
ಬೆಂಗಳೂರು: ರಾಜಧಾನಿಯ ಪ್ರಮುಖ ರೈಲ್ವೆ ನಿಲ್ದಾಣಗಳಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು ನಗರ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ನೈಋತ್ಯ ರೈಲ್ವೆ (SWR) ಬೃಹತ್ ಯೋಜನೆ ರೂಪಿಸಿದೆ. ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಹಾಗೂ ಹೊಸ ರೈಲುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಎರಡೂ ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲು ರೈಲ್ವೆ ಮಂಡಳಿ ಅಧಿಕೃತ ಒಪ್ಪಿಗೆ ನೀಡಿದೆ.
ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮೊದಲ ಹಂತದ ಯಾರ್ಡ್ ಮರುವಿನ್ಯಾಸ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದೀಗ ಎರಡನೇ ಹಂತದ ಕಾಮಗಾರಿಯ ಭಾಗವಾಗಿ ₹228 ಕೋಟಿ ಅಂದಾಜು ವೆಚ್ಚದಲ್ಲಿ 2 ಹೊಸ ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲು ನೈಋತ್ಯ ರೈಲ್ವೆ ಸಿದ್ಧತೆ ನಡೆಸಿದೆ. ಇದರಿಂದಾಗಿ ಸುದೀರ್ಘ ಅವಧಿಯಿಂದ ಎದುರಾಗುತ್ತಿದ್ದ ಪ್ಲಾಟ್‌ಫಾರ್ಮ್ ಕೊರತೆ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಇದೀಗ ₹228 ಕೋಟಿ ವೆಚ್ಚದಲ್ಲಿ 11 ಮತ್ತು 12ನೇ 'ಐಲ್ಯಾಂಡ್ ಪ್ಲಾಟ್‌ಫಾರ್ಮ್‌ಗಳನ್ನು' ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ನೂತನ ಪ್ಲಾಟ್‌ಫಾರ್ಮ್‌ಗಳು ವಂದೇ ಭಾರತ್ ರೈಲುಗಳ ಅತ್ಯಾಧುನಿಕ ನಿರ್ವಹಣಾ ಸೌಲಭ್ಯ ಹಾಗೂ ವಿವಿಧ ಪ್ರಯಾಣಿಕ ಸ್ನೇಹಿ ಸವಲತ್ತುಗಳನ್ನು ಹೊಂದಿರಲಿವೆ.
ಮತ್ತೊಂದೆಡೆ, ನಗರದ ಮತ್ತೊಂದು ಪ್ರಮುಖ ರೈಲ್ವೆ ಹಬ್ ಆಗಿರುವ ಯಶವಂತಪುರ ನಿಲ್ದಾಣವನ್ನು ವಿಸ್ತರಿಸಲು ₹331.64 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆಯಡಿ ಯಶವಂತಪುರದಲ್ಲಿ ಬರೋಬ್ಬರಿ 4 ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತದೆ. ಈ ವಿಸ್ತರಣೆಯಿಂದಾಗಿ ಯಶವಂತಪುರ ಮಾರ್ಗವಾಗಿ ಮೈಸೂರು ಭಾಗಕ್ಕೆ ಸಂಚರಿಸುವ ರೈಲುಗಳಿಗೆ ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ನಿಲ್ದಾಣದ ಮೇಲಿನ ಒತ್ತಡ ಕೂಡ ಕಡಿಮೆಯಾಗಲಿದೆ.
ಯಶವಂತಪುರ ನಿಲ್ದಾಣದ ವಿಸ್ತರಣೆಗಾಗಿ ಸಮೀಪದ 'ಎಂಜಿ ಕಾಲೊನಿ' ಪ್ರದೇಶದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಭೂಸ್ವಾಧೀನದ ಬಳಿಕ ಆ ಜಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಬಹುಮಹಡಿ ಕಟ್ಟಡ ಹಾಗೂ ಪ್ರಯಾಣಿಕರ ವಾಹನಗಳ ನಿಲುಗಡೆಗಾಗಿ ವಿಶಾಲವಾದ ಬಹುಮಹಡಿ ಪಾರ್ಕಿಂಗ್ ಸಮುಚ್ಚಯವನ್ನು ನಿರ್ಮಿಸಲು ರೈಲ್ವೆ ಮಂಡಳಿ ಯೋಜನೆ ರೂಪಿಸಿದೆ.
ಪ್ರಸ್ತುತ ಕೆಎಸ್‌ಆರ್ ನಿಲ್ದಾಣದಲ್ಲಿ 10 ಪ್ಲಾಟ್‌ಫಾರ್ಮ್‌ಗಳು ಕಾರ್ಯನಿರ್ವಹಿಸುತ್ತಿವೆ. 2022ರಲ್ಲಿ ಬೈಯಪ್ಪನಹಳ್ಳಿಯ ಅತ್ಯಾಧುನಿಕ ಎಸ್‌ಎಂವಿಟಿ (SMVT) ರೈಲು ನಿಲ್ದಾಣ ಆರಂಭವಾದ ಬಳಿಕ, ಉತ್ತರ ಭಾರತದ ಕಡೆಗೆ ಸಂಚರಿಸುವ ಪ್ರಮುಖ ರೈಲುಗಳನ್ನು ಅಲ್ಲಿಗೆ ವರ್ಗಾಯಿಸಲಾಗಿತ್ತು. ಇದರಿಂದ ನಗರ ನಿಲ್ದಾಣದ ಮೇಲಿನ ದಟ್ಟಣೆ ಕೊಂಚಮಟ್ಟಿಗೆ ಕಡಿಮೆಯಾಗಿದ್ದರೂ, ರೈಲುಗಳ ಆವರ್ತನ ಹಾಗೂ ವಿಳಂಬದಂತಹ ತಾಂತ್ರಿಕ ಸಮಸ್ಯೆಗಳು ಇಂದಿಗೂ ಮುಂದುವರಿದಿದ್ದವು.