ಪ್ರಸಿದ್ಧ ಪ್ರವಾಸಿ ತಾಣ ಸಿರಿಮನೆ ಫಾಲ್ಸ್‌ಗೆ ಮೊಬೈಲ್ ಟವರ್ ಇಲ್ಲ; ಪ್ರವಾಸಿಗರು, ಗ್ರಾಮಸ್ಥರ ಪರದಾಟ

Kannadaprabha News   | Kannada Prabha
Published : Oct 28, 2026, 08:20 AM IST
Sirimane Falls

ಸಾರಾಂಶ

ಶೃಂಗೇರಿ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಸಿರಿಮನೆ ಫಾಲ್ಸ್ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದೆ ಪ್ರವಾಸಿಗರು ಹಾಗೂ ಸ್ಥಳೀಯರು ಪರದಾಡುತ್ತಿದ್ದಾರೆ. ತುರ್ತು ಸೇವೆಗಳಿಗೂ ಸಂಪರ್ಕ ಸಿಗದೆ ತೊಂದರೆಯಾಗುತ್ತಿದ್ದರೂ, ಮೊಬೈಲ್ ಟವರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿಲ್ಲ. ಕೂಡಲೇ ಟವರ್ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನೆಮ್ಮಾರ್ ಅಬೂಬಕರ್

ಶೃಂಗೇರಿ: ಶೃಂಗೇರಿಯಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿರುವ ಸಿರಿಮನೆ ಫಾಲ್ಸ್ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಜಲಪಾತ ವೀಕ್ಷಣೆಗೆ ವ್ಯವಸ್ಥಿತ ಮೆಟ್ಟಿಲುಗಳಿವೆ. ಶೌಚಾಲಯ, ವಿಶ್ರಾಂತಿ ಕೊಠಡಿ, ಸ್ನಾನ ಕೊಠಡಿ,ವೀಕ್ಷಣಾ ಗೋಪುರ, ಅಂಗಡಿ,ಹೋಟೇಲು ಮಳಿಗೆಗಳು ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳಿವೆ.

ಆದರೆ ಇಲ್ಲಿಗೆ ಅಗತ್ಯವಾಗಿರುವ ಮೊಬೈಲ್ ಟವರ್ ಮಾತ್ರ ಇಲ್ಲದೆ ಬರುವ ಪ್ರವಾಸಿಗರಿಗೆ, ಸುತ್ತಮುತ್ತಲ ಹಳ್ಳಿ, ಕುಗ್ರಾಮಗಳ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮೊಬೈಲ್ ಟವರ್ ಗಳಿದ್ದರೂ ಸಿರಿಮನೆ ಗ್ರಾಮ ಪ್ರಸಿದ್ಧ ಸಿರಿಮನೆ ಫಾಲ್ಸ್ ಹೊಂದಿರುವ ಪ್ರವಾಸಿ ತಾಣವಾಗಿದ್ದರೂ ಇಲ್ಲಿಗೊಂದು ಮೊಬೈಲ್ ಟವರ್ ನಿರ್ಮಾಣಕ್ಕೆ ಯಾವುದೇ ಇಲಾಖೆಯಾಗಲೀ, ಜನಪ್ರತಿನಿದಿಗಳಾಗಲೀ, ಸರ್ಕಾರವಾಗಲೀ ಮುಂದಾಗದಿರುವುದು ಅಚ್ಚರಿಯೇ ಸರಿ.

ವರ್ಷವಿಡೀ ಇಲ್ಲಿ ಜಲಪತಾದಲ್ಲಿ ನೀರು ಸದಾ ಬೋರ್ಗರೆಯುತ್ತಾ ಧುಮುಕುತ್ತಿದೆ. ಇಲ್ಲಿನ ವಿಹಂಗಮ ನೋಟ ವೀಕ್ಷಸಲು ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಮಳೆಗಾಲ, ಸುಡು ಬಿಸಿಲ ಬೇಸಿಗೆ ಎನ್ನದೇ ಭೇಟಿ ನೀಡುತ್ತಲೇ ಇರುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಧಾರ್ಮಿಕ ಕ್ಷೇತ್ರ ಶೃಂಗೇರಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಗೂ ಬರುತ್ತಾರೆ.

ಯಡದಳ್ಳಿ ಗ್ರಾಮ ವ್ಯಾಪ್ತಿಗೆ ಒಳಪಡುವ ಸಿರಿಮನೆ ಗ್ರಾಮದ ಸುತ್ತಮುತ್ತ ಮಘೆಬೈಲು,ಮಾಲ್ ಸಂಪಿಗೆ, ಸಿಂದೋಡಿ, ಕಿತ್ಲೆಮನೆ ಕೊಡಿಗೆ, ಹುಲುಗಾರುಬೈಲು ಸೇರಿದಂತೆ ಅನೇಕ ಗ್ರಾಮಗಳಿವೆ. ಗ್ರಾಮಸ್ಥರು ಹಲವು ವರ್ಷಗಳಿಂದ ಮೊಬೈಲ್ ಟವರ್ ನಿರ್ಮಾಣಕ್ಕಾಗಿ ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಸುತ್ತಮುತ್ತಲ ಅನೇಕ ಹಳ್ಳಿಗಳಿಗೆ ಓಡಾಡಲು ಸರಿಯಾದ ರಸ್ತೆಯೂ ಇಲ್ಲ. ಸೇತುವೆಗಳು ಇಲ್ಲ. ಕಾಲುದಾರಿ, ಹಳ್ಳ, ಕಾಲು ಸಂಕಗಳನ್ನು ದಾಟಿ ಓಡಾಡುವ ದಯನೀಯ ಸ್ಥಿತಿ.ಆದರೂ ತುರ್ತು ಸೇವೆಗೆ ಮೊಬೈಲ್ ನೆಟವರ್ಕ್ ಇಲ್ಲದೇ ಪರದಾಡುವ ಪರಿಸ್ಥಿತಿ ಇವರದು.

