ಬೆರಳೆಣಿಗೆ ಮಂದಿಯಿಂದ ಮಧ್ಯರಾತ್ರಿ ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ| ದೇವಸ್ಥಾನದ ಒಳಗೆ ಸರಳವಾಗಿ ನಡೆದ ಉತ್ಸವ| ಮೂರು ಶತಮಾನಗಳಿಗೂ ಹೆಚ್ಚು ಇತಿಹಾಸವಿರುವ ಕರಗ ಮಹೋತ್ಸವದ ಮೆರವಣಿಗೆ ಇದು ಎರಡನೇ ಬಾರಿಗೆ ಕೋವಿಡ್‌ನಿಂದ ರದ್ದು|
ಬೆಂಗಳೂರು(ಏ.28): ಐತಿಹಾಸಿಕ ಬೆಂಗಳೂರಿನ ಹೂವಿನ ಕರಗ ಶಕ್ತ್ಯೋತ್ಸವ ಹಾಗೂ ‘ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ’ ಮಂಗಳವಾರ ಮಧ್ಯರಾತ್ರಿ ಅತ್ಯಂತ ಸರಳವಾಗಿ ನಡೆದಿದೆ.
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನತಾ ಕರ್ಫ್ಯೂ ವಿಧಿಸಲಾಗಿದೆ. ಇದರಿಂದಾಗಿ ಸಂಪ್ರದಾಯವನ್ನು ಬಿಡಬಾರದು ಎಂಬ ಕಾರಣಕ್ಕಾಗಿ ಹೂವಿನ ಕರಗವನ್ನು ಬೆರಳೆಣಿಕೆ ಮಂದಿ ಸೇರಿ ಶಾಶ್ತ್ರೋಕ್ತವಾಗಿ ಆಚರಿಸಿದರು. ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಧರ್ಮರಾಯ ದೇವಸ್ಥಾನದ ಆವರಣದಲ್ಲಿ ಹೂವಿನ ಕರಗಕ್ಕೆ ಮಂಗಳವಾರ ಮಧ್ಯರಾತ್ರಿ 12.30ಕ್ಕೆ ಚಾಲನೆ ನೀಡಲಾಯಿತು. ಅರ್ಚಕ ಜ್ಞಾನೇಂದ್ರ ಕರಗ ಉತ್ಸವ ನಡೆಸಿಕೊಟ್ಟರು.
ಮಂಗಳವಾರ ಮುಂಜಾನೆಯಿಂದಲೇ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಿತು.
undefined
ದೇಗುಲ ಬಳಿಯೇ 39 ಕೊರೋನಾ ಕೇಸ್: ಬೆಂಗಳೂರು ಕರಗಕ್ಕೆ ಕರಿನೆರಳು!
ಬೆಳಗ್ಗೆ 10.30ಕ್ಕೆ ಕರಗ ಹೊರುವ ಪೂಜಾರಿ ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು ಕಬ್ಬನ್ ಪಾರ್ಕ್ನ ಕರಗದ ಕುಂಟೆಯಲ್ಲಿ ದ್ರೌಪದಿ ದೇವಿಗೆ ಗಂಗೆ ಪೂಜೆ ಸಲ್ಲಿಸಿದರು. ನಂತರ ರಾತ್ರಿ ಹೂವಿನ ಕರಗೋತ್ಸವ ಸರಳವಾಗಿ ನಡೆಯಿತು.
ಕರಗ ಶಕ್ತ್ಯೋತ್ಸವ ಎಂದರೆ ಶಕ್ತಿ ದೇವತೆಯಾದ ದ್ರೌಪದಿ ಕರಗ. ಕುಂಭದಲ್ಲಿ ದುರ್ಗೆಯನ್ನು ಆವಾಹಿಸಿ, ಪೂಜಿಸಿ, ಹೂವಿನಿಂದ ಅಲಂಕಾರಗೊಂಡ ಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಶ್ರೀ ಧರ್ಮರಾಯ ದೇವಸ್ಥಾನದ ಅರ್ಚಕರು ಗಣಾಚಾರಿ, ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ದೇವಸ್ಥಾನದಲ್ಲಿ ಎಲ್ಲ ರೀತಿಯ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಕತ್ತಿ ಹಿಡಿದ ವೀರಕುಮಾರರ ನಡುವೆ ಕರಗ ಹೊತ್ತು ಸಾಗಿದರು. ಮಧ್ಯರಾತ್ರಿ 12ಕ್ಕೆ ಕರಗ ಶಕ್ತ್ಯೋತ್ಸವ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ನೆರವೇರಿಸಿತು.
ಧರ್ಮರಾಯಸ್ವಾಮಿ ದೇವಸ್ಥಾನದ ಸುತ್ತಮುತ್ತ ಕೊರೋನಾ ಸೋಂಕಿತರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ದೇವಸ್ಥಾನದ ಒಳಗೆ ಸರಳವಾಗಿ ಉತ್ಸವ ನೆರವೇರಿಸಲಾಯಿತು. ಮೂರು ಶತಮಾನಗಳಿಗೂ ಹೆಚ್ಚು ಇತಿಹಾಸವಿರುವ ಕರಗ ಮಹೋತ್ಸವದ ಮೆರವಣಿಗೆ ಇದು ಎರಡನೇ ಬಾರಿಗೆ ಕೋವಿಡ್‌ನಿಂದ ರದ್ದಾಗಿದೆ.