
ಬೆಳಗಾವಿ (ಮಾ.29): ಮೂಡಲಗಿ ಪಟ್ಟಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಂಭೀರ ಎಡವಟ್ಟು ನಡೆದಿರುವುದು ಬೆಳಕಿಗೆ ಬಂದಿದೆ.
ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನಿಯಮ ಉಲ್ಲಂಘಿಸಿ ಬೈಕ್ ಮೇಲೆ ಸಾಗಿಸಿದ ಘಟನೆ ನಡೆದಿದೆ. ಉಮಾಬಾಯಿ ಪ್ರೌಢಶಾಲೆಯಿಂದ ಬಿಇಒ ಕಚೇರಿಗೆ ಉತ್ತರ ಪತ್ರಿಕೆಗಳನ್ನು ಯಾವುದೇ ಭದ್ರತೆ ಇಲ್ಲದೆ ಕೊಂಡೊಯ್ಯಲಾಗಿದೆ. ಪರೀಕ್ಷಾ ನಿಯಮಗಳ ಪ್ರಕಾರ, ಉತ್ತರ ಪತ್ರಿಕೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ವಿಶೇಷ ವಾಹನದಲ್ಲಿ ಸಾಗಿಸಬೇಕು. ಆದರೆ, ಈ ನಿಯಮವನ್ನು ಸಂಪೂರ್ಣವಾಗಿ ಲೆಕ್ಕಿಸದೆ, ಸಿಬ್ಬಂದಿ ಬೈಕ್ ಮೇಲೆ ಪತ್ರಿಕೆಗಳನ್ನು ಸಾಗಿಸಿರುವುದು ಸಂಶಯಕ್ಕೆ ಕಾರಣವಾಗಿದೆ.
ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸಿದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.