ದಿವ್ಯಾಂಗ ವ್ಯಕ್ತಿಯ ಕೃಷಿ ಕಾಯಕಕ್ಕೆ ಬೆಕ್ಕಸ ಬೆರಗಾದ ಕಲಬುರಗಿ ಮಂದಿ..!

By Girish Goudar  |  First Published Nov 20, 2022, 9:30 PM IST

ಶಿವಪ್ಪ ಜಮಾದಾರ್‌ಗೆ ಬಾಲ್ಯದಿಂದಲೇ ಪೋಲಿಯೋದಿಂದ ಎರಡೂ ಕಾಲುಗಳ ಸ್ವಾಧೀನ ಇಲ್ಲ. ಕಾಲಿಲ್ಲದಿದ್ದರೂ ಇವರು ಕೃಷಿ ಕಾಯಕದಲ್ಲಿ ಛಲದಂಕ ಮಲ್ಲ. ತನ್ನ ಒಂದು ಎಕರೆ ತೋಟದಲ್ಲಿ ಬಗೆ ಬಗೆಯ ತರಕಾರಿಗಳನ್ನು ಬೆಳೆದು ಕೈ ತುಂಬಾ ಸಂಪಾದಿಸಿ ಜೀವನ ನಿರ್ವಹಿಸುತ್ತಿದ್ದಾರೆ. 


ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ

ಕಲಬುರಗಿ(ನ.20):  ಛಲವೊಂದಿದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು. ಇದಕ್ಕೆ ಜೀವಂತ ಸಾಕ್ಷಿ ಈ ವಿಶೇಷ ಚೇತನ ರೈತ. ಹೌದು! ಕಾಲಿಲ್ಲದಿದ್ದರೂ ಛಲದಿಂದ ಹೊಲದಲ್ಲಿ ದುಡಿದು ಫಲ ಪಡೆಯುತ್ತಿರುವ ಕೃಷಿಕನ ಸಾಹಸಗಾಥೆ ಇಲ್ಲಿದೆ ಓದಿ. 

Tap to resize

Latest Videos

ಗುಳೆ ಹೋಗುವವರ ಮಧ್ಯೆ ಅಪರೂಪದ ಕೃಷಿಕ

ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೊಲದ ಉಸಾಬರಿಯೇ ಬೇಡ ಎಂದು ಪಟ್ಟಣ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಹಳ್ಳಿಯಲ್ಲಿ ಸ್ವಂತ ಹೊಲ ಇದ್ದರೂ ಅದನ್ನು ಪಾಳು ಬಿಟ್ಟು ಮೆಟ್ರೋ ಸಿಟಿಗಳತ್ತ ಗುಳೆ ಹೋಗುವವರ ಸಂಖ್ಯೆಗೆನೂ ಕಡಿಮೆ ಇಲ್ಲ. ಇಂತಹ ಜನಗಳ ನಡುವೆ ಕಾಲಿಲ್ಲದಿದ್ದರೂ ಕೃಷಿ ಮಾಡಿ ಯಶಸ್ಸು ಕಾಣುತ್ತಿದ್ದಾರೆ ಇಲ್ಲೊಬ್ಬ ರೈತ.

ASSEMBLY ELECTION: ಈಗಲೇ ಹೈವೋಲ್ಟೇಜ್‌ ಕ್ಷೇತ್ರವಾದ ಕಲಘಟಗಿ

ಜಂಬಗಾದ ಜಮಾದಾರ

ಹೌದು, ಕಾಲಿಲ್ಲದಿದ್ದರೂ ಕೃಷಿ ಮಾಡುತ್ತಿದ್ದಾರೆ ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ರೈತ ಶಿವಪ್ಪ ಜಮಾದಾರ. 40 ವರ್ಷದ ಶಿವಪ್ಪ ಜಮಾದಾರ್ ಅವರಿಗೆ ಬಾಲ್ಯದಿಂದಲೇ ಪೋಲಿಯೋದಿಂದ ಎರಡೂ ಕಾಲುಗಳ ಸ್ವಾಧೀನ ಇಲ್ಲ. ಕಾಲಿಲ್ಲದಿದ್ದರೂ ಇವರು ಕೃಷಿ ಕಾಯಕದಲ್ಲಿ ಛಲದಂಕ ಮಲ್ಲ. ತನ್ನ ಒಂದು ಎಕರೆ ತೋಟದಲ್ಲಿ ಬಗೆ ಬಗೆಯ ತರಕಾರಿಗಳನ್ನು ಬೆಳೆದು ಕೈ ತುಂಬಾ ಸಂಪಾದಿಸಿ ಜೀವನ ನಿರ್ವಹಿಸುತ್ತಿದ್ದಾರೆ. 

