ಮುಂದಿನ ದಿನಗಳಲ್ಲಿ ರೈತರ ಮನೆಗಳಲ್ಲಿ ವಾಸ್ತವ್ಯ ಮಾಡಲಾಗುವುದು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ಮೈಸೂರು (ಸೆ.09): ಈಗಾಗಲೇ ರಾಜ್ಯದ 30 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ರೈತರ ಮನೆಗಳಲ್ಲಿ ವಾಸ್ತವ್ಯ ಹೂಡಿ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಮೈಸೂರಲ್ಲಿ ಮಾತನಾಡಿದ ಅವರು, ಅಧಿಕಾರಿಗಳೊಂದಿಗೆ ವಾಸ್ತವ್ಯ ಹೂಡಿ ಸ್ಥಳದಲ್ಲೇ ರೈತರ ಸಮಸ್ಯೆ ಬಗೆಹರಿಸುತ್ತೇನೆ. ರಾಜ್ಯದಲ್ಲಿ ಮುಂಗಾರು ಮಳೆ ಬಂದು ಎಲ್ಲ ಜಲಾಶಯಗಳು ಭರ್ತಿಯಾಗಿವೆ. ರೈತರಿಗೆ ಬೇಕಾಗುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನುಗಳಿವೆ. ರೈತರಿಗೆ ಯಾವುದೇ ರೀತಿಯ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
'ನಿಜವಾದ ಊಸರವಳ್ಳಿ ನೀವೇ : ಕೃಷಿ ಸಚಿವ ಬಿ.ಸಿ. ಪಾಟೀಲ್‌ಗೆ ವಾರ್ನಿಂಗ್ '
ರಸಗೊಬ್ಬರ ಕೊರತೆ ಇಲ್ಲ: ರಾಜ್ಯದಲ್ಲಿ ರಸಗೊಬ್ಬರ, ಯೂರಿಯಾಗೆ ಯಾವುದೇ ಕೊರತೆ ಇಲ್ಲ. ಆದರೆ, ಕೆಲವೆಡೆ ಉದ್ದೇಶಪೂರ್ವಕವಾಗಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಅಂತವರ ವಿರುದ್ಧ ಕ್ರಮ ಜರುಗಿಸಿ ಪರವಾನಿಗೆ ರದ್ದು ಮಾಡಲಾಗುತ್ತಿದೆ. ಅಲ್ಲದೇ ರಸಗೊಬ್ಬರ ಕಳ್ಳ ಸಾಗಾಣೆ, ಕಳ್ಳ ದಾಸ್ತಾನು ಕುರಿತು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ರೀತಿಯ ಪ್ರಕರಣಗಳ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ಸಿ.ಪಾಟೀಲ್ ಹೇಳಿದರು.