
ನಾಗರಾಜ ಮಾರೇರ
ಹುಬ್ಬಳ್ಳಿ(ನ.16): ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಒಂದು ವಿಡಿಯೋ ಇದೀಗ ಕೆರೆಯ ಅಂದವನ್ನು ಬದಲಾಯಿಸುತ್ತಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಕೆರೆಯ ಸ್ವಚ್ಛತೆಯ ಒಂದು ವಿಡಿಯೋದಿಂದ ಪ್ರೇರಿತಗೊಂಡ ಹತ್ತು ಹಲವು ಸಂಘಟನೆಗಳು ಒಗ್ಗೂಡಿ ‘ಕೆರೆಯ ಅಭಿವೃದ್ಧಿಗೆ’ ಟೊಂಕ್ ಕಟ್ಟಿ ನಿಂತಿವೆ. ಫಲಾಪೇಕ್ಷೆ ಇಲ್ಲದೆ ಮುಂದಿನ ಪೀಳಿಗೆಗೆ ಜೀವಜಲ ಉಳಿಸಿಕೊಡುವ ಕನಸಿನೊಂದಿಗೆ ಹೆಜ್ಜೆ ಹಾಕಿವೆ.
ಇಲ್ಲಿನ ಉಣಕಲ್ ಕೆರೆಯಲ್ಲಿ ಬೆಳೆದಿರುವ ಅಂತರ ಗಂಗೆ ನಿರ್ಮೂಲನೆ ಮಾಡಲು ಮಹಾನಗರ ಪಾಲಿಕೆಗೆ ಆಗದ ಕೆಲಸವನ್ನು ಇದೀಗ ‘ಉಣಕಲ್ ಅಭಿವೃದ್ಧಿ ಸಂಘ’ ಅಂತರ ಗಂಗೆಗೆ ಮುಕ್ತಿ ನೀಡುತ್ತಿದೆ. ನಾಲ್ಕಾರು ಜನರಿಂದ ಆರಂಭವಾದ ‘ಉಣಕಲ್ ಅಭಿವೃದ್ಧಿ ಸಂಘ’ ಉಣಕಲ್ ಸ್ವಚ್ಛತಾ ಅಭಿಯಾನ ಪ್ರಾರಂಭಿಸಿದೆ. ಇದೀಗ ಈ ಸಂಘದ ಕಾರ್ಯವೈಖರಿಗೆ ಮನಸೋತ ಬೆಂಗಳೂರಿನ ಹಲವು ಸಂಘ-ಸಂಸ್ಥೆಗಳು ಕೈಜೋಡಿಸಿದ್ದು, ಪ್ರತಿ ಭಾನುವಾರ ಹುಬ್ಬಳ್ಳಿಗೆ ಬಂದು ಸ್ವಚ್ಛತೆಗೆ ಕೈಜೋಡಿಸುತ್ತಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಚಳಿಗಾಲದ ಬೆಳಗಿನ ಮಂಜಿಗೆ ಹೆದರಿ ಸೂರ್ಯ ಹೊದಿಕೆಯಿಂದ ಹೊರಬರದೆ, ಮಂಜಿನ ಹನಿಗಳು ಭೂಮಿ ಚುಂಬಿಸುತ್ತಿರುವಾಗಲೇ ಕೈಯಲ್ಲಿ ಸಲಿಕೆ, ಕೊಡಲಿ, ಬುಟ್ಟಿಹೊತ್ತು ಕೆರೆಯತ್ತ ಹೆಜ್ಜೆ ಹಾಕುವ ಈ ಸಂಘದ ಸದಸ್ಯರು ವಾರದ ಏಳು ದಿನವೂ ಬೆಳಗ್ಗೆ 7.30ರಿಂದ 10ರ ವರೆಗೆ ಸ್ವಚ್ಛತಾ ಶ್ರಮದಾನ ಮೂಲಕ ಎಲ್ಲರಿಗೆ ಪ್ರೇರಣೆಯಾಗಿದೆ.
ವಿಡಿಯೋ ವೈರಲ್:
ಸಮಾನ ಮನಸ್ಕ ಯುವಕರು ಉಣಕಲ್‌ನ್ನು ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದೆ ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂದು ಚರ್ಚೆಗೆ ಹಾಕಿದ್ದಾರೆ. ಆಗ ಒಮ್ಮತದಿಂದ ಹುಟ್ಟಿಕೊಂಡ ಸಂಘವೇ ‘ಉಣಕಲ್ ಅಭಿವೃದ್ಧಿ ಸಂಘ’. ನಿತ್ಯ ಉಣಕಲ್ ಕೆರೆ ಅಂಚಿನಲ್ಲಿ ಸಂಚರಿಸುತ್ತಿದ್ದ ಈ ಸಂಘದ ಪಡೆ ಕೆರೆಯಲ್ಲಿ ಬೆಳೆದಿರುವ ಅಂತರಗಂಗೆಗೆ ಮುಕ್ತಿ ನೀಡುವುದು ಹಾಗೂ ಅದರ ಸ್ವಚ್ಛತೆಗೆ ಆದ್ಯತೆ ನೀಡಿ ಹತ್ತು ದಿನಗಳಿಂದ ಉಣಕಲ್ ಕೆರೆ ಸ್ವಚ್ಛತಾ ಅಭಿಯಾನ ಆರಂಭಿಸಿದೆ.
ನಿತ್ಯವೂ ಸ್ವಚ್ಛತೆ ಮಾಡಿದ ವಿಡಿಯೋವನ್ನು ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕೆರೆ ಸ್ವಚ್ಛತೆಗೆ ಕೈಜೋಡಿಸುವಂತೆ ಮನವಿ ಮಾಡಿದೆ. ಈ ವಿಡಿಯೋ ನೋಡಿದ ದೇಶಪಾಂಡೆ ಫೌಂಡೇಶನ್ 2 ಬುಟ್ಟಿ, 3 ಸಲಕಿ, 2 ಕೊಡಲಿ ನೀಡಿದರೆ ವಿಶ್ವನಾಥ ಸೋಮಾಪುರ ಎನ್ನುವರು ಸಂಘಕ್ಕೆ 600 ಮಾಸ್ಕ್, ಹ್ಯಾಂಡ್‌ಗ್ಲೌಜ್ ನೀಡಿದ್ದಾರೆ. ಜತೆಗೆ ಈ ಸಂಘಕ್ಕೆ ಯುವ ಬಿಗ್ರೇಡ್, ಉಣಕಲ್ ಯುವಪಡೆ, ಬೆಂಗಳೂರು ಮತ್ತು ಹುಬ್ಬಳ್ಳಿಯ ಶಾಂತೇಶ್ವರ ಗೆಳೆಯರ ಬಳಗ, ಎನ್ವಿರಾನ್‌ಮೆಂಟ್ ಫೌಂಡೇಶನ್, ದೇಶಪಾಂಡೆ ಫೌಂಡೇಶನ್, ಟಾಟಾ ಹಿಟಾಚಿ, ಬಿವಿಬಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು, ಆರ್‌ಎನ್‌ವೈ ಗೆಳೆಯರ ಬಳಗ ರಾಜೀವನಗರ, 99 ಬೈಕ್ ರೇಡರ್ಸ್ ಕೈಜೋಡಿಸಿವೆ.
ಕಳೆದ ಭಾನುವಾರ 250 ಸದಸ್ಯರು ಕೆರೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ. ಅಂದು ಬೆಂಗಳೂರಿನಿಂದ ಆಗಮಿಸಿದ ಶಾಂತೇಶ್ವರ ಗೆಳೆಯರ ಬಳಗದ ಮಹಿಳಾ ಹಾಗೂ ಪುರುಷರು ಸೇರಿ 25 ಸದಸ್ಯರು ಉಣಕಲ್ ಅಭಿವೃದ್ಧಿ ಸಂಘದೊಂದಿಗೆ ಶ್ರಮದಾನಕ್ಕೆ ಕೈಜೋಡಿಸಿದ್ದಲ್ಲದೇ ಎಲ್ಲರಿಗೂ ಉಪಾಹಾರ ಕಲ್ಪಿಸಿ ಮರಳಿ ಮತ್ತೆ ಭಾನುವಾರ ಬರುವುದಾಗಿ ತಿಳಿಸಿದ್ದಾರೆ.
ಭಾರಿ ಬೆಂಬಲ:
ಉಣಕಲ್ ಅಭಿವೃದ್ಧಿ ಸಂಘದ ಸಾಮಾಜಿಕ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿ ಹಲವಾರು ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಪ್ರೇರಿತವಾಗಿ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದು ಪ್ರಾಮಾಣಿಕತೆಯ ಗೆಲವು. ಕೇವಲ ಸರ್ಕಾರಿ ಸೌಲಭ್ಯ ಪಡಯಲೆಂದೆ ಹುಟ್ಟಿಕೊಟ್ಟಿರುವ ಸಂಘ-ಸಂಸ್ಥೆಗಳ ಮಧ್ಯೆ ಉಣಕಲ್ ಅಭಿವೃದ್ಧಿ ಸಂಘ ಕೈಗೊಂಡ ಕಾರ್ಯ ಎಲ್ಲರಿಗೆ ಮಾದರಿ. ನಿಮಗೆ ಯಾವ ಸಹಾಯ ಬೇಕಾದರೂ ಕೇಳಿ ಎಂದು ಹಲವರು ಬೆಂಬಲ ನೀಡಿದ್ದಾರೆ.
ಯಂತ್ರಗಳ ಕಾರ್ಯಾಚರಣೆ
ಕೆರೆಯ ಹಿಂಬದಿಯಲ್ಲಿರುವ ಅಂತರಗಂಗೆ ತೆಗೆಯುವುದು ಸವಾಲಿನ ಕೆಲಸವಾಗಿದ್ದು, ಯಂತ್ರಗಳ ಮೋರೆ ಹೋಗಲಾಗಿದೆ. ಟಾಟಾ ಹಿಟಾಚಿ ಅವರು ಸೋಮವಾರ ಜೆಸಿಬಿ ನೀಡುತ್ತಿದ್ದು, ಅದರ ಮೂಲಕ ಕೆರೆಯಲ್ಲಿ ಆಳವಾಗಿ ಬೆಳೆದಿರುವ ಅಂತರಗಂಗೆ ತೆಗೆಯಲು ಸಂಘ ಮುಂದಾಗಿದೆ. ಇದರೊಂದಿಗೆ ಬೋಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಸ್ವ-ಇಚ್ಛೆಯಿಂದ ಯಾರೇ ಬಂದರೂ ಅವರೊಂದಿಗೆ ಒಗ್ಗೂಡಿ ಕೆರೆ ಸ್ವಚ್ಛತೆಗೆ ಶ್ರಮಿಸುತ್ತೇವೆ. ಮಹಾನಗರ ಪಾಲಿಕೆ ನಮಗೆ ಸಾಥ್ ನೀಡಿದರೆ ಸಾಕು. ಅಂತರ ಗಂಗೆಯನ್ನು ತೆಗೆಯಲು ಯಾರಿಗೂ ಟೆಂಡರ್ ಕೊಡದೇ ಬೆಂಬಲ ನೀಡಬೇಕು. ಕೆರೆಯಲ್ಲಿ ಅಂತರ ಗಂಗೆ ಬೆಳೆಯದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ನಿತ್ಯ ಕೈಗೊಳ್ಳುವ ಕೆಲಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪರಿಣಾಮ ಇದೀಗ ಅನೇಕ ಸಂಘ-ಸಂಸ್ಥೆಗಳು ಕೈಜೋಡಿಸಿವೆ. ಈ ಕಾರ್ಯ ನಿರಂತರವಾಗಿ ಸಾಗಲಿದೆ ಎಂದು ಉಣಕಲ್ ಅಭಿವೃದ್ಧಿ ಸಂಘದ ಸದಸ್ಯ ಸಿದ್ದು ಕೆಂಚಣ್ಣನವರ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಹಿಟ್ನಾಳ್ ಅವರು, ಉಣಕಲ್ ಕೆರೆಯ ಅಂತರ ಗಂಗೆ ತೆಗೆಯುತ್ತಿರುವ ಉಣಕಲ್ ಅಭಿವೃದ್ಧಿ ಸಂಘಕ್ಕೆ ಬೆಂಬಲ ನೀಡಲು ದೇಶಪಾಂಡೆ ಫೌಂಡೇಶನ್ ಹಾಗೂ ಟಾಟಾ ಹಿಟಾಚಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಪತ್ರ ಬರೆದಿದ್ದು ಅವರು ಹಿಟಾಚಿ ನೀಡಲು ಮುಂದೇ ಬಂದಿದ್ದಾರೆ. ಈ ಸಂಘದೊಂದಿಗೆ ಪಾಲಿಕೆ ಜತೆಗೂಡಿ ತಿಂಗಳೊಳಗೆ ಕೆರೆಯಲ್ಲಿನ ಅಂತರ ಗಂಗೆ ತೆಗೆಯಲಾಗುವುದು. ಶಾಶ್ವತವಾಗಿ ಕೆರೆಯಲ್ಲಿ ಬೆಳೆಯದಂತೆ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಯೋಜನೆಯಡಿ ಪರಿಹಾರ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.