ಆಳಿನ ಮೇಲೆ ಅವಲಂಬನೆ ಇಲ್ಲ

ರೈತ ಶಿವಪ್ಪ ಜಮಾದಾರ್, ತನ್ನ ತೋಟದ ಎಲ್ಲಾ ಕೆಲಸಗಳನ್ನ ಸ್ವತಃ ತಾವೇ ನಿರ್ವಹಿಸುತ್ತಾರೆ. ಅಂದರೆ ತೋಟದಲ್ಲಿ ಬೆಳೆದ ತರಕಾರಿ ಬೆಳೆಗೆ ನೀರುಣಿಸುವುದು, ಬೆಳೆಯಲ್ಲಿನ ಕಳೆ ತೆಗೆಯುವುದು, ಬೆಳೆದ ತರಕಾರಿ ಕಟಾವು ಮಾಡುವುದು, ಅಷ್ಟೇ ಅಲ್ಲದೇ ಕಟಾವು ಮಾಡಿದ ತರಕಾರಿಯನ್ನು ತನ್ನ ಮೂರು ಚಕ್ರದ ಬೈಕ್ ನಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಮಾರಾಟ ಮಾಡಿಕೊಂಡು ಬರುವವರೆಗೆ ಎಲ್ಲಾ ಕೆಲಸವನ್ನು ನಿರ್ವಹಿಸುತ್ತಾರೆ ಈ ಶಿವಪ್ಪ. 

ಎರಡು ವರ್ಷಗಳಿಂದ ಕೃಷಿಗೆ ಜೈ

40 ವರ್ಷದ ಶಿವಪ್ಪ ತನ್ನ ತಂದೆ - ತಾಯಿ , ಪತ್ನಿ ಮತ್ತು ಒಬ್ಬ ಮಗಳೊಂದಿಗೆ ವಾಸಿಸುತ್ತಿದ್ದಾರೆ. ಮದುವೆಯಾದ ನಂತರ ಮೊದಲು ಗ್ರಾಮದಲ್ಲಿಯೇ ಪಾನ್ ಶಾಪ್ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಹಳ್ಳಿಯಲ್ಲಿನ ಪಾನ್ ಶಾಪ್ ನಲ್ಲಿ ಕುಟುಂಬ ನಿರ್ವಹಿಸಲು ಬೇಕಾಗುವಷ್ಟು ಲಾಭ ಬರಲಿಲ್ಲ. ಹಾಗಾಗಿ ಕೆಲ ದಿನಗಳ ಕಾಲ ಪತ್ನಿಯೊಂದಿಗೆ ಗೋವಾಕ್ಕೆ ಗುಳೆ ಹೋಗಿ ಅಲ್ಲಿ ಕೈಲಾದ ಕೆಲಸ ಮಾಡಿ ಜೀವನ ಸಾಗಿಸಲಾರಂಭಿಸಿದ. ಆದ್ರೆ ಅದೂ ಸೆಟ್ ಆಗಲಿಲ್ಲ. ಕಡೆಗೆ ಊರಿಗೆ ಬಂದಾಗ ಅನ್ನಿಸಿದ್ದು ನನಗೆ ಹೇಗೂ ಒಂದು ಎಕರೆ ಜಮೀನಿದೆ. ಅದೇಕೆ ಕೃಷಿ ಮಾಡಬಾರದು ಎಂದುಕೊಂಡು ಕೃಷಿ ಕಾಯಕಕ್ಕಿಳಿದ. 

