ಆತಂಕ ತೋಡಿಕೊಂಡ ತೇಜಸ್ವಿನಿ ಅನಂತ್ ಕುಮಾರ್

Published : Sep 01, 2019, 09:13 AM IST
ಆತಂಕ ತೋಡಿಕೊಂಡ ತೇಜಸ್ವಿನಿ ಅನಂತ್ ಕುಮಾರ್

ಸಾರಾಂಶ

ತೇಜಸ್ವಿನಿ ಅನಂತ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆ ಎಂದಿದ್ದಾರೆ. 

ಬೆಂಗಳೂರು [ಸೆ.01]:  ಬೆಂಗಳೂರಿನಲ್ಲಿ ಕನ್ನಡ ಭಾಷೆ ಬಳಕೆಯ ಪರಿಪಾಠ ಕಡಿಮೆಯಾಗುತ್ತಿದೆ ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಅದಮ್ಯ ಚೇತನ ಸಂಸ್ಥೆಯ ಆವರಣದಲ್ಲಿ ಇ-ಜ್ಞಾನ ಟ್ರಸ್ಟ್‌ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಕನ್ನಡ ಕಲಿಕೆ ಮಾಲಿಕೆಯ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಸಂಸ್ಕೃತದ ನಂತರ ಪುರಾತನ ಇತಿಹಾಸ ಹಾಗೂ ವಿಶೇಷ ಗುಣಲಕ್ಷಣ ಹೊಂದಿರುವ ಭಾಷೆ ಕನ್ನಡ. ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ. ಪ್ರತಿ ವಾಕ್ಯದಲ್ಲೂ ಇಂಗ್ಲಿಷ್‌ ಪದಗಳ ಬಳಕೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಪುರಾತನ ಭಾಷೆ ಕನ್ನಡವನ್ನು ಶುದ್ಧವಾಗಿ ಹಾಗೂ ಸ್ಪಷ್ಟವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದರು.

ಇಂದಿಗೂ ಎಷ್ಟೂಮಕ್ಕಳಿಗೆ ಕ್ಲಿಷ್ಟಕರ ಶಬ್ಧಗಳ ಕನ್ನಡ ಅರ್ಥ ತಿಳಿಯುವುದು ಕಷ್ಟವಾಗಿದೆ. ಈ ಪುಸ್ತಕಗಳ ಮುಖಾಂತರ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ರಾಜಧಾನಿಯ ಮಂದಿಯ ಭಾಷೆಯಲ್ಲಿ ಇಂಗ್ಲಿಷ್‌ ಹಾಸುಹೊಕ್ಕಾಗಿರುವ ಈ ಸಂದರ್ಭದಲ್ಲಿ ಕನ್ನಡ ಬಳಕೆ ಹೆಚ್ಚಿಸುವ ಜವಾಬ್ದಾರಿಯಿದೆ ಎಂದು ಹೇಳಿದರು.

ಇ ಜ್ಞಾನ ಟ್ರಸ್ಟ್‌ನ ಅಧ್ಯಕ್ಷ ಟಿ.ಎಸ್‌.ಗೋಪಾಲ್ ಮಾತನಾಡಿ, ಬೆಂಗಳೂರು ನಗರದ ಸಾವಿರಾರು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಅದಮ್ಯ ಚೇತನ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇದರ ಹಿಂದಿನ ಪ್ರೇರಕ ಶಕ್ತಿ ತೇಜಸ್ವಿನಿ ಅವರು ಹಲವರಿಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ 60 ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು. 60 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಕನ್ನಡ ಕಲಿಕೆ ಮಾಲಿಕೆಯ 60 ಸೆಟ್‌ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

PREV
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!