2023ರ ವಿಧಾನಸಭಾ ಚುನಾವಣಾ ಕಾವು ಏರುತ್ತಿದ್ದು ತೀವ್ರ ಹೋರಾಟ ನಡೆಯುವ ನಿರೀಕ್ಷೆಯನ್ನು ಈಗಾಗಲೇ ಹುಟ್ಟಿಸಿದೆ. ಜೆಡಿಎಸ್ ಈಗ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಕಾಂಗ್ರೆಸ್ ತುಮಕೂರು ಮತ್ತು ತುಮಕೂರು ಗ್ರಾಮಾಂತರ ಹೊರೆತುಪಡಿಸಿ ಮಿಕ್ಕೆಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇನ್ನು ಬಿಜೆಪಿ ಮಾತ್ರ ಯಾವೊಂದು ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಇನ್ನು ಮೂರ್ನಾಕು ದಿವಸದಲ್ಲಿ ಬಿಜೆಪಿ ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ.
ಉಗಮ ಶ್ರೀನಿವಾಸ್
ತುಮಕೂರು : 2023ರ ವಿಧಾನಸಭಾ ಚುನಾವಣಾ ಕಾವು ಏರುತ್ತಿದ್ದು ತೀವ್ರ ಹೋರಾಟ ನಡೆಯುವ ನಿರೀಕ್ಷೆಯನ್ನು ಈಗಾಗಲೇ ಹುಟ್ಟಿಸಿದೆ. ಜೆಡಿಎಸ್ ಈಗ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಕಾಂಗ್ರೆಸ್ ತುಮಕೂರು ಮತ್ತು ತುಮಕೂರು ಗ್ರಾಮಾಂತರ ಹೊರೆತುಪಡಿಸಿ ಮಿಕ್ಕೆಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇನ್ನು ಬಿಜೆಪಿ ಮಾತ್ರ ಯಾವೊಂದು ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಇನ್ನು ಮೂರ್ನಾಕು ದಿವಸದಲ್ಲಿ ಬಿಜೆಪಿ ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ.
ಕಳೆದ ಬಾರಿ ಬಿಜೆಪಿ 5, ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ 3 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದ ಜೆಡಿಎಸ್ ಕಳೆದ ಬಾರಿ 3 ಕ್ಷೇತ್ರಗಳಿಗೆ ತೃಪ್ತಿಪಡಬೇಕಾಗಿತ್ತು. ವಾಸ್ತವವಾಗಿ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದಿತ್ತು. ಆದರೆ ಶಿರಾ ಶಾಸಕ ಬಿ. ಸತ್ಯನಾರಾಯಣ ಅವರ ನಿಧನ ಬಳಿಕ ತೆರವಾದ ಕ್ಷೇತ್ರಕ್ಕೆ ಅವರ ಪತ್ನಿ ಸ್ಪರ್ಧಿ ಪರಾಭವಗೊಂಡರು. ಹೀಗಾಗಿ ನಾಲ್ಕು ಕ್ಷೇತ್ರದಲ್ಲಿ ಗೆದ್ದಿದ್ದು ಬಿಜೆಪಿ ಶಿರಾವನ್ನು ಗೆಲ್ಲುವ ಮೂಲಕ ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕಿಗೂ ಲಗ್ಗೆ ಇಟ್ಟಿತ್ತು.
ಎಲ್ಲೆಲ್ಲಿ ದುರ್ಬಲ:
ಮೂರು ಪಕ್ಷಗಳಿಗೂ ಕೆಲ ಕ್ಷೇತ್ರಗಳು ಮೇಲ್ನೋಟಕ್ಕೆ ದುರ್ಬಲವಾಗಿದೆ. ಕಾಂಗ್ರೆಸ್‌ಗೆ ತುಮಕೂರು ಗ್ರಾಮಾಂತರ, ಬಿಜೆಪಿಗೆ ಮಧುಗಿರಿ, ಪಾವಗಡ, ಜೆಡಿಎಸ್‌ಗೆ ತಿಪಟೂರು ಕ್ಷೇತ್ರಗಳಲ್ಲಿ ಕೊಂಚ ದುರ್ಬಲವಾಗಿದೆ. ಆದರೆ ಇಲ್ಲೆಲ್ಲ ಮೂರು ಪಕ್ಷಗಳು ತನ್ನ ಪ್ರಾಭಲ್ಯ ಮೆರೆಯಲು ಹೊಂಚು ಹಾಕುತ್ತಿವೆ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹೊಸದಾಗಿ ತುಮಕೂರು ಗ್ರಾಮಾಂತರ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು ಕೊರಟಗೆರೆ ಹಾಗೂ ಪಾವಗಡ ಮೀಸಲು ಕ್ಷೇತ್ರಗಳೂ ಸೇರಿದಂತೆ ಒಟ್ಟು 11 ಕ್ಷೇತ್ರಗಳನ್ನು ತುಮಕೂರು ಜಿಲ್ಲೆ ಹೊಂದಿದೆ.