ನೆಟ್‌ವರ್ಕ್ ಸಮಸ್ಯೆಯಿಂದ ಪರದಾಡುತ್ತಿರುವ ಸ್ಥಳೀಯರು

ಇನ್ನು ಕಿಗ್ಗಾದಿಂದ ಸುಮಾರು ಮೂರು ಕಿಲೋಮೀಟರ್ ಇರುವ ಮಾರ್ಗದುದ್ದಕ್ಕೂ ನೆಟ್ ವರ್ಕ್ ಇಲ್ಲದಿರುವುದರಿಂದ ಕಿರಿದಾದ ರಸ್ತೆ,ಅಪಾಯಕಾರಿ ತಿರುವುಗಳಿಂದ ಕೂಡಿದ್ದು ಅಪಘಾತ , ಇತರೆ ತೊಂದರೆಗಳು ಉಂಟಾದರೆ ಅಗತ್ಯ ತುರ್ತು ಸೇವೆಗೂ ಸಂಪರ್ಕ ಸಿಗದೆ ಸಾಕಷ್ಟು ಬಾರಿ ಪರದಾಡಿದ ನಿದರ್ಶನಗಳು ಉಂಟು. ಆದರೂ ಇದನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಸಮೀಪದ ಕಿಗ್ಗಾ ಗ್ರಾಮವಿದ್ದು ಇದೂ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಮಲೆನಾಡಿನ ಪ್ರಸಿದ್ಧ ಮಳೆ ದೇವರು ಎಂದೇ ಪ್ರಖ್ಯಾತಿಯ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯಕ್ಕೂ ವಿವಿಧೆಡೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ.ಇದೂ ಕೂಡ ನೆಟ್ ವರ್ಕ್ ಸಮಸ್ಯೆಯಿಂದ ಹೊರತಾಗಿಲ್ಲ. ಇಲ್ಲಿ ನಾಡಕಚೇರಿ, ನೆಮ್ಮದಿ ಕೇಂದ್ರ,ಗ್ರಾಮ ಒನ್ ಕೇಂದ್ರಗಳಿದ್ದು ಅಗತ್ಯ ಕೆಲಸ ಕಾರ್ಯಗಳಿಗೆ ಬರುವ ಜನರು ಒಟಿಪಿಗಾಗಿ ಪರದಾಡಬೇಕಿದೆ. ನಾಲ್ಕೈದು ಕಿಲೋ ಮೀಟರ್ ದೂರದ ನೆಮ್ಮಾರು,ಗಂಡಘಟ್ಟ ಗ್ರಾಮಗಳಲ್ಲಿರುವ ಟವರ್ ಗಳಿಂದ ಒಮ್ಮೊಮ್ಮೊ ಸಿಗ್ನಲ್ ಸಿಗುವುದೇ ಪುಣ್ಯವಾಗಿದೆ.

ಸಿರಿಮನೆ ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಪ್ರವಾಸಿಗರ ಅನುಕೂಲ ದೃಷ್ಠಿಯಿಂದ, ಸುತ್ತಮುತ್ತಲ ಹಳ್ಳಿ,ಕುಗ್ರಾಮಗಳ ಗ್ರಾಮಸ್ಥರಿಗೆ ತುರ್ತು ಸೇವೆ ಅವಷ್ಯಕತೆ ಹಿನ್ನೆಯಿಂದ ಸಂಬಂಧಪಟ್ಟ ಇಲಾಖೆ, ಜನಪ್ರತಿನಿದಿಗಳು, ಸರ್ಕಾರ ಕೂಡಲೇ ತುರ್ತಾಗಿ ಇಲ್ಲಿಗೊಂದು ಮೊಬೈಲ್ ಟವರ್ ನಿರ್ಮಾಣಕ್ಕೆ ಮುಂದಾಗಬೇಕಿದೆ.

ಮೊಬೈಲ್ ಟವರ್ ನಿರ್ಮಾಣ ಮಾಡಿ.

ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದರೂ ಇಲ್ಲಿಗೆ ಅಗತ್ಯವಾಗಿ ಬೇಕಾದ ಮೊಬೈಲ್ ಟವರ್ ನಿರ್ಮಾಣ ಮಾಡಿಲ್ಲ. ಸುತ್ತಮುತ್ತಲ ಗ್ರಾಮಸ್ಥರು ಅನೇಕ ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಇನ್ನಾದರೂ ಗಂಭೀರವಾಗಿ ಪರಿಗಣಿಸಿ ಮೊಬೈಲ್ ಟವರ್ ನಿರ್ಮಿಸಬೇಕು.

-ಸುನಿಲ್ ಸಿರಿಮನೆ

PREV
Read more Articles on
click me!

Recommended Stories

ಮುಂದಿನ ಎಲ್ಲಾ ಚುನಾವಣೆ ಬ್ಯಾಲೆಟ್‌ ಮೂಲಕವೇ ಮಾಡೋಣ: ವಿಧಾನ ಪರಿಷತ್ ಚುನಾವಣೆ ಸೋಲಿನ ಬಳಿಕ ಬಿಜೆಪಿಗೆ ಪ್ರಿಯಾಂಕ್ ಹೊಸ ಸವಾಲ್
ವಿಧಾನ ಪರಿಷತ್‌ ಚುನಾವಣಾ ಫಲಿತಾಂಶದ ಬೆನ್ನಲ್ಲೇ ವಿಜಯೇಂದ್ರ ಬೆನ್ನುತಟ್ಟಿ ಮೆಚ್ಚುಗೆ ಸೂಚಿಸಿದ ಸಿದ್ದು!