ಗದಗ: ಮುಕ್ತ ಗ್ರಾಮಗಳಲ್ಲಿ ಬಯಲು ಬಹಿರ್ದೆಸೆ ಜೀವಂತ..!

By Kannadaprabha NewsFirst Published Nov 1, 2021, 8:22 AM IST
Highlights

* ಗ್ರಾಪಂಗಳ ಘೋಷಣೆಯಲ್ಲಿ ಉಳಿಯಿತು ಸ್ವಚ್ಛ ಭಾರತ ಯೋಜನೆ
* ಬಯಲು ಬಹಿರ್ದೆಸೆಯಿಂದ ಹರಡುವ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ 
* ಬಹಿರ್ದೆಸೆ ಮುಕ್ತ ಎಂಬುದು ಮರೀಚಿಕೆ 
 

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ(ನ.01): ಕೇಂದ್ರ ಮತ್ತು ರಾಜ್ಯ ಸರ್ಕಾರದ(Government) ಮೆಚ್ಚುಗೆ ಪಡೆಯಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿಯನ್ನು ‘ಬಯಲು ಬಹಿರ್ದೆಸೆ ಮುಕ್ತ(Open Defecation Free)’ ಎಂದು ಘೋಷಿಸಿಕೊಳ್ಳುತ್ತಾರೆ. ಆದರೆ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಎಂಬುದು ಮರೀಚಿಕೆಯಾಗಿದೆ.

ಡಂಬಳ ಹೋಬಳಿಯ ಡಂಬಳ, ಹೊಸಡಂಬಳ, ಡ.ಸ. ನಾರಾಯಣಪುರ, ಡ.ಸಾ. ರಾಮೇನಹಳ್ಳಿ, ಹಿರೇವಡ್ಡಟ್ಟಿ, ಹಾರೋಗೆರಿ, ಕೆಲೂರ, ಮುರಡಿ, ಮಾರುತಿನಗರ, ಚಿಕ್ಕವಡ್ಡಟ್ಟಿ, ಗುಡ್ಡದಬೂದಿಹಾಳ, ಮೇವುಂಡಿ, ಬರದೂರ, ತಾಮ್ರಗುಂಡಿ, ಯಕ್ಲಾಸಪುರ, ಹೈತಾಪುರ, ವೆಂಕಟಾಪುರ, ಹಳ್ಳಿಕೇರಿ, ಹಳ್ಳಿಗುಡಿ, ಪೇಠಾಲೂರ, ಜಂತ್ಲಿ ಶಿರೂರ, ಚುರ್ಚಿಹಾಳ, ಕದಾಂಪುರ, ಶಿಂಗರಾಯನಕೇರಿ, ಶಿವಾಜಿ ನಗರ, ದಿಂಡೂರ ತಾಂಡೆ, ಡೋಣಿ ತಾಂಡೆ, ಅತಿಕಟ್ಟಿತಾಂಡಾ ಸೇರಿದಂತೆ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ(Villages) ಕೆಲ ಗ್ರಾಮ ಪಂಚಾಯಿತಿಗಳು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿಕೊಂಡಿವೆ.

ಸ್ವಚ್ಛ ಭಾರತ ಅಭಿಯಾನದ(Swachh Bharat Mission) ಅಡಿಯಲ್ಲಿ ಶೇ. 100ರಷ್ಟು ಕುಟುಂಬಸ್ಥರು ವೈಯಕ್ತಿಕ ಶೌಚಾಲಯ(Toilet) ನಿರ್ಮಿಸಿಕೊಂಡಿದ್ದು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಆದರೆ ಬೆಳಗಾದರೆ ಗ್ರಾಮಸ್ಥರು ತಂಬಿಗೆ ಹಿಡಿದು ಬಯಲು ಬಹಿರ್ದೆಸೆಗೆ ಹೋಗುವುದು ಸಾಮಾನ್ಯವಾಗಿದೆ.

ಗ್ರಾಮೀಣ ಭಾರತ ಬಯಲು ಶೌಚಮುಕ್ತ : ಪ್ರಧಾನಿ ಮೋದಿ

ಸರ್ಕಾರದ ಸಹಾಯಧನ

ಗ್ರಾಮೀಣ ಭಾಗದಲ್ಲಿ ಕುಟುಂಬದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ . 15 ಸಾವಿರ ಸಹಾಯಧನ(Subsidy) ನೀಡಿದರೆ, ಇತರ ವರ್ಗದ ಜನಾಂಗದವರಿಗೆ . 12 ಸಾವಿರ ಸಹಾಯ ನೀಡಲಾಗುತ್ತದೆ. ಸರ್ಕಾರದ ಆರ್ಥಿಕ ಸಹಾಯ(Financial Assistance) ಪಡೆದು ಕುಟುಂಬದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಮಾತ್ರ ಆಗುತ್ತಿಲ್ಲ.

