ಪ್ರಯಾಣಿಕರ ದಟ್ಟಣೆ ವೇಳೆ ಹೆಚ್ಚುವರಿ ರೈಲು ಸೇವೆ

By Web DeskFirst Published Aug 27, 2019, 8:17 AM IST
Highlights

ಪ್ರಯಾಣಿಕರು ಹೆಚ್ಚಿರುವ ಸಂದರ್ಭದಲ್ಲಿ ದಟ್ಟಣೆ ವೇಳೆ ಹೆಚ್ಚುವರಿ ರೈಲು ಸೇವೆ ಒದಗಿಸಲು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶಗ ಅಂಗಡಿ ಹೇಳಿದ್ದಾರೆ. 

ಬೆಂಗಳೂರು [ಆ.27]:  ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ನಗರದಿಂದ ವೈಟ್‌ಫೀಲ್ಡ್‌ ಕಡೆಗೆ ಹೆಚ್ಚುವರಿ ಉಪನಗರ ರೈಲು ಸೇವೆ ಕಲ್ಪಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಸೂಚಿಸಿದ್ದಾರೆ.

ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಹೆಚ್ಚುವರಿ ರೈಲು ಸಂಚಾರದಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಹಾಗಾಗಿ ಉಪನಗರ ರೈಲು ಸೇವೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಬೆಂಗಳೂರು ವಿಭಾಗದ ಡಿಆರ್‌ಎಂ ಅಶೋಕ್‌ ಕುಮಾರ್‌ ಮರ್ಮಾ ಅವರು ವಿಭಾಗದ ವ್ಯಾಪ್ತಿಯಲ್ಲಿ ಕೈಗೊಂಡಿರುವ ಪ್ರಯಾಣಿಕರ ಸ್ನೇಹಿ ಕ್ರಮಗಳು, ಸುರಕ್ಷತೆ ಸೇರಿದಂತೆ ಪ್ರಮುಖ ಯೋಜನೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಯಲಹಂಕ- ಮಾಕಾಳಿ ದುರ್ಗ ಜೋಡಿಹಳಿ ನಿರ್ಮಾಣ ಕಾಮಗಾರಿ ಪ್ರಗತಿ ಕುರಿತು ವಿವರಿಸಿದರು. ಜೋಡಿ ಹಳಿ ನಿರ್ಮಾಣ ಅಥವಾ ಹೊಸ ಮಾರ್ಗ ನಿರ್ಮಾಣ ಕಾಮಗಾರಿಗಳನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಂತೆಯೆ ವಿಭಾಗದ ಉದ್ದೇಶಿತ ರೈಲ್ವೆ ಕಾಮಗಾರಿಗಳಿಗೆ ಅಗತ್ಯವಿರುವ ಭೂಸ್ವಾಧೀನದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಆರ್‌ಎಂ ಕಚೇರಿ ಆವರಣದ ಕ್ಯಾಂಟಿನ್‌ಗೆ ಭೇಟಿ ನೀಡಿದ ಸಚಿವರು ರೈಲ್ವೆ ಸಿಬ್ಬಂದಿಯೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವರು ಪ್ರಯಾಣಿಕರೊಂದಿಗೆ ಚರ್ಚಿಸಿದರು. ಅಂತೆಯೆ ಪ್ಲಾಟ್‌ಫಾಮ್‌ರ್‍ಗಳಲ್ಲಿರುವ ಮಳಿಗೆಗಳು, ರೆಸ್ಟೋರೆಂಟ್‌ಗಳಿಗೆ ತೆರಳಿ ಸೇವೆ ಕುರಿತು ಪ್ರಯಾಣಿಕರ ಅಭಿಪ್ರಾಯ ಕೇಳಿದರು. ತುರ್ತು ವೈದ್ಯಕೀಯ ಕೇಂದ್ರ, ಫೋಟೋ ಗ್ಯಾಲರಿ, ಜೈವಿಕ ಶೌಚಾಲಯ ಮಾದರಿ ಪರಿಶೀಲಿಸಿದರು. ರೈಲು ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಸಂಸದರಾದ ಪಿ.ಸಿ.ಮೋಹನ್‌, ಕರಡಿ ಸಂಗಣ್ಣ ಸೇರಿದಂತೆ ರೈಲ್ವೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

click me!