ಆರಂಭದಲ್ಲಿ ನಕ್ಕವರೇ ಹೆಚ್ಚು

ಎರಡು ಕಾಲಿನ ಶಕ್ತಿ ಇಲ್ಲದೇ ಸರಿಯಾಗಿ ನಡೆಯಲು ಆಗದ ವ್ಯಕ್ತಿ, ಅದೇಗೆ ಕೃಷಿ ಮಾಡ್ತಾನೆ ಅಂತ ಆರಂಭದಲ್ಲಿ ಜನ ನಕ್ಕಿದೆ ಹೆಚ್ಚು. ಆದರೆ ಇವರ ಮಾವಂದಿರು, ಇವರ ನಿರ್ಧಾರಕ್ಕೆ ಬೆಂಬಲವಾಗಿ ನಿಂತಾಗ ಶಿವಪ್ಪ ಕೃಷಿಗೆ ದುಮುಕಿದರು. ಸಾಲ ಸೋಲ ಮಾಡಿ ಎರಡು ವರ್ಷಗಳ ಹಿಂದೆ ಹೊಲದಲ್ಲಿ  ಬೋರ್ವೆಲ್ ಕೊರೆಸಿದರು. ಮಾವಂದಿರ ಸಹಾಯದಿಂದ ಸ್ಪಿಂಕಲರ್ ತಂದು ತರಕಾರಿ ಬೆಳೆಯಲು ಆರಂಭಿಸಿದರು. ಪ್ರತಿ ದಿನವೂ ಕೈಗೆ ಆದಾಯ ತರುವ ತರಕಾರಿ ಸದ್ಯ ಇವರಿಗೆ ಅಚ್ಚುಮೆಚ್ಚಿನ ಬೆಳೆಯಾಗಿದೆ. ಇದಕ್ಕೆ ಕಾರಣ ತರಕಾರಿ ಬೆಳೆಯಲು ಬಂಡವಾಳದ ಅವಶ್ಯಕತೆ ಸಹ ಬಲು ಕಡಿಮೆ. ಹಾಗಾಗಿ ಇವರು ನಿತ್ಯ ಹೊಲದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ತಮ್ಮ ಕುಟುಂಬ ನಿರ್ವಹಿಸುತ್ತಿದ್ದಾರೆ.

ಪತ್ನಿ ಜಗದೇವಿ ಸಾಥ್

ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾರೆ ಎನ್ನುವ ಮಾತಿಗೆ. ಈ ಮಾತಿಗೆ ಪೂರಕವಾಗಿದ್ದಾರೆ ಈ ರೈತ ಶಿವಪ್ಪ ಅವರ ಪತ್ನಿ ಜಗದೇವಿ. ಶಿವಪ್ಪ ಅವರ ಕೃಷಿ ಕಾಯಕಕ್ಕೆ  ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವವರು ಇವರ ಪತ್ನಿ ಜಗದೇವಿ. ಸದಾ ಗಂಡನ ಜೊತೆಗಿದ್ದು ಅವರ ಕೆಲಸಕ್ಕೆ ಸಾತ್ ನೀಡುವುದಲ್ಲದೆ, ಮನೆ ಕೆಲಸವನ್ನೂ ನಿರ್ವಹಿಸುವ ಮೂಲಕ ಗಂಡನ ಯಶಸ್ಸಿನಲ್ಲಿ ಬೆನ್ನೆಲುಬಾಗಿ ನಿಂತವರು ಪತ್ನಿ ಜಗದೇವಿ. 

ಇನ್ನೊಂದು ಬೋರವೆಲ್ ಬೇಕು

ಇವರು ತಮ್ಮ ಒಂದು ಎಕರೆ ತೋಟದಲ್ಲಿ ಪಾಲಕ್ ಸೊಪ್ಪು, ಪುದಿನಾ ಸೊಪ್ಪು, ಮೆಂತೆ ಸೊಪ್ಪು ಸೇರಿದಂತೆ ಇನ್ನಿತರ ಸೊಪ್ಪುಗಳನ್ನು ಬೆಳೆಯುತ್ತಾರೆ. ಇವರು ಎರಡು ವರ್ಷದ ಹಿಂದೆ ತೋಡಿರುವ ಬೋರ್ವೆಲ್ ನಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಇವರ ಒಂದು ಎಕರೆ ಸಂಪೂರ್ಣ ತೋಟಕ್ಕೆ ಬೇಕಾಗುವಷ್ಟು ನೀರು ಈ ಬೋರ್ವೆಲ್ ಅಲ್ಲಿ ಲಭ್ಯವಿಲ್ಲ. ಹಾಗಾಗಿ ಕೇವಲ ಅರ್ಧ ಎಕರೆಯಲ್ ಅಷ್ಟೇ ಬೆಳೆ ಬೆಳೆದು ಇನ್ನರ್ಥ ಎಕರೆ ಪ್ರದೇಶ ಖಾಲಿ ಬಿಡುವಂತಹ ಪರಸ್ಥಿತಿ ಬಂದಿದೆ. ಸರ್ಕಾರ ಒಂದಿಷ್ಟು ನೆರವು ನೀಡಿ ಗಂಗಾ ಕಲ್ಯಾಣ ಯೋಜನೆ ಅಡಿ ಉಚಿತ ಬೋರ್ವೆಲ್ ಕೊರೆಸಲು ಅವಕಾಶ ಕಲ್ಪಿಸಿಕೊಟ್ಟರೆ ಸಹಾಯವಾಗುತ್ತದೆ. ಅಲ್ಲದೆ ಪೈಪ್ಲೈನ್ ಸೇರಿದಂತೆ ಇತರೇ ನೆರವು ನೀಡಿದರೆ  ಇನ್ನಷ್ಟು ಧೈರ್ಯದಿಂದ ಕೃಷಿ ಮಾಡಬಲ್ಲೇ ಎನ್ನುತ್ತಾರೆ ವಿಶೇಷ ಚೇತನ ಕೃಷಿಕ ಶಿವಪ್ಪ ಜಮಾದಾರ.  

