ರಾಮ ಮಂದಿರಕ್ಕೆ ದೇಣಿಗೆ ನೀಡಿದ ಸಹೋದರಿಯರು : ಕೊಂಡಾಡಿದ ಸಚಿವರು

By Kannadaprabha NewsFirst Published Feb 13, 2021, 12:05 PM IST
Highlights

ಇದೀಗ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಎಲ್ಲೆಡೆ ಹಣ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ. ಇದೇ ವೇಳೆ ಹಲವರು ದೇಣಿಗೆ ನೀಡುತ್ತಿದ್ದು ಇಬ್ಬರು ಸಹೋದರಿಯರು ತಮ್ಮ ಪಾಕೆಟ್ ಮನಿಯನ್ನು ನೀಡಿದ್ದಾರೆ. 

 ಶಿವಮೊಗ್ಗ (ಫೆ.13): ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕವಾಗಿ ದೇಣಿಗೆ ಸಂಗ್ರಹಿಸುವ ಅಭಿಯಾನ ನಡೆಯುತ್ತಿದೆ. ನಗರದ ಹಳೆ ಬೊಮ್ಮನಕಟ್ಟೆಯ ಇಬ್ಬರು ಬಾಲಕಿಯರು ಸಹ ತಮ್ಮ ಉಳಿತಾಯದ ಹಣವನ್ನು ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಮೂಲಕ ನೀಡಿ, ಮಂದಿರ ನಿರ್ಮಾಣದ ಭಕ್ತಿ ಮೆರೆದು ಗಮನ ಸೆಳೆದಿದ್ದಾರೆ.

9ನೇ ತರಗತಿಯ ಛಾಯಶ್ರೀ (17) ಮತ್ತು ತಂಗಿ ಅನುಶ್ರೀ (11) ದೇಣಿಗೆ ಸಲ್ಲಿಸಿದ ಬಾಲಕಿಯರು. ಈ ಸೋದರಿಯರು 2 ವರ್ಷಗಳಿಂದ ಪೋಷಕರು ತಮಗೆ ನೀಡಿದ ಪಾಕೆಟ್‌ ಮನಿಯನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರು. ಇತ್ತೀಚೆಗೆ ಶ್ರೀ ರಾಮಮಂದಿರ ನಿರ್ಮಾಣದ ವಿಷಯ ತಿಳಿದ ಬಳಿಕ ತಮ್ಮ ಉಳಿತಾಯದ ಹಣವನ್ನು ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನಕ್ಕೆ ದೇಣಿಗೆಯಾಗಿ ನೀಡಲು ನಿರ್ಧರಿಸಿದರು.

ಬಾಲಕಿಯರು ದೇಣಿಗೆ ನೀಡುವ ಆಶಯ ವ್ಯಕ್ತಪಡಿಸಿದ್ದನ್ನು ತಿಳಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಈ ಬಾಲಕಿಯರ ಮನೆಗೆ ಶುಕ್ರವಾರ ಭೇಟಿ ನೀಡಿದರು. ಈ ಸಂದರ್ಭ ಛಾಯಶ್ರೀ ಹಾಗೂ ಅನುಶ್ರೀ ಅವರು ಈಶ್ವರಪ್ಪ ಅವರಿಗೆ ತಮ್ಮಲ್ಲಿದ್ದ ಹಣ ನಿಡಿದರು.

ರಾಮಮಂದಿರಕ್ಕೆ ಧರ್ಮಸ್ಥಳದಿಂದ ಭಾರೀ ಮೊತ್ತದ ಹಣ ಹಸ್ತಾಂತರ

ಸಮರ್ಪಣಾ ನಿಧಿಯನ್ನು ಸ್ವೀಕರಿಸಿದ ಸಚಿವರು ಮಾತನಾಡಿ, ಇಡೀ ದೇಶದ ಜನತೆಗೆ ಇದೊಂದು ಆದರ್ಶವಾಗಿದೆ. ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲೇ ಇಂತಹ ಸಂಸ್ಕಾರ ಮೂಡಿರುವುದು ವಿಶೇಷವಾಗಿದೆ. ದೇಶಾದ್ಯಂತ ಕೋಟ್ಯಂತರ ಜನರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ಅನೇಕ ಶ್ರೀಮಂತರು ತಾವೇ ಎಲ್ಲ ಖರ್ಚನ್ನು ಭರಿಸಲು ಮುಂದಾದರೂ ಸಹ ಶ್ರೀ ರಾಮಚಂದ್ರನ ಮಂದಿರ ನಿರ್ಮಾಣ ಇಡೀ ದೇಶದ ಜನತೆಯ ಕನಸಾಗಿದೆ. ಎಲ್ಲರ ಪಾಲು ಈ ಮಂದಿರ ನಿರ್ಮಾಣದಲ್ಲಿ ಆಗಬೇಕೆಂಬ ಉದ್ದೇಶದಿಂದ ಸಮರ್ಪಣಾ ನಿಧಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದೇವೆ. ಶ್ರೀಮಂತರು ಲಕ್ಷಾಂತರ ದೇಣಿಗೆ ನೀಡಿದ್ದಾರೆ. ಆದರೂ, ಸಹ ಬಡಮಕ್ಕಳು ಸಂಗ್ರಹಿಸಿ, ನೀಡಿದ ಈ ಕೊಡುಗೆ ಮಹತ್ವದಾಗಿದೆ ಎಂದರು.

ಪೇಂಟಿಂಗ್‌ ವೃತ್ತಿ ನಿರ್ವಹಿಸುವ ಶಂಕರ್‌ ಮತ್ತು ಪತ್ನಿ ನೇತ್ರಾವತಿ ದಂಪತಿ ಪುತ್ರಿಯರಾದ ಛಾಯಶ್ರೀ ಮತ್ತು ಅನುಶ್ರೀ ಅವರ ಈ ಕೊಡುಗೆ ಸಾರ್ವಜನಿಕರಿಗೆ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ಎಲ್ಲರಿಗೂ ಪ್ರೇರೇಪಣೆ ಆಗಿದೆ ಎಂದು ಸಚಿವರು ಹೇಳಿದ್ದಾರೆ.

click me!