ಕೊರೋನಾ ಸೋಂಕಿತ ಯುವತಿಯನ್ನ ಕರೆದೊಯ್ಯಲು ಬಂದಾಗ ಘರ್ಷಣೆ| ತಾಂಡಾದ 17 ವರ್ಷದ ಯುವತಿಗೆ ಕೊರೋನಾ ಸೊಂಕು ದೃಢ| ಈ ವೇಳೆ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ತಾಂಡಾಕ್ಕೆ ತೆರಳಿದ್ದಾಗ ಕಲ್ಲು ತೂರಾಟ|
ಕಲಬುರಗಿ(ಜೂ.20): ಕಮಲಾಪುರ ತಾಲೂಕಿನ ಮರಮಂಚಿ ತಾಂಡಾದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿರುವ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೆ ಜಿಲ್ಲೆಯ ಸೇಡಂ ತಾಲೂಕಿನ ತಾಂಡಾದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಕಲ್ಲು ತೂರಿದ ಘಟನೆ ನಡೆದಿದೆ.
ಸೇಡಂ ತಾಲೂಕಿನ ಕೋಲಕುಂದಾ ದೊಡ್ಡ ತಾಂಡಾದಲ್ಲಿ ಕೊರೋನಾ ಸೋಂಕಿತ ಬಾಲಕಿಯನ್ನು ಕರೆತರಲು ತೆರಳಿದ್ದ ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಅಲ್ಲಿನ ನಿವಾಸಿಗಳು ಗುರುವಾರ ರಾತ್ರಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಲಬುರಗಿ: ಬಾಲಕಿ ಮೇಲೆ ಸ್ವಂತ ಮಾವನಿಂದ ರೇಪ್, ಕಾಮುಕ ಅರೆಸ್ಟ್
ಕಳೆದ ಕೆಲ ದಿನಗಳ ಹಿಂದೆ ತಾಂಡಾಕ್ಕೆ ಮಹಾರಾಷ್ಟ್ರದಿಂದ ದೊಡ್ಡ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಮರಳಿದ್ದರು. ಅವರನ್ನು 14ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ ಗಂಟಲ ದ್ರವ ಪಡೆದು ಮನೆಗೆ ಕಳುಹಿಸಿದ ನಂತರ ವರದಿಯಲ್ಲಿ ಸೋಂಕು ದೃಡಪಟ್ಟಕಾರಣ ಅವರೆನ್ನಲ್ಲ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು, ಇದೀಗ ಅವರ ಸಂಪರ್ಕದಲ್ಲಿ ಬಂದಿದ್ದ ಕೆಲ ಜನರ ವರದಿಯೂ ಪಾಸಿಟಿವ್ ಬಂದಿದ್ದರಿಂದ ಅವರನ್ನು ಕರೆತರಲು ಸಿಬ್ಬಂದಿ ಅಂಬುಲೆನ್ಸ್ ಸಮೇತ ತೆರಳಿದ್ದರು. ಆದರೆ, ಸೋಂಕಿತರನ್ನು ಕಳುಹಿಸಿಕೊಡುವ ಸಂಬಂಧ ಕೊರೋನಾ ವಾರಿಯರ್ಸ್ ಮತ್ತು ತಾಂಡಾ ನಿವಾಸಿಗಳ ಮದ್ಯೆ ಮಾತಿಗೆ ಮಾತು ಬೆಳೆದಿದೆ. ಆದಾದ ಕೆಲವೇ ನಿಮೀಷಗಳಲ್ಲಿ ತಾಂಡಾದಲ್ಲಿದ್ದ ಸುಮಾರು 50ಕ್ಕೂ ಅಧಿಕ ಜನ ಗುಂಪಾಗಿ ಬಂದು ಮುಧೋಳ ಠಾಣೆಯ ಎಎಸ್‌ಐ, ಸೆಕ್ಟ್ರಲ್ ಮ್ಯಾಜಿಸ್ಟ್ರೀಟ್, ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕಡಿಮೆ ಸಂಖ್ಯೆಯಲ್ಲಿದ್ದ ಅಧಿಕಾರಿಗಳು ಜೀವ ಭಯದಿಂದ ಓಡಿ ತಾಂಡಾದಿಂದ ಹೊರ ಬರಲು ಮುಂದಾದಗ ಬೆನ್ನಟ್ಟಿಬಡಿಗೆ, ಕಲ್ಲು ಇನ್ನಿತರ ವಸ್ತುಗಳಿಂದ ಹಲ್ಲೆ ಮಾಡಿದಲ್ಲದೆ, ಆ್ಯಂಬುಲೆನ್ಸ್ ಗ್ಲಾಸ್ ಪುಡಿ ಮಾಡಿದ್ದಾರೆ. ತಾಂಡಾದ ಪ್ರವೇಶದಲ್ಲಿ ಹಾಕಲಾಗಿದ್ದ ಟೆಂಟ್‌ನಲ್ಲಿನ ಖುರ್ಚಿ ಮುರಿದು ಉದ್ದಟತನ ಮೆರಿದ್ದಾರೆ. ಸುದ್ದಿ ಅರಿಯುತ್ತಲೆ ಸ್ಥಳಕ್ಕೆ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ರಾತ್ರಿಯೇ ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತರುವ ಪ್ರಯತ್ನ ಮಾಡಿದ್ದರು.
ಶುಕ್ರವಾರ ಬೆಳೆಗ್ಗೆ ಎಎಸ್ಪಿ ಪ್ರಸನ್ನ ದೇಸಾಯಿ, ತಹಸೀಲ್ದಾರ ಬಸವರಾಜ ಬೆಣ್ಣೆಶಿರೂರ, ತಾಲೂಕು ಆರೋಗ್ಯ ಅಧಿಕಾರಿ ಡಾ.ಸುರೇಶ ಮೇಕಿನ ತಾಂಡಕ್ಕೆ ತೆರಳಿ ಶಾಂತಿ ಸಭೆ ನಡೆಸಿದರು. ನಾವೆಲ್ಲ ನಿಮ್ಮ ಸೇವೆಗೆ ದುಡಿಯುತಿದ್ದೇವೆ. ನೀವೆ ಹಲ್ಲೆಗೆ ಮುಂದಾದರೆ ಹೇಗೆ ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಅಲ್ಲಿನ ಸೋಂಕಿತ ಬಾಲಕಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಕೆಲಸ ಮಾಡಲಾಯಿತು.
ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ ಎಂದು ಪಿಐ ಆನಂದರಾವ ತಿಳಿಸಿದ್ದಾರೆ. ಶಾಂತಿ ಸಭೆಯಲ್ಲಿ ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ್ ತೆಲ್ಕೂರ, ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ್ ಕೋಲಕುಂದಾ, ಡಾ.ದೀಪಕ ರಾಠೋಡ, ಡಾ. ಸಂಜಯ ಪಾಟೀಲ್, ರವಿ ರಾಠೋಡ ಸೇರಿದಂತೆ ಅನೇಕರಿದ್ದರು.