ಜಾಗದ ಕೊರತೆ

ವಿವಿಧ ಗ್ರಾಮಗಳಲ್ಲಿರುವ ಕೆಲವು ಕುಂಟುಬಗಳು ಚಿಕ್ಕ ಚಿಕ್ಕ ಮನೆಗಳಲ್ಲಿ ವಾಸಿಸುತ್ತಿದ್ದು ಕುಟುಂಬದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಒಂದು ಮನೆಗೆ ಹೊಂದಿಕೊಂಡು ಮತ್ತೊಂದು ಮನೆ ಇದ್ದು, ಇಕ್ಕಟ್ಟಾದ ರಸ್ತೆಗಳು ಇರುವ ಹಿನ್ನೆಲೆಯಲ್ಲಿ ಶೌಚಾಲಯಗಳ ನಿರ್ಮಾಣ ತೊಂದರೆದಾಯಕವಾಗಿದೆ.

ಜನಜಾಗೃತಿ ಕೊರತೆ

ಹೋಬಳಿಯ ಬಹುತೇಕ ಗ್ರಾಮಗಳಲ್ಲಿರುವ ಕೆಲವರು ಶೌಚಾಲಯ ನಿರ್ಮಿಸಿಕೊಂಡರೂ ಮನೆಯ ಕೆಲಸಕ್ಕೆ ಬಾರದ ಸಾಮಾನುಗಳನ್ನು ಇಡುವ ಸ್ಥಳವಾಗಿವೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ತಮ್ಮ ತಮ್ಮ ಗ್ರಾಮಗಳಲ್ಲಿ ಜನ ಜಾಗೃತಿ(Awareness) ಆಂದೋಲನ ಹಮ್ಮಿಕೊಂಡರೂ ನಿರೀಕ್ಷಿತ ಫಲಿತಾಂಶ ಮಾತ್ರ ಹೇಳಿಕೊಳ್ಳುವಂತಿಲ್ಲ.

ಬಯಲು ಬಹಿರ್ದೆಸೆಯಿಂದ ಹರಡುವ ಗಂಭೀರ ಕಾಯಿಲೆಗಳ(Disease) ಬಗ್ಗೆ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮಹಿಳೆಯರ ಮಾನ ಕಾಪಾಡಲು ವೈಯಕ್ತಿಕ ಶೌಚಾಲಯ ಎಷ್ಟು ಮುಖ್ಯ ಎಂಬುದನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಹಳ್ಳಿಜನ ಬಹಿರ್ದೆಸೆಗಾಗಿ ತಿಪ್ಪಿ, ಬಯಲಿನಲ್ಲಿ ಗಿಡಗಂಟೆಗಳ ಆಶ್ರಯಿಸಬೇಕಾಗಿದೆ.

ಡಂಬಳದಿಂದ ಹಿರೇವಡ್ಡಟ್ಟಿಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಬರುವ ಪ್ರೌಢಶಾಲೆ, ಐಟಿಐ ಕಾಲೇಜಿನ ರಸ್ತೆಯಂಚಿಗೆ ಕಾಂಪೌಂಡ್‌ ಪಕ್ಕ ಇರುವ ಗಿಡಗಳ ಮಧ್ಯೆ ಮತ್ತು ಜಂತ್ಲಿ ಶಿರೂರ ಶಾಲಾ ಕಟ್ಟಡದ ಹಿಂದುಗಡೆ ಬಯಲು ಬಹಿರ್ದೆಸೆ ಮಾಡುವುದನ್ನು ನಿಲ್ಲಿಸಬೇಕು. ಈ ರಸ್ತೆಯ ಮಾರ್ಗವಾಗಿ ವಿದ್ಯಾರ್ಥಿಗಳು(Students) ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಇದೆ ಎಂದು ಡಂಬಳ ಗ್ರಾಮಸ್ಥರಾದ ಈರಣ್ಣ ಬಡಿಗೇರ, ವಿನಾಯಕ ಕಟ್ಟೇಣ್ಣವರ ತಿಳಿಸಿದ್ದಾರೆ. 

ಮೇವುಂಡಿ ಗ್ರಾಮ ಪಂಚಾಯಿತಿ ಈಗಾಗಲೇ ಬಯಲು ಬಹಿರ್ದೆಸೆ ಮುಕ್ತವಾಗಿದೆ. ಸ್ವಚ್ಛತೆ ಹಾಗೂ ಬಯಲು ಬಹಿರ್ದೆಸೆ ಕುರಿತಂತೆ ಗ್ರಾಮದಲ್ಲಿ ಸಾಕಷ್ಟುಬಾರಿ ಜಾಗೃತಿ ಮೂಡಿಸಲಾಗಿದೆ ಎಂದು ಮೇವುಂಡಿ ಪಿಡಿಒ ಸಂತೋಷ ಹೂಗಾರ ಹೇಳಿದ್ದಾರೆ. 

click me!