲು ಹಿಡಿದು ಎತ್ತಿನಗಾಡಿಯನ್ನು ತಾವೇ ಓಡಿಸಿ ಗಮನಸೆಳೆದರು.

click me!