ಮೈಸೂರು ಝೂಗೆ 2.85 ಕೋಟಿ ರೂ. ದೇಣಿಗೆ ಸಂಗ್ರಹಿಸಿ ನೀಡಿದ ಸಚಿವ ಸೋಮಶೇಖರ್

By Kannadaprabha NewsFirst Published May 30, 2020, 12:16 PM IST
Highlights

25 ಲಕ್ಷದ 14,500 ರೂಪಾಯಿ ಚೆಕ್ ಅನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಶನಿವಾರ ಹಸ್ತಾಂತರ ಮಾಡಿದ್ದಾರೆ.

ಮೈಸೂರು(ಮೇ 30): 25 ಲಕ್ಷದ 14,500 ರೂಪಾಯಿ ಚೆಕ್ ಅನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಶನಿವಾರ ಹಸ್ತಾಂತರ ಮಾಡಿದ್ದಾರೆ.

ಈ ಮೂಲಕ ಒಟ್ಟಾರೆಯಾಗಿ 2.85 ಕೋಟಿ ರೂ. ದೇಣಿಗೆಯನ್ನು ಸಂಗ್ರಹಿಸಿ ನೀಡಿದಂತಾಗಿದೆ. ಕಳೆದ ಬಾರಿ 2.38 ಕೋಟಿ ರೂಪಾಯಿ ಚೆಕ್ ಹಸ್ತಾಂತರಿಸಲಾಗಿತ್ತು. ಇದಲ್ಲದೆ ಸಚಿವ ಎಸ್ ಟಿ ಎಸ್ ಮನವಿ ಮೇರೆಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ 22 ಲಕ್ಷ ರೂಪಾಯಿ ಚೆಕ್ ಅನ್ನು ಮೃಗಾಲಯಕ್ಕೆ ಹಸ್ತಾಂತರಿಸಲಾಗಿದೆ.

ಪ್ರಧಾನಿಯ ಸ್ವಾವಲಂಬಿ ಭಾರತದ ಕನಸೇ ನನ್ನ ಕನಸು: ಸಂಸದ ಬಿ ವೈ ರಾಘವೇಂದ್ರ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮೃಗಾಲಯವನ್ನು ಪ್ರಾರಂಭಿಸಲು ನಾನು ಈಗಾಗಲೇ ಜಿಲ್ಲಾಧಿಕಾರಿ ಸೇರಿದಂತೆ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಸರ್ಕಾರದ ಜೊತೆಯೂ ಚರ್ಚೆ ಮಾಡಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಆದೇಶ ಹೊರಬೀಳಲಿದೆ. ಅರಣ್ಯ ಸಚಿವರೂ ಸಹ ಪರವಾಗಿದ್ದಾರೆ. ಒಮ್ಮೆ ಆದೇಶ ಬಂದ ಮೇಲೆ ಇಲ್ಲಿ ಶಾಸಕರಾದ ರಾಮದಾಸ್ ಸೇರಿದಂತೆ ಹಲವು ಪ್ರಮುಖರು ಈ ಬಗ್ಗೆ ಮತ್ತೊಮ್ಮೆ ಕುಳಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಿದ್ದೇವೆ ಎಂದು ಹೇಳಿದರು.

ಅಕ್ಕದಿಂದ 27 ಲಕ್ಷ ರೂ.

ಅಕ್ಕ ಸಂಸ್ಥೆಯಿಂದ 27 ಲಕ್ಷ ರೂ. ಸಂಗ್ರಹವಾಗಿದೆ. ಅವರೊಂದಿಗೆ ಇಂದು ರಾತ್ರಿ 8 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದೇನೆ. ಅಲ್ಲಿಂದ ವ್ಯವಸ್ಥೆ ಮಾಡಿದ್ದಾಗಿ ಹೇಳಿದ್ದಾರೆ. ನನ್ನಿಂದಾಗುವ ಅಳಿಲು ಸೇವೆಯನ್ನು ಮಾಡುತ್ತಿದ್ದೇನೆ ವಂದು ಸಚಿವರು ತಿಳಿಸಿದರು. 

