ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪೊಲೀಸರ ಅಮಾನತು: ಶಾಸಕ ಬಸನಗೌಡ ಯತ್ನಾಳ

By Kannadaprabha News  |  First Published May 22, 2024, 11:45 PM IST

ರಾಜ್ಯ ಸರ್ಕಾರ ಹಾಗೂ ಗೃಹ ಮಂತ್ರಿಗಳು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುತ್ತಿದ್ದಾರೆ. ಗೃಹ ಸಚಿವರೇ ನಿಮಗೆ ನಿಭಾಯಿಸಲು ಆಗದೇ ಇದ್ದರೆ ರಾಜೀನಾಮೆ ಕೊಡಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.


ಹುಬ್ಬಳ್ಳಿ (ಮೇ.22): ರಾಜ್ಯ ಸರ್ಕಾರ ಹಾಗೂ ಗೃಹ ಮಂತ್ರಿಗಳು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುತ್ತಿದ್ದಾರೆ. ಗೃಹ ಸಚಿವರೇ ನಿಮಗೆ ನಿಭಾಯಿಸಲು ಆಗದೇ ಇದ್ದರೆ ರಾಜೀನಾಮೆ ಕೊಡಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಅವರು ಇಲ್ಲಿನ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಡಾ. ಜಿ. ಪರಮೇಶ್ವರ ಅವರು ಗೃಹ ಖಾತೆಯನ್ನು ಸ್ವಇಚ್ಛೆಯಿಂದ ಪಡೆದಿಲ್ಲ. ಅವರಿಗೆ ಇಷ್ಟವೂ ಇರಲಿಲ್ಲ. ಬೇಸರದಿಂದಲೇ ಈ ಖಾತೆ ನಡೆಸಿಕೊಂಡು ಹೋಗುತ್ತಿದ್ದಾರೆ. 

ದಲಿತರೆಂಬ ಕಾರಣಕ್ಕೆ ಸರ್ಕಾರ ಅವರಿಗೆ ಈ ಖಾತೆ ನೀಡಿದೆ ಅಷ್ಟೆ. ಅವರಿಗೆ ಈ ಸ್ಥಾನದಲ್ಲಿ ಆಸಕ್ತಿ ಇಲ್ಲದಿದ್ದರೆ, ನಿಭಾಯಿಸುವ ಶಕ್ತಿ ಅವರಲ್ಲಿ ಇಲ್ಲದಿದ್ದರೆ ರಾಜೀನಾಮೆ ನೀಡಿ ಬೇರೆ ಖಾತೆ ನಿಭಾಯಿಸಲಿ ಎಂದರು. ಹುಬ್ಬಳ್ಳಿ-ಧಾರವಾಡದಲ್ಲಿ ಗಾಂಜಾ, ಅಫೀಮು ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಸಣ್ಣ ಸಣ್ಣ ಯುವಕರು ಈ ದುಶ್ಚಟಗಳ ದಾಸರಾಗುತ್ತಿರುವುದು ನೋವಿನ ಮತ್ತು ಆತಂಕಕಾರಿ. ಗಾಂಜಾ ಸೇವನೆಗೆ ತುತ್ತಾಗಿ ಇಂತಹ ಅಪರಾಧ ಚಟುವಟಿಕೆಗಳಲ್ಲಿ ರಾಜಾರೋಷವಾಗಿ ಭಾಗಿಯಾಗುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಲು ಕಾರಣವಾಗಿದೆ ಎಂದು ಹೇಳಿದರು.

Latest Videos

undefined

ಗಾಂಜಾ ಹಾಗೂ ಡ್ರಗ್ಸ್ ಮಾರಾಟ ಬುಡಸಮೇತ ಮಟ್ಟ ಹಾಕಬೇಕು. ‌ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ನೇಹಾ ಹತ್ಯೆಯಂತಹ ದೊಡ್ಡ ಅನಾಹುತವಾದರೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಆರೋಪಿ ವಿರುದ್ಧ ಯಾವ ದಿಟ್ಟ ನಿರ್ಧಾರವನ್ನೂ ಕೈಗೊಂಡಿಲ್ಲ. ಗೃಹಮಂತ್ರಿಗಳು ಹತ್ಯೆಯ ಮೂಲ ಕಂಡು ಹಿಡಿಯಲಿಲ್ಲ. ಇದರಿಂದಾಗಿಯೇ ಇನ್ನೊಂದು ಅಂತಹದೆ ಮಾದರಿಯ ದುರ್ಘಟನೆಗೆ ಕಾರಣವಾಯಿತು ಎಂದರು. ರಾಜ್ಯದಲ್ಲಿ ಗ್ಯಾರಂಟಿ ಕೊಟ್ಟ ಮೇಲೆ ಸಚಿವರು, ಶಾಸಕರಿಗೆ ಉತ್ಪನ್ನ ಇಲ್ಲವಾಗಿದೆ. ಹೀಗಾಗಿ ಇವರು ವರ್ಗಾವಣೆ ಹಾಗೂ ಅಕ್ರಮ ದಂಧೆಗಳ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿಲ್ಲ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವೆಂದು ಆರೋಪಿಸಿದರು.

ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಅನಾರೋಗ್ಯದಿಂದ ನಿಧನ!

ರಾಜ್ಯದಲ್ಲಿ 2 ಸಿಡಿ ಫ್ಯಾಕ್ಟರಿಗಳಿವೆ: ಸಂಸದ ಪ್ರಜ್ವಲ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಕರ್ನಾಟಕದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ ಎಂದು ನಾನು ಮೊದಲೇ ಹೇಳಿದ್ದೆ. ಅದರಲ್ಲಿ ಈಗ ಒಂದು ಸಿಡಿ ಫ್ಯಾಕ್ಟರಿಯದ್ದು ಹೊರಬಿದ್ದಿದೆ. ಇನ್ನೊಂದು ಸಿಡಿ ಫ್ಯಾಕ್ಟರಿದು ಕೆಲವೇ ದಿನಗಳಲ್ಲಿ ಹೊರಬೀಳಲಿದೆ ಎಂದರು. ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕುರಿತು ರಾಜ್ಯ ಚುನಾವಣಾ ಪೂರ್ವದಲ್ಲೇ ಗೊತ್ತಿತ್ತು. ಮೇಲಾಗಿ 1.20ಲಕ್ಷ ಪೆನ್‌ಡ್ರೈವ್‌ಗಳನ್ನು ಮನೆ-ಮನೆಗೆ ಹಂಚಲಾಗಿತ್ತು. ಆಗ ಕಾಂಗ್ರೆಸ್‌ ಪ್ರಜ್ವಲ್‌ ಅವರನ್ನು ಏಕೆ ಬಂಧಿಸಿ ತನಿಖೆ ನಡೆಸಲಿಲ್ಲ. ಸುಮ್ಮನೆ ರಾಜ್ಯ ಸರ್ಕಾರ ನಾಟಕವಾಡುವುದನ್ನು ಬಿಡಲಿ ಎಂದು ಹರಿಹಾಯ್ದರು.

click me!