
ರಿಪ್ಪನ್‍ಪೇಟೆ: ಈಜಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ಮದೀನಾ ಕಾಲೋನಿಯ ನಿವಾಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಹಮ್ಮದ್ ತಮಿಮ್ (16) ಕೃಷಿ ಹೊಂಡದಲ್ಲಿ ಈಜು ಹೊಡೆಯಲು ಹೋಗಿ ನೀರು ಪಾಲಾಗಿರುವುದಾಗಿ ಹೇಳಲಾಗಿದೆ.
ಹೊಸನಗರ ತಾಲೂಕಿನ ಬರುವೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಚೌಡೇಶ್ವರಿ ಬೀದಿಯಲ್ಲಿ ಟ್ಯೂಷನ್‌ಗೆ ತೆರಳಿದ್ದ ಆತ, ಬಳಿಕ ಸ್ನೇಹಿತರೊಂದಿಗೆ ಬರುವೆ ಗ್ರಾಮದ ದಿಬ್ಬದತ್ತ ತೆರಳಿದ್ದಾನೆ. ಈ ವೇಳೆ ಗದ್ದೆಯೊಳಗಿನ ಕೆರೆಯ ಮೇಲೆ ನಡೆಯುತ್ತಿದ್ದಾಗ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ ಎಂದೂ ಹೇಳಲಾಗುತ್ತಿದೆ. ನಂತರ ಸ್ಥಳೀಯರು ಯುವಕನನ್ನು ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ದಾಖಲಿಸಿದ್ದಾರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಧೃಡಪಡಿಸಿದ್ದಾರೆ. ಮೃತ ವಿದ್ಯಾರ್ಥಿ ಪಟ್ಟಣದ ರಾಮಕೃಷ್ಣ ವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದು, ಮೂರು ಪಬ್ಲಿಕ್ ಪರೀಕ್ಷೆಗಳನ್ನು ಬರೆದಿದ್ದ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನ್ವಿ: ಪಕ್ಕದ ಆಂಧ್ರಪ್ರದೇಶದ ಗಡಿ ಭಾಗವಾದ ಕೊಸಗಿ ಮಂಡಲ ವ್ಯಾಪ್ತಿಯ ಕಂದಕೂರ ಗ್ರಾಮದಲ್ಲಿರುವ ರಾಜಲಾಬಂಡ ಅಣೆಕಟ್ಟಿನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ತುಂಗಾಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈಜಾಡಲು ಹೋದ 20 ಜನರ ಪೈಕಿ 4 ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತದುರ್ದೈವಿಗಳು ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದವರಾಗಿದ್ದು, ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಕೊಸಗಿಗೆ ಹೋಗಿದ್ದರು. ನದಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕೆರೆಗಳನ್ನ ತುಂಬಲು ತುಂಗಭದ್ರ ನದಿಗೆ ಹೆಚ್ಚಿನ ನೀರು ಹರಿಯುತ್ತಿದೆ. ಈಜಾಡಲು ಇಳಿದಿದ್ದ ಇಪ್ಪತ್ತು ಜನರಲ್ಲಿ ನಾಲ್ವರು ಒಂದೇ ಕುಟುಂಬದವರು ಈ ದುರ್ಘಟನೆಯಲ್ಲಿ ಸಾವನಪ್ಪಿದ್ದಾರೆ.
ಮಾನ್ವಿ ತಾಲೂಕಿನ ಕರ್ಡಿ ಗ್ರಾಮದ ಉಮಾವತಿ ಗೋವಿಂದ (35) ರತ್ನ ಮಹಾಂತೇಶ್ (28) ಮಹಾಂತೇಶ್ ಪೀತಾಂಬರ್ (24) ಸುಂಕೇಶ್ವರ ಗ್ರಾಮದ ಶಿವಾನಂದ ಹನುಮಂತರಾಯ (24) ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಕೊಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.