ಚಿತ್ತಾಪುರ: ಗ್ರಾಮೀಣ ಭಾಗಗಳ ಅಭಿವೃದ್ಧಿ ನನ್ನ ಬದ್ಧತೆ: ಪ್ರಿಯಾಂಕ್‌ ಖರ್ಗೆ

ಸರಕಾರದ ಯೋಜನೆ ಬಗ್ಗೆ ಅರಿವಿಲ್ಲದ ರೈತ

ನಿತ್ಯ ಕೃಷಿ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಈ ವಿಶೇಷ ಚೇತನ ರೈತ ಶಿವಪ್ಪ ಜಮಾದಾರ ಅವರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವಿಲ್ಲ. ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ವೆಲ್ ಕೊರೆಸುವುದು, ಪೈಪಲೈನ್, ಡ್ರಿಪ್ ಇರಿಗೇಷನ್, ಸ್ಪಿಂಕಲರ್ ಸಹಾಯಧನ, ಕೆಲವು ತರಕಾರಿ ಬೆಳೆಗಳಿಗೆ ಸುಗುವ ಸಹಾಧನದ ಲಾಭ ಪಡೆಯುವುದು ಹೇಗೆ ಎನ್ನುವುದರ ಅರಿವು ಇವರಿಗೆ ಇಲ್ಲ. ತಾನಾಯ್ತು ತನ್ನ ಕೃಷಿ ಕಾಯಕವಾಯಿತು ಎಂದು ದುಡಿಯುವುದಷ್ಟೇ ಇವರಿಗೆ ಗೊತ್ತು. ಹಾಗಾಗಿಯೇ ಇದುವರೆಗೆ ಇವರು ಸರ್ಕಾರದಿಂದ ಒಂದೇ ಒಂದು ಯೋಜನೆಯ ನೆರವು ಪಡೆದಿಲ್ಲ. 

ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ವಿಶೇಷ ಚೇತನ ವ್ಯಕ್ತಿಯ ಕೃಷಿ ಪ್ರೇಮ, ಇವರ ಶ್ರಮ, ಮತ್ತು ಸಾಧಿಸುವ ಛಲವನ್ನು ಗಮನಿಸಿ ಸರ್ಕಾರದ ಸೂಕ್ತ ಯೋಜನೆಗಳು ಇವರಿಗೆ ತಲುಪುವಂತೆ ಮಾಡಬೇಕಿದೆ.  ಎಲ್ಲಾ ನೆಟ್ಟಗಿದ್ದ ಯುವಕರೂ ಹಳ್ಳಿ ಬಿಟ್ಟು ಸಿಟಿ ಸೇರುತ್ತಿರುವ ಹೊತ್ತಲ್ಲಿ ,ಕಾಲಿಲ್ಲದಿದ್ದರೂ ಕೃಷಿ ಮಾಡಿ ಸೈ ಎನ್ನಿಸಿಕೊಳ್ಳುತ್ತಿರುವ ರೈತ ಶಿವಪ್ಪ ಜಮಾದಾರ ಅವರು ಆದರ್ಶಪ್ರಾಯರು‌‌. ಈ ಶಿವಪ್ಪ ಜಮಾದಾರ್ ಕೃಷಿಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವಂತಾಗಲಿ. ಒಬ್ಬ ಯಶಸ್ವಿ ಹಾಗೂ ಮಾದರಿ ರೈತರಾಗಿ ಹೊರಹೊಮ್ಮಲಿ ಎನ್ನುವುದೇ ನಮ್ಮ ಆಶಯ.‌
 

click me!