ದ.ಕ. ಜಿಲ್ಲಾಧಿಕಾರಿಯಾಗಿ ಸಿಂಧು ರೂಪೇಶ್‌ ಅಧಿಕಾರ ಸ್ವೀಕಾರ

By Kannadaprabha NewsFirst Published Sep 8, 2019, 10:43 AM IST
Highlights

IAS ಸಸಿಕಾಂತ್ ಸೆಂಥಿಲ್ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡಕ್ಕೆ ನೂತನ ಜಿಲ್ಲಾಧಿಕಾರಿಯನ್ನು ನೇಮಿಸಲಾಗಿದೆ. ಸಿಂಧು ಬಿ. ರೂಪೇಶ್‌ ಶನಿವಾರ ನೂತನ ಡಿಸಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳೆರಡೂ ಹುದ್ದೆಗಳಲ್ಲಿ ಮಹಿಳೆಯರಿರುವುದು ವಿಶೇಷ.

ಮಂಗಳೂರು(ಸೆ.08): ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಿಂಧು ಬಿ. ರೂಪೇಶ್‌ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ರೂಪಾ ನೂತನ ಜಿಲ್ಲಾಧಿಕಾರಿಯನ್ನು ಸ್ವಾಗತಿಸಿದರು. ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ್‌, ತಹಸೀಲ್ದಾರ್‌ ಗುರುಪ್ರಸಾದ್‌ ಮತ್ತಿತರರಿದ್ದರು.

ಈ ಸಂದರ್ಭ ಮಾತನಾಡಿದ ಸಿಂಧು, ಮಂಗಳೂರಿಗೆ ಈ ಹಿಂದೆಯೂ ಬಂದಿದ್ದೆ. ಇಲ್ಲಿ ಅನೇಕ ರೀತಿಯ ವೈವಿಧ್ಯತೆಗಳಿವೆ. ಸವಾಲುಗಳೂ ಇವೆ. ಬುದ್ಧಿವಂತರ ಜಿಲ್ಲೆಯೆಂದೇ ಹೆಸರಾಗಿರುವ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದರ ಆಧಾರದಲ್ಲಿ ಇನ್ನೇನು ಆಗಬೇಕು ಎಂಬ ಬಗ್ಗೆ ಗಮನ ಹರಿಸಲಿದ್ದೇನೆ ಎಂದು ಹೇಳಿದರು.

ಸಸಿಕಾಂತ್ ಸೆಂಥಿಲ್ ರಾಜೀನಾಮೆ, ಒಂದೇ ದಿನದಲ್ಲಿ ದಕ್ಷಿಣ ಕನ್ನಡಕ್ಕೆ ಹೊಸ ಡಿಸಿ

ಸಿಂಧು ಅವರು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಮಹಿಳಾ ಜಿಲ್ಲಾಧಿಕಾರಿ. ಈ ಹಿಂದೆ, 1989ರಲ್ಲಿ ರಂಜನಿ ಶ್ರೀಕುಮಾರ್‌ ಅವರು ಅವಿಭಜಿತ ದ.ಕ. ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿದ್ದರು. ಸಿಂದು ಬಿ. ರೂಪೇಶ್‌ ದ.ಕ. ಜಿಲ್ಲೆಯ 129ನೇ ಜಿಲ್ಲಾಧಿಕಾರಿ. ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳೆರಡೂ ಹುದ್ದೆಗಳಲ್ಲಿ ಮಹಿಳೆಯರಿರುವುದು ವಿಶೇಷ.

ಸಸಿಕಾಂತ್ ಸೆಂಥಿಲ್ ದಿಢೀರ್ ರಾಜೀನಾಮೆ ಹಿಂದಿನ ಅಸಲಿ ಸತ್ಯ ಬಹಿರಂಗ

ಈ ಕುರಿತು ಪ್ರತಿಕ್ರಿಯಿಸಿದ ನೂತನ ಜಿಲ್ಲಾಧಿಕಾರಿ, ದ.ಕ. ಜಿಲ್ಲೆಯ 2ನೇ ಮಹಿಳಾ ಜಿಲ್ಲಾಧಿಕಾರಿ ನಾನು ಎಂಬುದು ಸಂತೋಷದ ವಿಚಾರವೇ. ಆಡಳಿತಾತ್ಮಕವಾಗಿ ಪುರುಷ, ಮಹಿಳೆ ಇಬ್ಬರೂ ಒಂದೇ ಎಂದು ಹೇಳಿದರು.

click me!