
ಗದಗ (ಜ.27): ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಪ್ರವಾಸಿ ತಾಣವಾದ ಲಕ್ಕುಂಡಿಯಲ್ಲಿ ಪ್ರತಿ ವರ್ಷ ತಪ್ಪದೇ 'ಲಕ್ಕುಂಡಿ ಉತ್ಸವ'ವನ್ನು ಆಚರಿಸಬೇಕು ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಲಕ್ಕುಂಡಿ ಉತ್ಖನನ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭಾಗದ ಕಲೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಉಳಿಸಲು ಉತ್ಸವದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಅವಿಭಜಿತ ಧಾರವಾಡ ಜಿಲ್ಲೆಯಾಗಿದ್ದ ಕಾಲದಲ್ಲೇ ಲಕ್ಕುಂಡಿ ಉತ್ಸವ ನಡೆಯಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಧಾರವಾಡ ಉತ್ಸವಕ್ಕೆ ಆದ್ಯತೆ ನೀಡಲಾಗಿತ್ತು. ಆ ಸಮಯದಲ್ಲಿ ಸ್ಥಳೀಯರ ವಿರೋಧದ ನಂತರ ಲಕ್ಕುಂಡಿಯಲ್ಲಿ ಉತ್ಸವ ಆರಂಭಿಸಲಾಯಿತು ಎಂದು ಇತಿಹಾಸವನ್ನು ಸ್ಮರಿಸಿದರು. 'ಈ ಹಿಂದೆ ಕೇಂದ್ರ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಅವರನ್ನು ಲಕ್ಕುಂಡಿಗೆ ಕರೆತಂದಿದ್ದೆ. ಅವರ ಮೂಲಕ ರಸ್ತೆ ಸುಧಾರಣೆಗೆ ಅನುದಾನ ತಂದು ಅಭಿವೃದ್ಧಿ ಮಾಡಿಸಲಾಗಿತ್ತು. ಆದರೆ ಇಂದು ಆ ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕುವ ಗತಿ ಇಲ್ಲದಂತಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, "ಮೋದಿ ಇರಲಿ ಅಥವಾ ಯಾರೇ ಇರಲಿ, ಗ್ಯಾರಂಟಿಗಳು ಯಾರಿಗೂ ಇಷ್ಟವಿಲ್ಲ. ಆದರೆ ಇಂದು ಇದೊಂದು ದಂಧೆಯಾಗಿ ಮಾರ್ಪಟ್ಟಿದೆ. ವೋಟಿಗಾಗಿ ಏನನ್ನಾದರೂ ಮಾಡಲು ಸಿದ್ಧವಿರುವ ಪರಿಸ್ಥಿತಿ ಬಂದಿದೆ' ಎಂದರು. ಅಲ್ಲದೆ, 'ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯರು ಸಂಭ್ರಮಿಸುವ ಬದಲು, ಆ ಹಣವನ್ನು ಗಂಡಸರು ಕುಡಿತಕ್ಕೆ ಬಳಸುತ್ತಿದ್ದಾರೆ. ಇದರಿಂದ ಮಹಿಳೆಯರು ಮತ್ತಷ್ಟು ಬೇಸತ್ತಿದ್ದಾರೆ" ಎಂದು ಟೀಕಿಸಿದರು.
ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದ ಎಸ್.ಎಸ್. ಪಾಟೀಲರು, ಸರ್ಕಾರಕ್ಕೆ ರೈತರ ಹಿತ ಕಾಯುವ ಚಿಂತನೆ ಇಲ್ಲ. ರೈತರು ಬೆಳೆದ ಮಾಲನ್ನು ಖರೀದಿಸಿದ ಮೂರು ತಿಂಗಳ ನಂತರ ಹಣ ನೀಡಲಾಗುತ್ತಿದೆ. ರಾಜ್ಯದ ಖಜಾನೆ ಖಾಲಿಯಾಗುತ್ತಿದ್ದು, ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗುತ್ತಿದೆ ಎಂದು ಎಚ್ಚರಿಸಿದರು. ಹಿಂದಿನ ಘಟನೆಯೊಂದನ್ನು ನೆನಪಿಸಿಕೊಂಡ ಅವರು, 'ಹಿಂದೆ ಸಿದ್ದರಾಮಯ್ಯ ಅವರು ಆರ್ಥಿಕ ಶಿಸ್ತಿಗೆ ಹೆಸರಾಗಿದ್ದರು. ಧಾರವಾಡದಲ್ಲಿ ಎಸಿ ಹಚ್ಚಿದ್ದ ಅಧಿಕಾರಿಯನ್ನು ಗದರಿ, ಆ ಹಣವನ್ನು ಅವರ ವೇತನದಲ್ಲೇ ಕಟ್ ಮಾಡುವುದಾಗಿ ಹೇಳಿದ್ದರು. ಆದರೆ ಇಂದು ಅಂತಹ ಶಿಸ್ತು ಮಾಯವಾಗಿದೆ. ಖಜಾನೆ ಭದ್ರವಾಗಿದ್ದರೆ ಮೊದಲು ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಿ' ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಯುವತಿಯರಿಗೆ ಮತ್ತು ಮಹಿಳೆಯರಿಗೆ ಅಗತ್ಯ ಸೌಲಭ್ಯ ನೀಡುವ ವಿಚಾರದಲ್ಲಿ ಉದಾರತೆ ತೋರಬೇಕು. ಗ್ಯಾರಂಟಿಗಳಿಂದಾಗಿ ಹೊಸ ನೌಕರಿಗಳಿಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಐತಿಹಾಸಿಕ ಉತ್ಸವಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅವರು ಆಗ್ರಹಿಸಿದರು.