ಕೊರೋನಾ ಭೀತಿಯ ನಡುವೆಯೇ ಶಿವಮೊಗ್ಗದಲ್ಲಿ SSLC ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 22867 ವಿದ್ಯಾರ್ಥಿಗಳು ಪರೀಕ್ಷೆಗಾಗಿ ಹೆಸರು ನೊಂದಾಯಿಸಿದ್ದರು. ಇದರಲ್ಲಿ ಕೆಲವರು ಹೊರ ಜಿಲ್ಲೆಗಳ ಸೆಂಟರ್‌ಗಳಲ್ಲಿ ಬರೆದಿದ್ದು, ಒಟ್ಟು 680 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.04): ಜಿಲ್ಲೆಯಾದ್ಯಂತ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ. ಆದರೆ ಕೊರೋನಾ ಕಾರಣದಿಂದ ಆರು ವಿದ್ಯಾರ್ಥಿಗಳು ಪರೀಕ್ಷೆ ಪೂರ್ಣ ಎದುರಿಸಲು ಸಾಧ್ಯವಾಗಿಲ್ಲ.
ಪರೀಕ್ಷೆ ಆರಂಭಕ್ಕೆ ಮೊದಲೇ ಇಬ್ಬರು ವಿದ್ಯಾರ್ಥಿಗಳ ಪೋಷಕರು ಕ್ವಾರಂಟೈನ್‌ನಲ್ಲಿ ಇದ್ದ ಕಾರಣ ಆ ಮಕ್ಕಳಿಗೆ ಮುಂದಿನ ಬಾರಿ ಪರೀಕ್ಷೆ ತೆಗೆದುಕೊಳ್ಳುವಂತೆ ಮನವೊಲಿಸಲಾಗಿತ್ತು. ಹೀಗಾಗಿ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲೇ ಇಲ್ಲ.
ಭದ್ರಾವತಿಯಲ್ಲಿ ಇಬ್ಬರು ತಾಯಂದಿರಿಗೆ ಕೊರೋನಾ ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಇವರ ಮಕ್ಕಳು ಗುರುವಾರ ಮತ್ತು ಶುಕ್ರವಾರ ಪರೀಕ್ಷೆ ಬರೆದಿಲ್ಲ. ಆನವಟ್ಟಿಯಲ್ಲಿ ತಾಯಿಯೊಬ್ಬರಿಗೆ ಕೊರೋನಾ ಕಾಣಿಸಿದ್ದು,ಇವರ ಇಬ್ಬರು ಅವಳಿ ಮಕ್ಕಳು ಕೊನೆ ಮೂರು ಪೇಪರ್ ಬರೆದಿಲ್ಲ.
ಬತ್ತದ ಉತ್ಸಾಹ: ಮೊಮ್ಮಕ್ಕಳ ವಯಸ್ಸಿನ ವಿದ್ಯಾರ್ಥಿಗಳ ಜತೆ SSLC ಪರೀಕ್ಷೆ ಬರೆದ ಪೊಲೀಸ್
ಒಟ್ಟು 22867 ವಿದ್ಯಾರ್ಥಿಗಳು ಪರೀಕ್ಷೆಗಾಗಿ ಹೆಸರು ನೊಂದಾಯಿಸಿದ್ದರು. ಇದರಲ್ಲಿ ಕೆಲವರು ಹೊರ ಜಿಲ್ಲೆಗಳ ಸೆಂಟರ್‌ಗಳಲ್ಲಿ ಬರೆದಿದ್ದು, ಒಟ್ಟು 680 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಹಾಜರಾದ ವಿದ್ಯಾರ್ಥಿಗಳ ಪೈಕಿ ಕಂಟೈನ್ಮೆಂಟ್ ಪ್ರದೇಶದ 136 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಕೊರೋನಾ ವೈರಸ್ ಅಲ್ಲದೆ ಬೇರೆ ಕಾರಣದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ 27 ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆದರು.
ಇಡೀ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಎದುರಾಗದೆ ಎಲ್ಲವೂ ಸುಸೂತ್ರವಾಗಿ ನಡೆದಿದೆ. ವಿದ್ಯಾರ್ಥಿಗಳು ಹೆಚ್ಚು ಆತಂಕಕ್ಕೆ ಒಳಗಾಗದೆ ಪರೀಕ್ಷೆಯನ್ನು ಬರೆದಿದ್ದಾರೆ. ಕೊರೋನಾ ಕಾರಣದಿಂದ ಅನಿವಾರ್ಯವಾಗಿ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಮುಂದಿನ ಸೆಪ್ಲಿಮೆಂಟರಿ ಪರೀಕ್ಷೆಯಲ್ಲಿ ಫ್ರೆಶ್ ಕ್ಯಾಂಡಿಡೇಟ್ ಎಂದೇ ಪರಿಗಣಿಸಿ ಪರೀಕ್ಷೆ ಬರೆಸಲಾಗುವುದು. -ರಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು