ನಗರದ ಸಬ್ ಅರ್ಬನ್ ರೈಲು ಯೋಜನೆ 2028ಕ್ಕೆ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ಹಾಗೂ ಹೀಲಲಿಗೆಯಿಂದ ರಾಜಾನುಕುಂಟೆವರೆಗಿನ ಮಾರ್ಗಗಳನ್ನು 2026ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ವಿ.ಸೋಮಣ್ಣ ಹೇಳಿದ್ದಾರೆ.
ಬೆಂಗಳೂರು (ಸೆ.11): ನಗರದ ಸಬ್ ಅರ್ಬನ್ ರೈಲು ಯೋಜನೆ 2028ಕ್ಕೆ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ಹಾಗೂ ಹೀಲಲಿಗೆಯಿಂದ ರಾಜಾನುಕುಂಟೆವರೆಗಿನ ಮಾರ್ಗಗಳನ್ನು 2026ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಕೇಂದ್ರದ ರಾಜ್ಯಖಾತೆ ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಜತೆ ಸಬ್ ಅರ್ಬನ್, ಮೆಟ್ರೋ ಹಾಗೂ ವಿವಿಧ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸಬ್ ಅರ್ಬನ್ ರೈಲು ಯೋಜನೆಗೆ ನಾನು ರಾಜ್ಯ ಸರ್ಕಾರದಲ್ಲಿ ವಸತಿ, ಮೂಲಸೌಕರ್ಯ ಸಚಿವನಾಗಿದ್ದಾಗ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಂಕುಸ್ಥಾಪನೆಯಾಯಿತು. ಇದೀಗ ನಾನೇ ರಾಜ್ಯಖಾತೆ ರೈಲ್ವೆ ಸಚಿವನಾಗಿದ್ದೇನೆ. 2028ಕ್ಕೆ ಸಂಪೂರ್ಣ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು. ಬೆಂಗಳೂರಿನ ಜನರ ಜೀವನವನ್ನು ಸುಗಮಗೊಳಿಸುವುದು ಸಬ್ ಅರ್ಬನ್ ರೈಲು ಯೋಜನೆಯ ಉದ್ದೇಶ. ಒಟ್ಟು ₹15,767 ಕೋಟಿ ವೆಚ್ಚದ ಈ ಯೋಜನೆಯು 58 ನಿಲ್ದಾಣಗಳನ್ನು ಹೊಂದಿರಲಿದ್ದು, ಒಟ್ಟು 4 ಕಾರಿಡಾರ್‌ಗಳಲ್ಲಿ 148 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲಾಗುವುದು.
ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ: ಸಚಿವ ಕೆ.ವೆಂಕಟೇಶ್
ಮೊದಲ ಹಂತದಲ್ಲಿ ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರವರೆಗೆ 24.5 ಕಿ.ಮೀ. ಹಾಗೂ ರಾಜಾನುಕುಂಟೆಯಿಂದ ಹೀಲಲಿಗೆವರೆಗಿನ 46.50 ಕಿ.ಮೀ ಸೇರಿ 70 ಕಿ.