ಯಶವಂತಪುರದಲ್ಲಿ ಸಾಂಕ್ರಾಮಿಕ ರೋಗದ ಭೀತಿ; ಕೊಳಚೆ ನೀರಿನಿಂದ ಬೇಕು ಮುಕ್ತಿ

Suvarna News   | Asianet News
Published : Dec 25, 2019, 02:36 PM ISTUpdated : Dec 25, 2019, 03:48 PM IST
ಯಶವಂತಪುರದಲ್ಲಿ ಸಾಂಕ್ರಾಮಿಕ ರೋಗದ ಭೀತಿ; ಕೊಳಚೆ ನೀರಿನಿಂದ ಬೇಕು ಮುಕ್ತಿ

ಸಾರಾಂಶ

ಕಳೆದ ಕೆಲವು ವರ್ಷಗಳಿಂದ ಒಡೆದ ಒಳಚರಂಡಿ| ಕೊಳಚೆ ನೀರಿನಿಂದ ಹೈರಾಣಾದ ಜನತೆ| ಶಾಸಕ ಸೇರಿದಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರ ಆರೋಪ| ಕೊಟ್ಟ ಭರವಸೆ ಇಂದಿಗೂ ಈಡೇರಿಸಿದ ಶಾಸಕ ಎಸ್ ಟಿ ಸೋಮಶೇಖರ|

ಬೆಂಗಳೂರು[ಡಿ.25]: ಯಶವಂತಪುರದಲ್ಲಿ ಕಳೆದ ಕೆಲವು ವರ್ಷಗಳಿಂದ ಒಳಚರಂಡಿಯ ಗಲೀಜು ನೀರು ಸ್ಥಳೀಯರ ಬದುಕನ್ನು ನರಕವಾಗಿಸಿದೆ. ಇಲ್ಲಿಯ ಬೈರೇಗೌಡ ಲೇಔಟ್‌ನ ಕೊಳಚೆ ನೀರಿನ ಸಮಸ್ಯೆಗೆ ಯಾರೂ ಸ್ಪಂದಿಸುವವರೇ ಇಲ್ಲ. ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಸ್ಥಳೀಯರ ಆಕ್ರೊಶಕ್ಕೆ ಕಾರಣವಾಗಿದೆ.    

ಮುದ್ದೇಪಾಳ್ಯದ ಪಾರ್ವತಮ್ಮ ರಾಮಯ್ಯ ಕಲ್ಯಾಣ ಮಂಟಪದ ಬಳಿ ಕಳೆದ 2-3 ವರ್ಷಗಳಿಂದ ಒಳಚರಂಡಿ ಒಡೆದು ಹಾಳಾಗಿದೆ. ಇದರಿಂದ ಹೊರಬರುತ್ತಿರುವ ಗಲೀಜು ನೀರಿನಿಂದ ಇಲ್ಲಿನ ನಿವಾಸಿಗಳು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಸ್ಥಳದಲ್ಲಿ ಸಾರ್ವಜನಿಕರು ಓಡಾಡುವಾಗ ಮೂಗು ಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸುವರ್ಣ ನ್ಯೂಸ್. ಕಾಂ ಜೊತೆ ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೀಗೆ ಒಳಚರಂಡಿ ನೀರು ಹೊರಗೆ ಬರುತ್ತಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಕೂಡ ಎದುರಾಗಿದೆ.

ಒಡೆದ ಒಳಚರಂಡಿ ಹಾಗೂ ಹತ್ತಿರದಲ್ಲಿರುವ ಮಲ್ಲತಹಳ್ಳಿ ಕೆರೆಯಿಂದ ಬರುತ್ತಿರುವ ಗಬ್ಬು ವಾಸನೆಯಿಂದ ಜನತೆಗೆ ಕಿರಿ ಕಿರಿ ಆಗುತ್ತಿದೆ. ಒಂದು ಕಡೆ ಗಲೀಜು ನೀರಿನಿಂದ ಆ ಪ್ರದೇಶ ಅಕ್ಷರಶಃ ತಿಪ್ಪೆಯಾದಂತಾಗಿದೆ. ಒಳಚರಂಡಿ ನೀರನ್ನು ನೇರವಾಗಿ ಮಲ್ಲತಹಳ್ಳಿ ಕೆರೆಗೆ ಬಿಡಲಾಗುತ್ತಿದೆ. ಇದರಿಂದ ಇಲ್ಲಿನ ಜನರ ನೀರಿನ ದಾಹ ನೀಗಿಸಬೇಕಿದ್ದ ಈ ಕೆರೆ ಇದೀಗ ರೋಗಗಳನ್ನು ತರುವ ರೋಗಗ್ರಸ್ತ ಕೆರೆಯಾಗಿ ಮಾರ್ಪಟ್ಟಿದೆ.

ಈ ಸಂಬಂಧ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಟಿ. ಸೋಮಶೇಖರ್ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಹಿಂದೆ ಶಾಸಕ ಸೋಮಶೇಖರ್ ಅವರಿಗೆ ಮನವಿ ಮಾಡಿದಾಗ ಈ ಬಗ್ಗೆ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಕೊಟ್ಟ ಭರವಸೆಯನ್ನು ಇಂದಿಗೂ ಈಡೇರಿಸಿಲ್ಲ ಎಂದು ಸ್ಥಳೀಯರ ಅಳಲು.

ಇನ್ನು ಮುದ್ದೆಪಾಳ್ಯದ ಕಾರ್ಪೋರೇಟರ್ ರಾಜಣ್ಣ ಅವರಿಗೂ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಮಲ್ಲತಹಳ್ಳಿ ಕೆರೆ ಅಭಿವೃದ್ಧಿಗೆ ಸರ್ಕಾರದಿಂದ ಕೋಟಿಗಟ್ಟಲೇ ಹಣ ಬಿಡುಗಡೆಯಾಗಿದೆ. ಅದರೆ, ಇಲ್ಲಿಯವರೆಗೆ ಕೆರೆ ಅಭಿವೃದ್ಧಿ ಮಾತ್ರ ಆಗಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!