ಘಟನಾಘಟಿಗಳೂ ಇದ್ದಾರೆ:
ಕೆಪಿಸಿಸಿ ಅಧ್ಯಕ್ಷರಾಗಿ, ಡಿಸಿಎಂ ಆಗಿ ಕಾರ್ಯನಿರ್ವಹಿಸಿರುವ ಡಾ. ಜಿ. ಪರಮೇಶ್ವರ್, ಜಿಲ್ಲಾ ರಾಜಕಾರಣದಲ್ಲಿ ಪ್ರಾಬಲ್ಯ ಹೊಂದಿರುವ ಜಯಚಂದ್ರ, ಕೆಎನ್‌ರಾಜಣ್ಣ ಮುಂತಾದ ಘಟಾನುಘಟಿ ರಾಜಕಾರಣಿಗಳು ಜಿಲ್ಲೆಯಿಂದ ಸ್ಪರ್ಧಿಸುತ್ತಿರುವುದು ವಿಶೇಷ.
ಎಲ್ಲಾ ಪಕ್ಷಗಳಿಗೂ ಸವಾಲಿದೆ:
ಈ ಹಿಂದೆ 9 ಕ್ಷೇತ್ರಗಳನ್ನು ಗೆದ್ದಿದ್ದ ಜೆಡಿಎಸ್ ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಪಣ ತೊಟ್ಟಿದೆ. ಹಾಗೆಯೇ ಕಾಂಗ್ರೆಸ್ ಕೂಡ ಕಳೆದ ಬಾರಿಗಿಂತ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕಳೆದ ಬಾರಿ 5 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ತನ್ನ ಬೇರುಗಳನ್ನು ಚಾಚಿದ್ದ ಬಿಜೆಪಿ ಈ ಬಾರಿ ಅಷ್ಟೆಕ್ಷೇತ್ರ ಅಥವಾ ಅದಕ್ಕಿಂತ ಹೆಚ್ಚು ಕ್ಷೇತ್ರವನ್ನು ಗೆಲ್ಲಬೇಕೆಂಬ ಹುಮ್ಮಸ್ಸಿನಲ್ಲಿದೆ.
ಈಗಾಗಲೇ ಪಕ್ಷಾಂತರಗಳು ನಡೆದಿವೆ. ಜೆಡಿಎಸ್‌ನಿಂದ ಶ್ರೀನಿವಾಸ್ ಹಾಗೂ ಬೆಮೆಲ್ ಕಾಂತರಾಜು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಇವರಿಬ್ಬರಿಗೂ ಗುಬ್ಬಿ ಹಾಗೂ ತುರುವೇಕೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದೆ. ಹಾಗೆಯೇ ಬಿಜೆಪಿ ಕಿರಣಕುಮಾರ್ ಅವರೂ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಅವರಿಗೂ ಕೂಡ ಚಿಕ್ಕನಾಯಕನಹಳ್ಳಿಯಲ್ಲಿ ಟಿಕೆಟ್ ನೀಡಿದೆ. ಹಾಗೆ ನೋಡಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಟಿಕೆಟ್ ವಂಚಿತರಿಂದ ಯಾವುದೇ ಬಂಡಾಯವಿಲ್ಲ. ಇನ್ನು ಬಿಜೆಪಿಯಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆಂಬ ಕುತೂಹಲ ಹೆಚ್ಚಿದ್ದು ಆ ಪಕ್ಷದವರೂ ಕೂಡ ಭಿನ್ನಮತಕ್ಕೆ ಆಸ್ಪದ ನೀಡದ ಹಾಗೆ ಟಿಕೆಟ್ ಹಂಚುವತ್ತ ಚಿತ್ತ ಹರಿಸಿದ್ದಾರೆ. ಈ ಮಧ್ಯೆ ಆಮ್ ಆದ್ಮಿ ಪಕ್ಷ ಕೂಡ 6 ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿದ್ದು ಉಳಿದ 5 ಕ್ಷೇತ್ರಗಳಿಗೂ ಟಿಕೆಟ್ ಹಂಚಲಿದೆ. ಒಟ್ಟಾರೆಯಾಗಿ ಇನ್ನು 10 ದಿವಸದಲ್ಲಿ ಚುನಾವಣಾ ನಾಮಪತ್ರ ಪ್ರಕ್ರಿಯೆ ಆರಂಭವಾಗಲಿದ್ದು ಚುನಾವಣಾ ಕಣ ಮತ್ತಷ್ಟುರಂಗೇರಲಿದೆ.