Latest Videos

ಬೀದರ್ ವಿಮಾನಯಾನ ಪುನಾರಂಭಕ್ಕೆ ಪ್ರಸ್ತಾವ ಸಲ್ಲಿಸಿ: ಸಚಿವ ಎಂ.ಬಿ.ಪಾಟೀಲ್‌ಗೆ ಖಂಡ್ರೆ ಪತ್ರ

By Kannadaprabha NewsFirst Published Jun 24, 2024, 11:45 PM IST
Highlights

ನಗರಕ್ಕೆ ನಾಗರಿಕ ವಿಮಾನಯಾನ ಸೇವೆ ಪುನಾರಂಭಿಸುವ ನಿಟ್ಟಿನಲ್ಲಿ ವಿಮಾನಯಾನ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ಗೆ ಪತ್ರ ಬರೆದಿದ್ದಾರೆ.

ಬೀದರ್ (ಜೂ.24): ನಗರಕ್ಕೆ ನಾಗರಿಕ ವಿಮಾನಯಾನ ಸೇವೆ ಪುನಾರಂಭಿಸುವ ನಿಟ್ಟಿನಲ್ಲಿ ವಿಮಾನಯಾನ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ಗೆ ಪತ್ರ ಬರೆದಿದ್ದಾರೆ.

ಕರುನಾಡ ಕಿರೀಟ ಎಂದೇ ಖ್ಯಾತವಾಗಿರುವ ಬೀದರ್ ಜಿಲ್ಲೆ ಬಸವಾದಿ ಶರಣರ ಪುಣ್ಯಭೂಮಿಯಾಗಿದ್ದು, ಬಸವಕಲ್ಯಾಣದ ಅನುಭವ ಮಂಟಪ, ಬೀದರ್ ನಗರದಲ್ಲಿಯೇ ಇರುವ ನಾನಕ್ ಝೀರಾ ಗುರುದ್ವಾರ, ಮೊಹಮದ್ ಗವಾನರ ಮದರಸಾ, ನರಸಿಂಹ ಝರನಾ, ಬೀದರ್ ಕೋಟೆ-ಕರೇಜ್, ಪಾಪನಾಶ ಮೊದಲಾದ ಹಲವು ಪ್ರಮುಖ ಪ್ರವಾಸಿ ತಾಣಗಳಿಂದ ಕೂಡಿದೆ. ಆದ್ದರಿಂದ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಮಾನಯಾನ ಸೌಲಭ್ಯದ ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 700 ಕಿಮೀ ದೂರದಲ್ಲಿರುವ ಬೀದರ್‌ಗೆ ರಸ್ತೆ ಮತ್ತು ರೈಲು ಮಾರ್ಗವಾಗಿ ತಲುಪಲು 15 -16 ಗಂಟೆಗಳಾಗುತ್ತದೆ. ಬೀದರ್ ಜಿಲ್ಲಾ ಕೇಂದ್ರಕ್ಕೆ ಉಡಾನ್ ಯೋಜನೆಯಡಿಯಲ್ಲಿ ನಾಗರಿಕ ವಿಮಾನಯಾನ ಸೇವೆ ಆರಂಭಿಸಿದ್ದರಿಂದ ಇಲ್ಲಿನ ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ, ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳಿಗೆ, ಪ್ರವಾಸಿಗರಿಗೆ, ನಾಗರಿಕರಿಗೆ ತುಂಬಾ ಅನುಕೂಲವಾಗಿತ್ತು. ಆದರೆ ಈಗ ವಿಮಾನ ಯಾನ ಸೇವೆ ಸ್ಥಗಿತಗೊಂಡಿರುವುದರಿಂದ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ಚಿಕನ್ ಕಬಾಬ್, ಫಿಶ್ ಆಹಾರದಲ್ಲಿ ಕೃತಕ ಬಣ್ಣ ಬಳಕೆ ನಿಷೇಧ: ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

ಆದರೆ ಕಳೆದ 6 ತಿಂಗಳಿಂದ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಬಿಡುಗಡೆಯಾಗಿಲ್ಲ ಎಂಬ ಕಾರಣಕ್ಕೆ ನಾಗರಿಕ ವಿಮಾನಯಾನ ರದ್ದು ಮಾಡಲಾಗಿದ್ದು, ಈಗ ಬೀದರ್ ಜಿಲ್ಲೆಯ ಜನರು 4 ಗಂಟೆ ಪ್ರಯಾಣ ಮಾಡಿ ಹೈದ್ರಾಬಾದ್ ವಿಮಾನ ನಿಲ್ದಾಣಕ್ಕೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಈ ನಿಟ್ಟಿನಲ್ಲಿ ತಾವು ಈ ಹಿಂದೆ ವಿಮಾನಯಾನ ಸೇವೆ ನೀಡುತ್ತಿದ್ದ ಸ್ಟಾರ್ ಏರ್‌ನೊಂದಿಗೆ ಮಾತನಾಡಿ ಸಬ್ಸಿಡಿ ಕೊಟ್ಟರೆ, ನಾಗರಿಕ ವಿಮಾನಯಾನ ಸೇವೆ ಪುನಾರಂಭ ಮಾಡುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ ವಿಮಾನಯಾನ ಸಂಸ್ಥೆಗಳೊಂದಿಗೆ ಶೀಘ್ರ ಸಭೆ ಕರೆದು ವಿಮಾನ ಯಾನ ಸೇವೆ ಪುನರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸುವಂತೆ ಪತ್ರದಲ್ಲಿ ಸಚಿವ ಖಂಡ್ರೆ ತಿಳಿಸಿದ್ದಾರೆ.

click me!