ಮೀ. ಮಾರ್ಗವನ್ನು 2026ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಈ ಯೋಜನೆಗೆ ಕೇಂದ್ರ ಸರಕಾರದ ರೈಲ್ವೆ ಸಚಿವಾಲಯ ಮತ್ತು ರಾಜ್ಯ ಸರಕಾರಗಳು ತಲಾ ಶೇಕಡ 20ರಷ್ಟು ಹೂಡಿಕೆ ಮಾಡಲಿದ್ದು, ಸಾಲದ ರೂಪದಲ್ಲಿ ಶೇ.60ರಷ್ಟು ಸಂಪನ್ಮೂಲ ಕ್ರೋಡೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು. ಸಬ್ ಅರ್ಬನ್ ರೈಲು ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ₹750 ಕೋಟಿ ಅಗತ್ಯವಿದ್ದು ರಾಜ್ಯ ಸರ್ಕಾರದ ಪಾಲು ₹400 ಕೋಟಿ ಹಾಗೂ ಕೇಂದ್ರದಿಂದ ₹350 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ತುಮಕೂರು-ದಾವಣಗೆರೆ ರೈಲ್ವೆಗೆ ಶಂಕುಸ್ಥಾಪನೆ: ತುಮಕೂರು, ಚಿತ್ರದುರ್ಗ, ದಾವಣಗೆರೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕೇವಲ 190 ಎಕರೆ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ₹600 ಕೋಟಿ ವೆಚ್ಚದ ಯೋಜನೆಗೆ ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು. ಇನ್ನು ತುಮಕೂರು- ರಾಯದುರ್ಗ ರೈಲ್ವೆ ಕಾಮಗಾರಿಯೂ ವೇಗವಾಗಿ ನಡೆಯುತ್ತಿದ್ದು, 90 ಎಕರೆ ಭೂಸ್ವಾಧೀನ ಮಾತ್ರ ಬಾಕಿಯಿದೆ. ಆದಷ್ಟು ಬೇಗ ಎರಡೂ ಯೋಜನೆ ಪೂರ್ಣಗೊಳಿಸಲಾಗುವುದು. ಜತೆಗೆ ಹುಬ್ಬಳ್ಳಿ-ಧಾರವಾಡ ಯೋಜನೆಗೆ ಇರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಅದಕ್ಕೂ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಬಂದರುಗಳಿಗೆ ಸಂಪರ್ಕ ವ್ಯವಸ್ಥೆ ಇಲ್ಲದೆ ಕೈಗಾರಿಕೆಗಳಿಗೆ ಹೂಡಿಕೆ ಬರುತ್ತಿಲ್ಲ. ಹೀಗಾಗಿ ಬಂದರುಗಳಿಗೆ ಸೂಕ್ತ ರೈಲು ಹಾಗೂ ರಸ್ತೆ ವ್ಯವಸ್ಥೆ ಮಾಡಲು ಪ್ರಸ್ತಾವನೆ ನೀಡಿದ್ದೇವೆ. ಜತೆಗೆ ಬೆಂಗಳೂರು-ವಿಜಯಪುರ ರೈಲು ಮಾರ್ಗದಲ್ಲಿ ಹುಬ್ಬಳ್ಳಿ ಬೈಪಾಸ್ ಮಾಡಿ 4 ಗಂಟೆ ಪ್ರಯಾಣದ ಅವಧಿಯನ್ನ ಕಡಿಮೆ ಮಾಡಲು ಹಾಗೂ ಹೊಸ ವಂದೇ ಭಾರತ್ ರೈಲುಗಳನ್ನು ಒದಗಿಸುವಂತೆ ಕೋರಿದ್ದೇವೆ. ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡದಿದ್ರೆ ಕಾನೂನು ಹೋರಾಟ: ಸಚಿವ ಎಚ್.ಕೆ.ಪಾಟೀಲ್
15ಕ್ಕೆ ರಾಜ್ಯಕ್ಕೆ ಹೊಸ ವಂದೇ ಭಾರತ್ ರೈಲು: ಜಜ್‌ಶೆಡ್‌ಪುರದಲ್ಲಿ ಸೆ.15 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನರೇಂದ್ರ ಮೋದಿ ಅವರು ಹತ್ತು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಒಂದು ಕರ್ನಾಟಕ ರಾಜ್ಯಕ್ಕೆ ಲಭ್ಯವಾಗಲಿದೆ. ಸಚಿವ ಎಂ.ಬಿ. ಪಾಟೀಲ್ ಅವರ ವಿಜಯಪುರ ಜಿಲ್ಲೆಗೆ ಬಂದರೂ ಅಚ್ಚರಿ ಇಲ್ಲ ಎಂದು ಸಚಿವ ವಿ. ಸೋಮಣ್ಣ ಹೇಳಿದರು.