ಕೇಂದ್ರದ ನಿರ್ಧಾರ ಬಳಿಕ ತೀರ್ಮಾನ

ಈಗಾಗಲೇ ಮೇ 31ರ ಬಳಿಕ ಕೇಂದ್ರ ಸರ್ಕಾರ ಲಾಕ್ ಡೌನ್ ಸಡಿಲ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಆ ಬಳಿಕ ದೇವಸ್ಥಾನ , ಪ್ರವಾಸಿ ತಾಣಗಳನ್ನು ಸಾರ್ವಜನಿಕರಿಗೆ ಮುಕ್ತ ಮಾಡುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿಗಳಿಂದಲೇ ಪರಿಷತ್ ಸದಸ್ಯರ ಆಯ್ಕೆ

ಪರಿಷತ್ತಿಗೆ 5ಕ್ಕೆ ಚುನಾವಣೆ ನಡೆಯಲಿದೆ. ಒಟ್ಟು 16 ಸ್ಥಾನಗಳು ಖಾಲಿ ಇದ್ದು, ನಮ್ಮ ಪಕ್ಷಕ್ಕೆ 9 ಸ್ಥಾನಗಳು ಬರಲಿದ್ದು, ಆ ಸ್ಥಾನಗಳ ಆಯ್ಕೆ ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಸಚಿವ ಸಂಪುಟ ಸದಸ್ಯರು ನಿರ್ಧರಿಸಿ ಅವರ ವಿವೇಚನೆ, ನಿರ್ಧಾರಕ್ಕೆ ಬಿಟ್ಟಿದ್ದೇವೆ ಎಂದು ಸಚಿವರು ಹೇಳಿದರು. 

ನಮ್ಮವರ ಬೆನ್ನಿಗಿದ್ದೇವೆ

ಶಾಸಕರಾದ ಪ್ರತಾಪ್ ಗೌಡ, ಮುನಿರತ್ನ ಅವರ ಉಪ ಚುನಾವಣೆಗೆ ಇದ್ದ ಅಡ್ಡಿ ದೂರವಾಗಿದೆ ಎಂದು ತಿಳಿಸಿದ ಸಚಿವರು, ಇನ್ನು ಮುಖಂಡರಾದ ಎಚ್. ವಿಶ್ವನಾಥ್, ಶಂಕರ್ ಹಾಗೂ ಎಂಟಿಬಿ ನಾಗರಾಜ್ ಅವರ ಪರವಾಗಿ ನಾವೆಲ್ಲರೂ ಇದ್ದೇವೆ. ಇವರಿಗೆ ವಿಧಾನಪರಿಷತ್ ನಲ್ಲಿ ಸ್ಥಾನ ನೀಡುವಂತೆ ನಾವು ಮುಖ್ಯಮಂತ್ರಿಗಳ ಬಳಿ ಕೋರುತ್ತಲೇ ಬಂದಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಪಕ್ಷ ಸುಭದ್ರ 

ನಮ್ಮ ಪಕ್ಷಕ್ಕೆ ಬಹುಮತ ಇದೆ. ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿಗಳು. ಬಿಜೆಪಿ ಬಹುಮತ ಹೊಂದಿದ್ದು, ಸುಭದ್ರವಾಗಿದೆ. ಈ ಸಂದರ್ಭದಲ್ಲಿ ಬೇರೆ ಪಕ್ಷದಿಂದ ಕರೆತರುವ ಅವಶ್ಯಕತೆ ಸದ್ಯಕ್ಕೆ ಕಾಣುತ್ತಿಲ್ಲ. ಎಲ್ಲದಕ್ಕಿಂತಲೂ ಮಿಗಿಲಾಗಿ ಈ ಬಗ್ಗೆ ಪಕ್ಷದ ಹೈಕಮಾಂಡ್ ಹಾಗೂ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.

click me!